ಕಾಂಗ್ರೆಸ್ಸಿನವರಿಗೆ ಸಾವರ್ಕರ್‌ರನ್ನು ಬೈಯದಿದ್ದರೆ ಸಮಾಧಾನವಾಗಲ್ಲ: ಶೆಟ್ಟರ್‌

| Published : Oct 04 2024, 01:08 AM IST

ಕಾಂಗ್ರೆಸ್ಸಿನವರಿಗೆ ಸಾವರ್ಕರ್‌ರನ್ನು ಬೈಯದಿದ್ದರೆ ಸಮಾಧಾನವಾಗಲ್ಲ: ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ತುಷ್ಟೀಕರಣಗೊಳಿಸುವುದಕ್ಕಾಗಿ ಪದೇ-ಪದೇ ವೀರ ಸಾವರ್ಕರ್ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ.

ಹುಬ್ಬಳ್ಳಿ:

ಕಾಂಗ್ರೆಸ್ಸಿನವರಿಗೆ ವೀರ ಸಾವರ್ಕರ್ ಅವರನ್ನು ಬೈಯ್ಯದೇ ಇದ್ದರೆ ಸಮಾಧಾನ ಆಗುವುದಿಲ್ಲ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಸಾವರ್ಕರ್ ಗೋಮಾಂಸ ಸೇವಿಸಿದ್ದರು ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ತುಷ್ಟೀಕರಣಗೊಳಿಸುವುದಕ್ಕಾಗಿ ಪದೇ-ಪದೇ ವೀರ ಸಾವರ್ಕರ್ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಬ್ರಿಟಿಷರ ವಿರುದ್ಧ ದಿಟ್ಟ ಹೋರಾಟ ಮಾಡಿದ ಸಾವರ್ಕರ್‌ ಅವರು ಪ್ರಬಲ ಹಿಂದುತ್ವವಾದಿಗಳು. ಅವರಿಗೆ ವಿಧಿಸಿದ ಶಿಕ್ಷೆಯನ್ನು ಸೋ ಕಾಲ್ಡ್ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರಿಗೂ ನೀಡಿಲ್ಲ ಎಂದು ಕುಟುಕಿದರು.

ಅಲ್ಪಸಂಖ್ಯಾತರನ್ನು ಮತಬ್ಯಾಂಕ್‌ಗೆ ಬಳಸಿಕೊಂಡು ಬರುತ್ತಿರುವ ಕಾಂಗ್ರೆಸ್, ಹಿಂದೂ-ಮುಸ್ಲಿಂರನ್ನು ಪ್ರತ್ಯೇಕವಾಗಿಡುವ ಪ್ರಯತ್ನ ಮಾಡುತ್ತಿದೆ. ಇದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು ಎಂದರು.

ಹಾಸ್ಯಾಸ್ಪದ ಸಂಗತಿ:

ಮುಡಾ ಹಗರಣದ ಬಗ್ಗೆ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೈಟ್ ವಾಪಸ್ ಕೊಟ್ಟಿದ್ದಾರೆ. ಈ ಪ್ರಕ್ರಿಯೆ ಮುಖ್ಯಮಂತ್ರಿಗಳ ಅಣತಿಯಂತೆ ನಡೆದಿದೆ. ಅವರು ಮಾತ್ರ ಇದು ತಮ್ಮ ಪತ್ನಿಯ ನಿರ್ಧಾರ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿ. ಸೈಟ್ ವಾಪಸ್‌ ಕೊಟ್ಟರೆ ತನಿಖೆ ನಿಲ್ಲುವುದಿಲ್ಲ. ಎಲ್ಲವೂ ಕಾನೂನು ಪ್ರಕಾರ ನಡೆಯುತ್ತದೆ ಎಂದು ಶೆಟ್ಟರ್‌ ಹೇಳಿದರು.

ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದವರು, ಅದನ್ನು ಅರಿತು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಎಲ್ಲಿ ನಾನು ರಾಜೀನಾಮೆ ನೀಡಿದರೆ ಮರಳಿ ಮುಖ್ಯಮಂತ್ರಿ ಆಗುವುದಿಲ್ಲ. ತಮ್ಮ ಸ್ಥಾನವನ್ನು ಯಾರಾದರೂ ಕಬಳಿಸುತ್ತಾರೆ ಎನ್ನುವ ಭಯ ಅವರಲ್ಲಿದೆ. ಆದರೆ, ಕಾಂಗ್ರೆಸ್‌ಗೆ ಅನಿವಾರ್ಯವಾಗಿ ಅವರಿಂದ ರಾಜೀನಾಮೆ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ಸಿದ್ದರಾಮಯ್ಯ ರಾಜೀನಾಮೆ ನಂತರ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದರ ಕುರಿತು ಕಾಂಗ್ರೆಸ್ ಪಕ್ಷದೊಳಗೆ ಪ್ರತ್ಯೇಕ ಸಭೆಗಳು ನಡೆಯುತ್ತಿವೆ. ಯಾವ ಶಾಸಕರು, ಯಾರ ಜತೆಗಿದ್ದಾರೆ? ಎನ್ನುವ ಚರ್ಚೆ ಜೋರಾಗಿದೆ. ಇದರಿಂದ ಕಾಂಗ್ರೆಸ್‌ನ ಕೆಲ ಶಾಸಕರು ಸಾಕಷ್ಟು ಅಸಮಾಧಾನಗೊಂಡಿದ್ದಾರೆ ಎಂದರು.

ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಎಲ್ಲಿಯೂ ಎಂದಿಗೂ ಹೇಳಿಲ್ಲ. ಇದೆಲ್ಲ ಮಾಧ್ಯಮದವರ ಸೃಷ್ಟಿ ಎಂದು ಸಂಸದ ಜಗದೀಶ ಶೆಟ್ಟರ ಹೇಳುವ ಮೂಲಕ ತಮ್ಮ ನಡೆಯ ವಿರುದ್ಧವೇ ಗುರುವಾರ ಉಲ್ಟಾ ಹೊಡೆದರು.