ಉಜ್ಜಯಿನಿ ಮರುಳಸಿದ್ದೇಶ್ವರ ಶಿಖರ ತೈಲಾಭಿಷೇಕ

| Published : May 14 2024, 01:04 AM IST / Updated: May 14 2024, 01:05 AM IST

ಸಾರಾಂಶ

ರಥೋತ್ಸವದ ನಂತರದ ಎರಡನೇ ದಿನದ ಸದ್ಧರ್ಮ ಪೀಠದ ವಾರ್ಷಿಕ ಧಾರ್ಮಿಕ ಕೈಂಕರ್ಯದಂತೆ ಶಿಖರ ತೈಲಾಭಿಷೇಕ ನೆರವೇರಿತು.

ಕೊಟ್ಟೂರು: ಅದ್ಧೂರಿಯ ಶಿಖರ ತೈಲಾಭಿಷೇಕಕ್ಕೆ ತಾಲೂಕಿನ ಉಜ್ಜಯಿನಿ ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯ ದೇವಸ್ಥಾನ ಪಾತ್ರವಾಗಿದೆ. ರಾಷ್ಟ್ರದಲ್ಲಿಯೇ ವಿಶಿಷ್ಟ ಆಚರಣೆಯ ಈ ಧಾರ್ಮಿಕ ಪರಂಪರೆಗೆ ಉಜ್ಜಯಿನಿ ಸುಕ್ಷೇತ್ರ ಸೋಮವಾರ ಸಂಜೆ ೫.೫೮ಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿನ ದೇವರ ಮೂರ್ತಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಜಲಾಭಿಷೇಕ ಮಾಡುವುದು ರೂಢಿಯಲ್ಲಿದ್ದರೆ ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿಗೆ ತೈಲಾಭಿಷೇಕ ನೆರವೇರುವುದು ನಿಜಕ್ಕೂ ವೈಶಿಷ್ಟ ಪೂರ್ಣ.

ಸಂಜೆಯ ಗೋಧೂಳಿ ಸಮಯದ ಸಂಜೆ ೫.೫8ರ ಸುಮಾರಿಗೆ ಈ ಶಿಖರ ತೈಲಾಭಿಷೇಕ ನೆರವೇರುತ್ತಿದ್ದಂತೆ ನೆರೆದಿದ್ದ ಅಪಾರ ಸಂಖ್ಯೆಯ ಜನಸ್ತೋಮ ಸ್ವಾಮಿಗೆ ಜಯ-ಜಯಕಾರ ಅರ್ಪಿಸಿ ಬಾಳೆಹಣ್ಣುಗಳನ್ನು ರಾಶಿಯೋಪಾದಿಯಲ್ಲಿ ತೂರಿ ತಮ್ಮ ಭಕ್ತಿ ಸಮರ್ಪಿಸಿದರು.

ರಥೋತ್ಸವದ ನಂತರದ ಎರಡನೇ ದಿನದ ಸದ್ಧರ್ಮ ಪೀಠದ ವಾರ್ಷಿಕ ಧಾರ್ಮಿಕ ಕೈಂಕರ್ಯದಂತೆ ಶಿಖರ ತೈಲಾಭಿಷೇಕ ನೆರವೇರಿತು. ಎಂದಿನಂತೆ ಜರ್ಮಲಿ ಪಾಳೆಗಾರ ಮನೆತನದವರು ಮಣ್ಣಿನ ಕುಡಿಕೆಯಲ್ಲಿ ಕಳುಹಿಸಿದ್ದ ತೈಲವನ್ನು ಆಯಾಗಾರ ಬಳಗದವರು ಶಿಖರದ ಮೇಲೆ ಸುರಿದರು. ನಂತರ ಇತರ ಭಕ್ತರು ಡಬ್ಬಗಟ್ಟಲೇ ಭಕ್ತಿಯ ಕಾಣಿಕೆಯಾಗಿ ನೀಡಿದ ಎಣ್ಣೆಯನ್ನು ಅಡಿಯಿಂದ ಮುಡಿವರೆಗೆ ಎರೆಯಲಾಯಿತು.

ಶಾಪ ವಿಮೋಚನೆಯ ಕಾರಣಕ್ಕಾಗಿ ಜರ್ಮಲಿ ಪಾಳೆಗಾರ ವಂಶಸ್ಥರು ಗುರುಮರುಳಸಿದ್ದೇಶ್ವರಗೆ ಎಣ್ಣೆ ಕಳುಹಿಸಿಕೊಡುವ ಪದ್ಧತಿಯಂತೆ ಪಾಳೆಗಾರ ಮನೆತನದ ಕೆಲವರು ಪಾದಯಾತ್ರೆ ಮೂಲಕ ಎರಡು ಮಡಿಕೆಯ ಕೊಡಗಳಲ್ಲಿ ಎಣ್ಣೆಯನ್ನು ದೂರದ ಜರ್ಮಲಿಯಿಂದ ಉಜ್ಜಯಿನಿಗೆ ಸೋಮವಾರದ ಮಧ್ಯಾಹ್ನದ ಅವಧಿಗೆ ತಂದರು.

ನಂತರ ಈ ಎಣ್ಣೆಯನ್ನು ಸದ್ಧರ್ಮ ಪೀಠದ ಆಯಗಾರ ಬಳಗದವರು ಬರಮಾಡಿಕೊಂಡು ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತಂದರು.

ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮತ್ತು ಕಾಶೀ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಣ್ಣೆ ಗಡಿಗೆಗಳಿಗೆ ಆಶೀರ್ವದಿಸಿ ಶಿಖರಕ್ಕೆ ಅಭಿಷೇಕ ನೆರವೇರಿಸಲು ಸಂಜೆ ೫.೫೫ರ ಸುಮಾರಿಗೆ ಹಸಿರು ನಿಶಾನೆ ತೋರಿದರು.

ಈ ಘಳಿಗೆಯಿಂದಲೇ ಶಿಖರಕ್ಕೆ ಎಣ್ಣೆಯಿಂದ ಮಜ್ಜನಗೊಳಿಸುವ ಕಾರ್ಯ ಸುಮಾರು ಮುಕ್ಕಾಲು ಗಂಟೆಯವರೆಗೆ ನಡೆಯಿತು. ಎಣ್ಣೆಯ ಮಜ್ಜನದಿಂದ ಶಿಖರ ಸಂಪೂರ್ಣ ಒದ್ದೆಯಾಗಿತು. ಈ ಬಗೆಯ ಶಿಖರದ ಮೇಲೆ ನಿಂತೆ ಸುಮಾರು ೨೦ಕ್ಕೂ ಹೆಚ್ಚು ಆಯಗಾರ ಬಳಗದವರು ಕೆಳಗೆ ಜಾರಿ ಬೀಳುವ ಅಪಾಯವನ್ನು ಲೆಕ್ಕಿಸದೇ ತೈಲಾಭಿಷೇಕ ನೇರವೇರಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ನೆರದಿದ್ದ ಎಲ್ಲರನ್ನು ಬೆರಗುಗೊಳಿಸಿತು.

ವಿವಿಧ ಮಠದ ಶಿವಾಚಾರ್ಯರಾದ ಹರಪನಹಳ್ಳಿಯ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿ, ಕುರುಗೋಡು ರಾಘವಾಂಕ ಶಿವಾಚಾರ್ಯ ಸ್ವಾಮೀಜಿ, ಚಾನುಕೋಟಿ ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ , ನಂದಿಪುರದ ಮಹೇಶ್ವರ ಸ್ವಾಮೀಜಿ, ಮತ್ತಿತರ ಅಸಂಖ್ಯಾತ ಶಿವಾಚಾರ್ಯ ಸ್ವಾಮೀಜಿಗಳು ಇದ್ದರು.

ಶ್ರೀ ಸ್ವಾಮಿಯ ತೈಲಾಭಿಷೇಕ ನೆರವೇರಿಸಿದರೆ ಶನಿದೋಷ ನಿವಾರಣೆಯಾಗುವ ಸಲುವಾಗಿ ಈ ಪರಂಪರೆ ಮುಂದುವರೆದಿದೆ. ಭಕ್ತರಿಗೆ ಒಳಿತಾಗಿ ಅವರ ಕಷ್ಟಗಳು ನಿವಾರಣೆಯಾಗುತ್ತದೆ. ಈ ಕಾರಣಕ್ಕಾಗಿ ಈ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಿರುವುದೇ ಸಾಕ್ಷಿ ಎನ್ನುತ್ತಾರೆ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು.

ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಪೀಠದಲ್ಲಿ ನಡೆಯುವ ಈ ವಿಶೇಷ ತೈಲಾಭಿಷೇಕ ಆಚರಣೆ ನೋಡುವುದು ನಿಜಕ್ಕೂ ಪುಣ್ಯ. ಇಂತಹ ವಿಸ್ಮಯ ನೋಡಿ ಬೆರಗಾದೆ. ಈ ಸೊಬಗು ನೋಡಲೆಂದೆ ಪ್ರತಿವರ್ಷ ಬರುವೆ ಎನ್ನುತ್ತಾರೆ ದಾವಣಗೆರೆ ಭಕ್ತೆ ನಿರ್ಮಲಾ.