ದೇವರಕನಗೋನಹಳ್ಳಿಯಲ್ಲಿ ಆಂಜನೇಯಸ್ವಾಮಿಯ ಪ್ರತಿಷ್ಠಾಪನೆ

| Published : Mar 29 2024, 12:46 AM IST

ದೇವರಕನಗೋನಹಳ್ಳಿಯಲ್ಲಿ ಆಂಜನೇಯಸ್ವಾಮಿಯ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವರ ಕನಗೋನಹಳ್ಳಿಯಲ್ಲಿ 70 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆಂಜನೇಯಸ್ವಾಮಿ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ದೇವರ ಕನಗೋನಹಳ್ಳಿಯಲ್ಲಿ 70 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆಂಜನೇಯಸ್ವಾಮಿ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ದಿನ ನಿತ್ಯದ ಜಂಜಾಟದ ಬದುಕಿನ ನಡುವೆ ಪ್ರತಿಯೊಬ್ಬ ಮನುಷ್ಯ ದೇವರ ಮೊರೆ ಹೋಗಬೇಕು. ಯೋಗ, ಧ್ಯಾನ, ವ್ಯಾಯಾಮದಿಂದ ಮನುಷ್ಯನ ಆರೋಗ್ಯ ವೃದ್ಧಿಸಲಿದೆ ಎಂದರು.

ಕನಗೋನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವನ್ನು ಬಹಳ ಸುಂದರವಾಗಿ ನಿರ್ಮಿಸಲಾಗಿದೆ. ಗ್ರಾಮಸ್ಥರು ಪ್ರತಿನಿತ್ಯವೂ ದೇವಸ್ಥಾನದ ಬಾಗಿಲು ತೆರೆದು ಪೂಜೆ, ಪುನಸ್ಕಾರಗಳನ್ನು ನೆರೆವೇರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತಸಂಘದ ನಾಯಕಿ ಸುನಿತಾ ಪುಟ್ಟಣ್ಣಯ್ಯ, ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು, ಜಿಪಂ ಮಾಜಿ ಸದಸ್ಯರಾದ ಕೆ.ಟಿ. ಗೋವಿಂದೇಗೌಡ, ನಾಗಮ್ಮ ಪುಟ್ಟರಾಜು, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಉದ್ಯಮಿ, ಸಮಾಜ ಸೇವಕ ಕನಗೋನಹಳ್ಳಿ ಪರಮೇಶ್ ಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ಎಲ್.ಸಿ. ಮಂಜುನಾಥ್, ಕಾಂಗ್ರೆಸ್ ಯುವ ಮುಖಂಡ ದೀಪು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ಸುಂಕಾತೊಣ್ಣೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅತ್ತಿನಗಾನಹಳ್ಳಿ ಜಗದೀಶ್, ಊರಿನ ಯಜಮಾನರು, ಯುವಕರು ಇತರರಿದ್ದರು. ಈ ವೇಳೆ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಮಂಗಳವಾರ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪಂಚಗವ್ಯ, ಶುದ್ಧಿ ಸ್ಥಳ ಸುದ್ದಿ (ಮುಖ್ಯ ಪ್ರಾಣ), ಶ್ರೀ ಆಂಜನೇಯ ದೇವರ ಅಷ್ಟದಿಗ್ಬಂಧನ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷಷ್ನಹೋಮ, ಸುದರ್ಶನ ಹೋಮ, ಅಸ್ಟದಿಕ್ಪಂ, ಪೂರ್ಣಾಹುತಿ, ಮಹಾಪೂಜೆ, ಕಳಸ ಸ್ಥಾಪನೆ ನಡೆಯಿತು. ವೀರಗಾಸೆ, ತಮಟೆ ವಾದ್ಯ ಸೇರಿ ವಿವಿಧ ಜಾನಪದ ಕಲಾಮೇಳಗಳು ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಗ್ರಾಮದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರಗೊಳಿಸಲಾಗಿತ್ತು.

ಬುಧವಾರ ಗಣಪತಿ ಹೋಮ, ಪ್ರತಿಷ್ಠಾಹೋಮ ನಡೆಸಲಾಯಿತು. ದೇವರ ಪ್ರಾಣ ಪ್ರತಿಷ್ಠಾಪನೆ ನಂತರ ಶ್ರೀ ಆಂಜನೇಯ ದೇವರ ಗಾಯತ್ರಿ ಮಂತ್ರ ಹೋಮ, ಪುರ್ಣಾಹುತಿ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಮೇಲುಕೋಟೆ, ಹುಣಸೇತೋಪು, ಬಳಿಘಟ್ಟ, ಪಿ.ಹೊಸಹಳ್ಳಿ, ಗೌರಿಕಟ್ಟೆ ಸರ್ಕಲ್, ಮದೇನಹಳ್ಳಿ, ನಾರಾಣಪುರ, ಬಿ.ಕೊಡಗಹಳ್ಳಿ, ಎಂ.ಆರ್.ಕೊಪ್ಪಲು, ರಾಂಪುರ, ಪಗಡೆಕಲ್ಲಹಳ್ಳಿ, ಜಿ.ಸಿಂಗಾಪುರ, ಗುಜಗೋನಹಳ್ಳಿ, ತಾಳೇಕೆರೆ, ಚೆಲ್ಲರಹಳ್ಳಿಕೊಪ್ಪಲು, ಅಂದಾನಿಗೌಡನಕೊಪ್ಪಲು ಯಜಮಾನರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.