ತಾಕತ್ತಿದ್ದರೆ ಕಾಂಗ್ರೆಸ್ಸಿಗರು ನಾಲೆ ಕಾಮಗಾರಿ ತಡೆಹಿಡಿಯಲಿ: ಮಾಜಿ ಶಾಸಕ ಎಚ್.ಎಸ್.ಶಿವಶಂಕರ್

| Published : Jul 03 2025, 12:32 AM IST

ತಾಕತ್ತಿದ್ದರೆ ಕಾಂಗ್ರೆಸ್ಸಿಗರು ನಾಲೆ ಕಾಮಗಾರಿ ತಡೆಹಿಡಿಯಲಿ: ಮಾಜಿ ಶಾಸಕ ಎಚ್.ಎಸ್.ಶಿವಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಬಲದಂಡೆ ನಾಲೆ ಸೀಳಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಬಹು ಗ್ರಾಮಗಳಿಗೆ ನೀರು ಹರಿಸುವ ಅವೈಜ್ಞಾನಿಕ ಕಾಮಗಾರಿಯನ್ನು ತಾಕತ್ತಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಹರಿಹರ ಕಾಂಗ್ರೆಸ್ ಮುಖಂಡರು ತಮ್ಮದೇ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹಾಕಿ ತಡೆಹಿಡಿಯಲಿ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಹರಿಹರ

ಭದ್ರಾ ಬಲದಂಡೆ ನಾಲೆ ಸೀಳಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಬಹು ಗ್ರಾಮಗಳಿಗೆ ನೀರು ಹರಿಸುವ ಅವೈಜ್ಞಾನಿಕ ಕಾಮಗಾರಿಯನ್ನು ತಾಕತ್ತಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಹರಿಹರ ಕಾಂಗ್ರೆಸ್ ಮುಖಂಡರು ತಮ್ಮದೇ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹಾಕಿ ತಡೆಹಿಡಿಯಲಿ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸವಾಲು ಹಾಕಿದರು.

ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹರಿಹರ ತಾಲೂಕು ಕಾಂಗ್ರೆಸ್ ಮುಖಂಡರು ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿ ಕಲ್ಲು ಮಣ್ಣು ಹಾಕುವುದು ಹಾಗೂ ಪ್ರತಿಭಟನೆ ಮಾಡುವ ನಾಟಕ ಬಿಡಬೇಕು. ಕಾಟಾಚಾರದ ಮತ್ತು ವೈಯಕ್ತಿಕ ಪ್ರತಿಭಟನೆಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದು ಕ್ಷೇತ್ರದ ಜನರು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್‌ ಅವರನ್ನು ಕುಟುಕಿದರು.

2020ರಲ್ಲಿ ಬಿಜೆಪಿ ಸರ್ಕಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಜಾಕ್‌ವೆಲ್ ನಿರ್ಮಿಸಿ ಪಂಪ್ ಮೂಲಕ ಕಚ್ಚಾ ನೀರನ್ನು ತೆಗೆದುಕೊಂಡು ಹೋಗಲು 9-11- 2020ರಂದು ಬಿಜೆಪಿ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅನುಮೋದನೆ ನೀಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಇದ್ದಕ್ಕಿದ್ದಂತೆ ಕಾಮಗಾರಿ ಕೈಗೆತ್ತಿಕೊಂಡಿರುವುದೇಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ಹಗಲು ಹೊತ್ತಲ್ಲೇ ಕೊಲೆ, ಸುಲಿಗೆಗಳು ನಡೆಯುತ್ತಿವೆ. ಜನರಿಗೆ ರಕ್ಷಣೆಯೇ ಇಲ್ಲದಂಗಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಕೋಮು, ಒಂದು ಧರ್ಮದ ಪರವಾಗಿ ಕೆಲಸ ಮಾಡುತ್ತಿದೆ ಎಂದು ದೂರಿದರು.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭ ರೈತರ ಸಾಲ ಮನ್ನಾ ಮೂಲಕ ರೈತಪರ ಸರ್ಕಾರ ನಡೆಸಿದರು. ಶಾಲಾ- ಕಾಲೇಜುಗಳು ನಿರ್ಮಾಣ ಮಾಡಿದ್ದಾರೆ. ಇಂದಿನ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಹಣ ನಾವು ಕೊಟ್ಟಾಗ ತೆಗೆದುಕೊಳ್ಳಬೇಕು ಎಂದು ಜನರ ಬಳಿ ಭಿಕ್ಷೆ ಬೇಡಿ, ಮತ ಪಡೆದು ಅಧಿಕಾರಕ್ಕೆ ಬಂದವರು ಹೇಳುತ್ತಿದ್ದಾರೆ ಎಂದರು.

ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ, ಸದಸ್ಯರಾದ ವಿರುಪಾಕ್ಷಿ, ಬಿ ಅಲ್ತಾಫ್, ಮಾಜಿ ಅಧ್ಯಕ್ಷ ಬಿ.ಸುರೇಶ್, ಮುಖಂಡರಾದ ಸಿರಿಗೇರೆ ಜಿ.ಎಂ ಪರಮೇಶ್ ಗೌಡ್ರು, ಸದಾನಂದ, ರಮೇಶ್, ಮಾರುತಿ ಬೇಡರ, ಬಾವಿಕಟ್ಟಿ ಮಲ್ಲಿಕಾರ್ಜುನ್, ಖಡರನಾಯಕನಹಳ್ಳಿ ಅಶೋಕ್, ಜಿ ನಂಜಪ್ಪ, ಅಡಿಕೆ ಪ್ರೇಮ್ ಕುಮಾರ್, ಮಹದೇವಪ್ಪ ಬಾನೊಳ್ಳಿ ರುದ್ರೇಶ್ ಬಸವರಾಜಪ್ಪ ಸಂಗಮೇಶ್ ಮಂಜುಳಮ್ಮ, ಆಸಿಫ್ , ನಾಗರಾಜ್ ಸೇರಿದಂತೆ ಇತರರಿದ್ದರು.

4ರಂದು ಪ್ರತಿಭಟನೆ

ಭದ್ರಾ ಬಲದಂಡೆ ನಾಲೆ ಸೀಳಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಬಹು ಗ್ರಾಮಗಳಿಗೆ ನೀರು ಹರಿಸುವ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಜುಲೈ 4ರಂದು ಹರಿಹರದ ಶಿವಮೊಗ್ಗ ರಸ್ತೆಯ ಫಕೀರ ಸ್ವಾಮಿ ಮಠದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಎಸ್. ಶಿವಶಂಕರ್ ಹೇಳಿದರು. ಈ ಪ್ರತಿಭಟನೆ ಪಕ್ಷಾತೀತವಾಗಿದೆ. ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಹಾಗೂ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಸ್.ರಾಮಪ್ಪ, ಎಂಎಲ್ಎ ಆಕಾಂಕ್ಷಿತರು ಪಾಲ್ಗೊಳ್ಳಬೇಕೆಂದು ಮಾಧ್ಯಮದ ಮೂಲಕ ಆಹ್ವಾನ ನೀಡಿದರು.