ಕ್ರೈಂ ವೈಭವೀಕರಿಸಿದರೆ ದುಷ್ಪರಿಣಾಮ: ಪರಂ ಕಳವಳ

| Published : Jul 30 2024, 12:33 AM IST

ಕ್ರೈಂ ವೈಭವೀಕರಿಸಿದರೆ ದುಷ್ಪರಿಣಾಮ: ಪರಂ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಮಾಧ್ಯಮಗಳು ಕ್ರೈಂ ಅನ್ನು ಹೆಚ್ಚು ವೈಭವೀಕರಿಸಿದರೆ ಸಮಾಜದ ಮೇಲೆ ದುಷ್ಪರಿಣಾಮ

ಕನ್ನಡಪ್ರಭ ವಾರ್ತೆ ತುಮಕೂರು ಮಾಧ್ಯಮಗಳು ಕ್ರೈಂ ಅನ್ನು ಹೆಚ್ಚು ವೈಭವೀಕರಿಸಿದರೆ ಸಮಾಜದ ಮೇಲೆ ದುಷ್ಪರಿಣಾಮ ಬೀರಲಿದ್ದು, ಯುವಜನರು ಅಪ್ರಾಪ್ತರು ಅಪರಾಧ ಜಗತ್ತಿನ ಕಡೆ ವಾಲುವ ಆತಂಕವಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಆತಂಕ ವ್ಯಕ್ತಪಡಿಸಿದರು.ಅವರು ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಜರುಗಿದ ಪ್ರತಿಭಾನ್ವಿತ ಪತ್ರಕರ್ತರ ಮಕ್ಕಳಿಗೆ ಡಾ ಜಿ ಪರಮೇಶ್ವರ ಹಾಗೂ ಕನ್ನಿಕಾ ಪರಮೇಶ್ವರ ಉನ್ನತ ಶಿಕ್ಷಣ ಪ್ರೋತ್ಸಾಧನ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಹಾಗೂ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ನಗರ ನಿವಾಸಿ ಪತ್ರಕರ್ತರಿಗೆ ಕ್ಯಾಶ್ ಲೆಸ್ ಆರೋಗ್ಯ ವಿಮೆ ಕಾರ್ಡ್ ವಿತರಣೆ ಮಾಡಿ ಮಾತನಾಡಿದರು.ಕ್ರೈಂಗಳನ್ನು ವೈಭವೀಕರಿಸಿದಷ್ಟು ಅಪರಾಧಿಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಮಾಧ್ಯಮಗಳು ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯಮಾಡಬೇಕು. ನಾವು ಮಾಡುವ ಸುದ್ದಿಗಳು ಸಮಾಜದ ಮೇಲೆ, ಯುವ ಮನಸ್ಸುಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆಂಬ ಸೂಕ್ಷ್ಮತೆ ಪತ್ರಕರ್ತರಾದವರಿಗೆ ಇರಬೇಕು ಎಂದು ಕಿವಿಮಾತು ಹೇಳಿ, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಿಸಲು ನಮ್ಮ ಸರ್ಕಾರ ಕ್ರಮವಹಿಸಿದ್ದು, ಪತ್ರಕರ್ತರ ಆರೋಗ್ಯ ಕಾಳಜಿಗೂ 10 ಕೋಟಿ ಹಣವನ್ನು ಬಜೆಟ್‌ನಲ್ಲಿ ಸಿಎಂ ಒದಗಿಸಿದ್ದಾರೆಂದರು.25 ಲಕ್ಷ ವಾಗ್ದಾನ ಪೂರೈಸಿದ ಪರಂ

ನಾನು ಕಳೆದ ಬಾರಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ 25 ಲಕ್ಷ ಕೊಡುತ್ತೇನೆಂದು ಘೋಷಣೆ ಮಾಡಿದ್ದೆ. ಅದರಂತೆ ಅನುದಾನ ನೀಡಿದ್ದು, ಇದರ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಮಟ್ಟದ ಪರೀಕ್ಷೆಗಳನ್ನು ಗೆದ್ದು ಸಮಾಜದ ಉತ್ತಮ ಅಧಿಕಾರಿಗಳಾಗಿ ಪರಿವರ್ತನೆಯಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೇಳಿ ನೀಟ್ ಪರೀಕ್ಷಾ ಗೊಂದಲದಿಂದ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ ಎಂದರು.ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕ ಅತ್ಯಂತ ಕ್ರಿಯಾಶೀಲವಾಗಿದ್ದು, 2012ರಲ್ಲಿ ರಾಷ್ಟ್ರೀಯ ಪತ್ರಕರ್ತರ ಅಧಿವೇಶನವನ್ನು ವ್ಯವಸ್ಥಿತವಾಗಿ ಸಂಘಟಿಸಿದ್ದರು. ಇದೇ ವೇಳೆ ಪತ್ರಕರ್ತರಿಗೆ ಅಗತ್ಯ ನಿವೇಶನ ಒದಗಿಸಿಕೊಡಬೇಕೆಂಬ ಸಂಘದ ಬೇಡಿಕೆಗೂ ಸಕಾರತ್ಮಕವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ಕ್ರಮದ ಹೊಣೆಯನ್ನು ಡಿಸಿ, ಸಿಇಓ ಅವರಿಗೆ ನೀಡುತ್ತಿರುವುದಾಗಿ ತಿಳಿಸಿ, ಪ್ರತಿಭಾ ಪುರಸ್ಕಾರ ಪಡೆದ ಪ್ರತಿ ಮಕ್ಕಳಿಗೂ ನಗದು ಚೆಕ್, ನೆನಪಿನ ಕಾಣಿಕೆ ವಿತರಿಸಿದರು.ವರದಿಗಳು ದಿಕ್ಸೂಚಿ

ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾಡಳಿತ ಅನೇಕ ಕೆಲಸ ಕಾರ್ಯಗಳಿಗೆ ಪತ್ರಕರ್ತರು, ವರದಿಗಳು ದಿಕ್ಸೂಚಿಯಾಗಿವೆ. ಪತ್ರಕರ್ತರ ಸಮಯ, ಸಂಯಮ ಕೆಲಸದ ಒತ್ತಡ ನಿಭಾವಣೆ ಶ್ಲಾಘನೀಯವಾಗಿದ್ದು, ಸಚಿವರಾದ ಡಾ. ಜಿ. ಪರಮೇಶ್ವರ ದಂಪತಿಗಳು ಪತ್ರಕರ್ತರ ಮಕ್ಕಳಿಗೆ ನೀಡಿರುವ ಪ್ರೋತ್ಸಾಹ ಧನ ಅತ್ಯಂತ ಅಮೂಲ್ಯವಾದದು. ನಾವು ಸಹ ಸ್ಕಾಲರ್‌ಶಿಪ್ ಹಣದಲ್ಲೇ ಓದಿ ರ್ಯಾಂಕ್ ಪಡೆದಾಗ ಬಹುಮಾನವಾಗಿ ಬಂದ ಹತ್ತು ಸಾವಿರ ರೂಪಾಯಿಗಳನ್ನು ಇನ್ನೂ ಕಾಪಿಟ್ಟುಕೊಂಡಿದ್ದೇನೆ ಎಂದರು.ಸತ್ಕಾರ್ಯಕ್ಕೆ ವೇದಿಕೆ

ಜಿಪಂ ಸಿಇಒ ಜಿ.ಪ್ರಭು ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಇಂದು ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಮಕ್ಕಳು ಅದೃಷ್ಟಶಾಲಿಗಳು. ಬೃಹತ್ ಮೊತ್ತದ ನಗದು ಪುರಸ್ಕಾರವನ್ನು ಶೈಕ್ಷಣಿಕ ಪ್ರೋತ್ಸಾಹವಾಗಿ ಡಾ.ಪರಮೇಶ್ವರ್ ದಂಪತಿಗಳು ನೀಡುತ್ತಿದ್ದಾರೆ. ಸಂಘದ ಇಂತಹ ಒಂದು ಸತ್ಕಾರ್ಯಕ್ಕೆ ವೇದಿಕೆಯಾಗಿದ್ದು, ಸಂಘದ ಪದಾಧಿಕಾರಿಗಳು ಒಗ್ಗೂಡಿ ಸದಸ್ಯರ ಒಳಿತಿಗೆ ಶ್ರಮಿಸುತ್ತಿರುವುದು ನೋಡಿ ಸಂತಸವಾಗುತ್ತದೆ. ಪತ್ರಕರ್ತರ ಜೀವನ ಭದ್ರತೆಗಾಗಿ ಅಗತ್ಯ ನಿವೇಶನದ ಬೇಡಿಕೆಯನ್ನು ಸಚಿವರ ಮಾರ್ಗದರ್ಶನದಲ್ಲಿ ನಾನು, ಡಿಸಿಯವರು ಸೇರಿ ಈಡೇರಿಸಲು ಕ್ರಮ ವಹಿಸುತ್ತೇವೆ ಎಂದರು.ಮಹಾನಗರಪಾಲಿಕೆ ಆಯುಕ್ತೆ ಬಿ.ವಿ ಅಶ್ವಿಜ ಅವರು ಪಾಲಿಕೆಯಿಂದ ಮಾಡಿಸಿರುವ ಸ್ಟಾರ್ ಆರೋಗ್ಯವಿಮೆ ಕಾರ್ಡ್‌ನ್ನು ಸಚಿವರ ಸಮ್ಮುಖದಲ್ಲಿ ಸಂಘಕ್ಕೆ ಹಸ್ತಾಂತರಿಸಿ ಸ್ಕಾಲರ್‌ಶಿಪ್ ಹಣ ವಿದ್ಯಾರ್ಥಿಜೀವನದಲ್ಲಿ ಸಾಕಷ್ಟು ಉಪಯೋಗವಾಗುತ್ತದೆ ಎಂದು ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡರು. ಗ್ರಾಮೀಣ ಪತ್ರಕರ್ತರಿಗೂ ವಿಸ್ತರಿಸಿ

ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಅವರು ಮಾತನಾಡಿ ಪತ್ರಕರ್ತರ ಸಂಕಷ್ಟಕ್ಕೆ ಡಾ.ಜಿ.ಪರಮೇಶ್ವರ ಅವರು ಮೊದಲಿನಿಂದಲೂ ಸ್ಪಂದಿಸುತ್ತಾ ಬಂದಿದ್ದು, ಪತ್ರಕರ್ತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ೨೫ ಲಕ್ಷ ಕೊಡುಗೆ ಸುಲಭ ಸಂಗತಿಯಲ್ಲ. ತುಮಕೂರಲ್ಲಿ ಜರುಗಿದ ರಾಷ್ಟ್ರೀಯ ಅಧಿವೇಶನದ ಯಶಸ್ಸಿಗೂ ಇದೇ ರೀತಿ ಸಹಕರಿಸಿದ್ದಾರೆ. ಮಹಾನಗರಪಾಲಿಕೆಯವರು ನಗರವಾಸಿ ಪತ್ರಕರ್ತರಿಗೂ ನೀಡಿರುವ ಆರೋಗ್ಯ ವಿಮೆಯನ್ನು ಗ್ರಾಮೀಣ ಪತ್ರಕರ್ತರಿಗೂ ವಿಸ್ತರಿಸಬೇಕು ಎಂದರು.ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರ ಹಿತೈಷಿಗಳಾಗಿರುವ ಸಚಿವರಾದ ಡಾ. ಜಿ ಪರಮೇಶ್ವರ ಅವರು ಕಳೆದ ವರ್ಷ ಘೋಷಿಸಿದಂತೆ 25 ಲಕ್ಷ ಚೆಕ್ ಅನ್ನು ಪತ್ರಕರ್ತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉದಾರ ಮನಸ್ಸಿನಿಂದ ನೀಡಿದ್ದು, ಇಡೀ ದೇಶಕ್ಕೆ ಮಾದರಿಯೆನಿಸಿದೆ ಎಂದರು.ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ, ಪದವಿಯಲ್ಲಿ ಟಾಪರ್‌ಗಳಾದ ಕೆ.ಪಿ. ಪ್ರಿಯತೋಷ್, ಡಿ. ಗುಣಸಾಗರ್ ಅವರಿಗೆ ತಲಾ ಒಂದು ಲಕ್ಷ ನಗದು ಪ್ರೋತ್ಸಾಹಧನ ಸೇರಿದಂತೆ ಒಟ್ಟು 36 ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಲಾವಿದ ಡಾ.ರಾಜ್ ವಾಯ್ಸ್ ಖ್ಯಾತಿಯ ದಿಬ್ಬೂರು ಮಂಜುನಾಥ್ ಅವರ ತಂಡದಿಂದ ಗೀತಗಾಯನ ನಡೆಯಿತು. ಕಲಾಶ್ರೀ ಡಾ.ಲಕ್ಷ್ಮಣದಾಸ್ ರಂಗಕೀರ್ತನೆ ಹಾಡಿದರು. ವೇದಿಕೆಯಲ್ಲಿ ರಾಷ್ಟ್ರೀಯ ಸಂ.ಕಾರ್ಯದರ್ಶಿ ಡಿ.ಎಂ.ಸತೀಶ್, ರಾಷ್ಟ್ರೀಯ ಮಂಡಳಿ ಸದಸ್ಯರಾದ ಅನು ಶಾಂತರಾಜು, ಟಿ.ಎನ್.ಮಧುಕರ್ , ಉಪಾಧ್ಯಕ್ಷರಾದ ಎಲ್.ಚಿಕ್ಕಿರಪ್ಪ, ತಿಪಟೂರು ಕೃಷ್ಣ, ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್, ಕಾರ್ಯದರ್ಶಿಗಳಾದ ದಶರಥ, ಸತೀಶ್ ಹಾರೋಗೆರೆ, ರಂಗಧಾಮಯ್ಯ, ಮಹಿಳಾ ನಿರ್ದೇಶಕಿ ನಾಗರತ್ನ ಶಿವಣ್ಣ ಹಾಗೂ ನಿರ್ದೇಶಕರು ಹಾಜರಿದ್ದರು. ದವಳಶ್ರೀ ಪ್ರಾರ್ಥಿಸಿದರು. ಹರೀಶ್ ಆಚಾರ್ಯ ನಿರೂಪಿಸಿದರು. ರಘುರಾಮ್ ಸ್ವಾಗತಿಸಿದರು. ನಿರ್ದೇಶಕರಾದ ಪರಮೇಶ್, ಜಯಣ್ಣ ಪ್ರತಿಭಾ ಪುರಸ್ಕಾರ ಪಟ್ಟಿ ವಾಚಿಸಿದರು. ಕೋಟ್‌ 2

ಪತ್ರಕರ್ತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ೨೫ ಲಕ್ಷ ಕೊಡುಗೆ ಸುಲಭ ಸಂಗತಿಯಲ್ಲ. ಮಹಾನಗರಪಾಲಿಕೆಯವರು ನಗರವಾಸಿ ಪತ್ರಕರ್ತರಿಗೂ ನೀಡಿರುವ ಆರೋಗ್ಯ ವಿಮೆಯನ್ನು ಗ್ರಾಮೀಣ ಪತ್ರಕರ್ತರಿಗೂ ವಿಸ್ತರಿಸಬೇಕು. - ಬಿ.ವಿ. ಮಲ್ಲಿಕಾರ್ಜುನಯ್ಯ, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಒಕ್ಕೂಟದ ಅಧ್ಯಕ್ಷ.