ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಶೂನ್ಯ, ಆದರೂ ಸಾಧನಾ ಸಮಾವೇಶ ಮಾಡಿದ್ದಾರೆ. ಅದು ಸಾಧನೆಗಳ ಸಮಾವೇಶಕ್ಕಿಂತ ಜನರ ವೇದನೆಗಳ ಸಮಾವೇಶ ಆಗಬೇಕಿತ್ತು ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಕಲಬುರಗಿ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಬೆಂಗಳೂರಿನ ರಸ್ತೆಯಲ್ಲಿ ಜನರಿಗೆ ಓಡಾಡೋದಕ್ಕೆ ಆಗ್ತಿಲ್ಲ, ಚರಂಡಿ ಬ್ಲಾಕ್ ಆಗಿ ಕೆಟ್ಟ ನೀರು ರಸ್ತೆ ಮೇಲೆ ಮನೆಗೆ ನುಗ್ಗುತ್ತಿದೆ. ಜನ ಗಾಡಿಯಲ್ಲಿ, ನಡೆದುಕೊಂಡು ಹೋಗೊಕೆ ಆಗೋದಿಲ್ಲ. ಬಹುಶಃ ಸರ್ಕಾರ ವಾಟರ್ ಬೋಟ್ ಕೊಡಬೇಕಾಗುತ್ತೆ. ಮುಖ್ಯಮಂತ್ರಿ ಆ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಮೂಲ ಸೌಕರ್ಯ ವಂಚಿತ ಬೆಂಗಳೂರಿನ ದುರಾವಸ್ತೆಯನ್ನು ಮಳೆ ತೆರೆದಿಟ್ಟಿದೆ ಎಂದರು.
ಅನುದಾನವೇ ಬಿಡುಗಡೆಯಾಗುತ್ತಿಲ್ಲ:ಈ ಸರ್ಕಾರದಲ್ಲಿ ಶಾಸಕರಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ, ವಿಶೇಷವಾಗಿ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿಲ್ಲ, ಕಾಂಗ್ರೆಸ್ ನ ಪ್ರಿಯ ಶಾಸಕರ ಕ್ಷೇತ್ರಗಳಿಗೆ ಮಾತ್ರ ಹಣ ಬಿಡುಗಡೆ ಆಗ್ತಿದೆ. ಖರ್ಗೆಯವರ ಸಂಸ್ಥೆಗೆ 9 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಟೀಕಿಸಿದರು.
ಅಭಿವೃದ್ಧಿ ಮಾಡಿ ಜನರನ್ನ ಮೆಚ್ಚಿಸಿ ಸಾಧನೆ ಸಮಾವೇಶ ಮಾಡಬೇಕಿತ್ತು, ಹಕ್ಕು ಪತ್ರ ಕೊಡ್ತೇವೆ ಅಂತ ಕರೆತಂದು ಯಾವ ಹಕ್ಕು ಪತ್ರ ಕೊಟ್ಟಿಲ್ಲವೆಂದು ಜನ ಹೇಳ್ತಿದ್ದಾರೆ. 142 ಆಶ್ವಾಸನೆ ಪೂರೈಸಿದ್ದೇವೆ ಅಂತ ಸಿದ್ದರಾಮಯ್ಯ ಹೇಳಿದ್ದರು. 142 ಆಶ್ವಾಸನೆ ಯಾವುದು ಅಂತಾ ಸಿದ್ದರಾಮಯ್ಯನವರೇ ಹೇಳಬೇಕೆಂದರು.ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಔಷಧಿ ಕೇಂದ್ರದವರಿಗೆ ಅನುಮತಿ ಕೊಡದ ಸರಕಾರದ ನಡೆಯನ್ನು ಟೀಕಿಸಿದ ಅವರು ಜನ ಔಷದಿ ಕೇಂದ್ರ ಬೇಡ ಅಂದ್ರೆ ರಾಜ್ಯ ಸರ್ಕಾರಕ್ಕೆ ಕೇಂದ್ರದ ಅನುದಾನ ಯಾಕೆ ಬೇಕು .? ಅನುದಾನ ಬೇಡ ಅಂತ ಹೇಳಲಿ ಎಂದು ಸವಾಲ್ ಹಾಕಿದರು.
ರಾಹುಲ್ ಗಾಂಧಿಗೆ ಮತಿ ಭ್ರಮಣೆ ಆಗಿದೆಯೋ ಏನೋ ಗೊತ್ತಿಲ್ಲ ? ಪಾಕಿಸ್ತಾನದವರು ನಮ್ಮ ಎಷ್ಟು ಪ್ಲೈಟ್ ಹೊಡೆದುರುಳಿಸಿದ್ರು ಅಂತಾ ಕೇಳ್ತಾರೆ, ರಾಹುಲ್ ಅನ್ ಫಿಟ್ ಫಾರ್ ಅಪೋಜಿಷನ್ ಲೀಡರ್ ಎಂದು ಛಲವಾದಿ ಟೀಕಿಸಿದರು. ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಚುಟ್ ಪುಟ್ ಯುದ್ದ ಅಂತಾ ಹೇಳಿದ್ದಾರೆ, ಹಾಗಾದರೆ ನೀವು ಯಾರ ಪರ ಇದ್ದೀರಿ ಅಂತಾ ಹೇಳಬೇಕು ಎಂದು ಖರ್ಗೆಯವರಿಗೆ ಆಗ್ರಹಿಸಿದರು.ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ
ಪ್ರಿಯಾಂಕ್ ಖರ್ಗೆ ಮಾತೆತ್ತಿದ್ದರೆ ಪ್ರಧಾನ ಮಂತ್ರಿಯವರ ಬಗ್ಗೆ ಮಾತಾಡ್ತಾರೆ, ಪ್ರಿಯಾಂಕ್ ಖರ್ಗೆಯವರೆ, ನೀವೇನಾದ್ರು ಕೇಳಬೇಕಾದ್ರೆ ನಿಮ್ಮ ಪ್ರಶ್ನೆಗಳನ್ನು ನಿಮ್ಮ ತಂದೆಯವರಿಗೆ ಹೇಳಿ ಅವರು ಮೋದಿಯವರಿಗೆ ಕೇಳ್ತಾರೆ, ಮಲ್ಲಿಕಾರ್ಜುನ್ ಖರ್ಗೆಯವರು ಅಷ್ಟು ಬುದ್ದಿವಂತರು ಅಲ್ವಾ ? ಆನೆ ಹೋಗ್ತಿದ್ದರೆ ನಾಯಿ ಬೊಗಳಿದಂತೆ ಬೌ ಬೌ ಅಂತಾ ಬೊಗಳ್ತಿರಾ ಎಂದು ಹರಿಹಾಯ್ದರು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಪ್ರಕರಣದ ಬಗ್ಗೆ ಮಾತನಾಡಿದ ಅವರು ಇಡಿ, ಸಿಬಿಐ, ಐಟಿ .. ಅವರ ಕೆಲಸ ಅವರು ಮಾಡ್ತಿದಾರೆ, ಯಾರನ್ನ ಟಾರ್ಗೆಟ್ ಮಾಡ್ತಿಲ್ಲ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲರ ಮೇಲೆ ತನಿಖಾ ಸಂಸ್ಥೆಗಳು ದಾಳಿ ಮಾಡ್ತಿವೆ ಎಂದರು. ಕಾಂಗ್ರೆಸ್ ಕಾಲದಲ್ಲಿ ಬಿಜೆಪಿಯವರ ಮೇಲೆ ದಾಳಿ ಮಾಡಿಸ್ತಿದ್ರು. ನಮ್ಮ ಕಾಲದಲ್ಲಿ ಈ ರೀತಿ ಆದರೆ ಹಾಗೇ ಮಾತನಾಡೋದು ಸಹಜ. ಏನು ಸಿಗಲಿಲ್ಲ ಅಂದರೆ ಯಾಕೆ ಭಯ ಪಡ್ತೀರ ? ಎಂದು ಪ್ರಶ್ನಿಸಿದರು.