ಸಾರಾಂಶ
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಅವರು, ಸಂಘ, ಸಂಘಸ್ಥಾನ, ಗಣವೇಷ ಇವು ನಮಗೆ ಪ್ರಚಾರದ ಸರಕಲ್ಲ. ಅದು ಸಂಸ್ಕಾರ, ಅದು ನಮ್ಮ ಶ್ರದ್ಧೆಯ ಭಾಗ. ‘ಸ್ವಯಂಸೇವಕತ್ವ’ ನಮ್ಮ ಸಂಘ ನೀಡಿದ ನಿರಂತರ ಆಸ್ತಿ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳಸಂಘದೊಂದಿಗೆ ತಮಗೆ ಇರುವ ನಂಟು ಪ್ರಚಾರಕ್ಕಾಗಿ ಅಲ್ಲ, ಅದು ಸಂಸ್ಕಾರದ ಭಾಗವೆಂಬುದಾಗಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಅವರು, ಸಂಘ, ಸಂಘಸ್ಥಾನ, ಗಣವೇಷ ಇವು ನಮಗೆ ಪ್ರಚಾರದ ಸರಕಲ್ಲ. ಅದು ಸಂಸ್ಕಾರ, ಅದು ನಮ್ಮ ಶ್ರದ್ಧೆಯ ಭಾಗ. ‘ಸ್ವಯಂಸೇವಕತ್ವ’ ನಮ್ಮ ಸಂಘ ನೀಡಿದ ನಿರಂತರ ಆಸ್ತಿ.
ತಂದೆ ದಿ. ವಾಸುದೇವ ಅವರು ಸಂಘದ ಶ್ರದ್ಧೆಯ ಸ್ವಯಂಸೇವಕರಾಗಿದ್ದು, ಅವರೇ ನನ್ನನ್ನು ಸಂಘದ ಮಡಿಲಿಗೆ ಕರೆತಂದರು ಎಂದು ಶಾಸಕರು ನೆನಪಿಸಿಕೊಂಡಿದ್ದಾರೆ.ನಾನು ವಾಸುದೇವ ಸುನೀಲ್ ಕುಮಾರ್ ಮತ್ತು ನನ್ನ ಮಗ ದತ್ತಾತ್ರೇಯ ಸುನೀಲ್ ಕುಮಾರ್ ಕೂಡ ಸಂಘದ ಸ್ವಯಂಸೇವಕ. ನಮ್ಮ ಕುಟುಂಬದಂತೆ ಪೀಳಿಗೆಯಿಂದ ಪೀಳಿಗೆಗೆ ಸ್ವಯಂ ಸೇವಕತ್ವವನ್ನು ಪರಂಪರೆ ಹಾಗೂ ಬಳುವಳಿಯಾಗಿ ಉಳಿಸಿಕೊಂಡು ಬಂದಿರುವ ಲಕ್ಷಾಂತರ ಕುಟುಂಬಗಳು ಈ ದೇಶದಲ್ಲಿವೆ. ಆದರೆ ನಮಗ್ಯಾರಿಗೂ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕೆಂಬ ಉದ್ದೇಶ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.ಇತ್ತೀಚೆಗೆ ಕೆಲವು ವಲಯಗಳಿಂದ ‘ನಿಮ್ಮ ಮಕ್ಕಳು ಸಂಘಕ್ಕೆ ಹೋಗುತ್ತಾರಾ?’ ಎಂಬ ಪ್ರಶ್ನೆ ಉದ್ಭವಿಸಿರುವ ಹಿನ್ನೆಲೆಯಲ್ಲಿ, ಶಾಸಕರು ಪ್ರತಿಕ್ರಿಯೆ ನೀಡುತ್ತಾ, ನಾನು ನನ್ನ ಮಗನನ್ನು ಸ್ವಯಂಸೇವಕನಾಗಿಯೇ ರೂಪಿಸುತ್ತೇನೆ, ಶಾಸಕನಾಗಿಯಲ್ಲ. ಅಧಿಕಾರ ನನ್ನಪ್ಪನಿಂದ ನನಗೆ, ನನ್ನಿಂದ ನನ್ನ ಮುಂದಿನ ಪೀಳಿಗೆಗೆ ಎಂದು ಯೋಚಿಸುವ ಕುಟುಂಬ ರಾಜಕಾರಣದ ಪಳೆಯುಳಿಕೆಗಳಿಗೆ ಈ ಪರಂಪರೆ ಅರ್ಥವಾಗುವುದೇ ಇಲ್ಲ. ಸಂಘದ ಸಂಸ್ಕಾರ, ಶ್ರದ್ಧೆ ಮತ್ತು ಸೇವಾತತ್ವವನ್ನು ರಾಜಕೀಯಕ್ಕಿಂತ ಮೇಲಾಗಿ ಪರಿಗಣಿಸುವ ಮನೋಭಾವವೇ ನಿಜವಾದ ರಾಷ್ಟ್ರೀಯತೆ ಎಂಬ ಸಂದೇಶವನ್ನು ಶಾಸಕರು ತಮ್ಮ ಹೇಳಿಕೆಯ ಮೂಲಕ ಹಂಚಿಕೊಂಡಿದ್ದಾರೆ.