ನದಿಗಳ ರಾಷ್ಟ್ರೀಕರಣದಿಂದ ಜಲಮೂಲಗಳ ಸಂರಕ್ಷಣೆ ಸಾಧ್ಯ: ಶ್ರೀ ಶಿವರಾಮನಂದ ಸ್ವಾಮೀಜಿ
KannadaprabhaNewsNetwork | Published : Oct 22 2023, 01:00 AM IST
ನದಿಗಳ ರಾಷ್ಟ್ರೀಕರಣದಿಂದ ಜಲಮೂಲಗಳ ಸಂರಕ್ಷಣೆ ಸಾಧ್ಯ: ಶ್ರೀ ಶಿವರಾಮನಂದ ಸ್ವಾಮೀಜಿ
ಸಾರಾಂಶ
ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 150ನೇ ಮಹಾ ಆರತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಶಾಲನಗರ ನದಿಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಜಲ ಮೂಲಗಳ ಸಂರಕ್ಷಣೆ ಮತ್ತು ರಾಜ್ಯಗಳ ನಡುವೆ ಉಂಟಾಗಿರುವ ಗೊಂದಲದ ಶಾಶ್ವತ ನಿರ್ಮೂಲನೆ ಸಾಧ್ಯ ಎಂದು ಅಖಿಲ ಭಾರತ ಸನ್ಯಾಸಿ ಸಂಘದ ಕಾರ್ಯದರ್ಶಿ ಶ್ರೀ ಶಿವರಾಮನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 150ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಜಲಮೂಲಗಳ, ನದಿ ತೊರೆಗಳ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರೂ ವಿಫಲರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ಹರಿಸಬೇಕಾಗಿದೆ. ಈ ಮೂಲಕ ರಾಜ್ಯ ರಾಜ್ಯಗಳ ನಡುವೆ ಉಂಟಾಗುತ್ತಿರುವ ಜಲ ಕ್ಷಾಮದ ಸಮಸ್ಯೆಯನ್ನು ನೀಗಿಸಲು ಬೃಹತ್ ಯೋಜನೆಗಳನ್ನು ರೂಪಿಸಬೇಕಾಗಿದೆ. ದಕ್ಷಿಣ ಭಾರತದಲ್ಲಿ ಬಹುತೇಕ ನದಿಗಳು ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಹವಾಮಾನ ವೈಪರಿತ್ಯದ ನಡುವೆ ನಿಗದಿತ ಅವಧಿಗಿಂತಲೇ ಮುನ್ನ ನದಿಗಳು ಬತ್ತಿ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಿರಂತರವಾಗಿ ಕಾವೇರಿ ನದಿಯ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದು ನದಿಯ ಸಂರಕ್ಷಣೆಗೆ ಹೋರಾಟ ಮಾಡುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ನಡೆದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ನದಿ ತೀರಗಳು ಸಂಸ್ಕೃತಿಯ ಉಗಮ ಸ್ಥಾನಗಳಾಗಿದ್ದವು. ಅಭಿವೃದ್ಧಿಯ ನಡುವೆ ನದಿಗಳು ಜಲಮೂಲಗಳು ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ನದಿಯನ್ನು ದೇವತೆಯ ರೂಪದಲ್ಲಿ ಕಾಣುತ್ತಿರುವ ನಾವು ನದಿಯು ಕಲುಷಿತವಾಗದಂತೆ ಎಚ್ಚರ ವಹಿಸಬೇಕು ಎಂದರು. ಸಮಾರಂಭದಲ್ಲಿ ಪಾಲ್ಗೊಂಡ ಸ್ವಾಮೀಜಿಗಳು ಸಾಧು ಸಂತರು ಮತ್ತು ಕಾರ್ಯಕರ್ತರನ್ನು ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಕುಶಾಲನಗರ ಅರಣ್ಯ ವಲಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ವಲಯ ಅರಣ್ಯಾಧಿಕಾರಿ ಶಿವರಾಂ ಮತ್ತು ಕುಶಾಲನಗರ ಪುರಸಭೆಯ ಆರೋಗ್ಯ ಅಧಿಕಾರಿ ಉದಯಕುಮಾರ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ತಲಕಾವೇರಿಯಿಂದ ಆಗಮಿಸಿದ ಕಾವೇರಿ ಮಾತೆಯ ರಥವನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಮೆರವಣಿಗೆಯ ಮೂಲಕ ನದಿ ತೀರಕ್ಕೆ ತರಲಾಯಿತು. ನಂತರ ಅರ್ಚಕರು ಹಾಗೂ ಟ್ರಸ್ಟಿಗಳಾದ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ನದಿಗೆ 150ನೇ ಮಹಾ ಆರತಿ ಬೆಳಗಲಾಯಿತು. ಈ ಸಂದರ್ಭ ಅಖಿಲ ಭಾರತ ಸಾಧುಸಂತರ ಸಂಘದ ಪ್ರಮುಖರಾದ ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ಗಜಾನನ ಸ್ವಾಮೀಜಿ, ಮೇಘಾನಂದ ಸರಸ್ವತಿ ಸ್ವಾಮೀಜಿ, ಅಖಿಲ ಭಾರತ ಸಾಧು ಸಂತರ ಸಂಘದ ಸದಸ್ಯರು, ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕುಮಾರಸ್ವಾಮಿ, ಸಿದ್ದರಾಜು, ಅಣ್ಣಯ್ಯ, ಕಾವೇರಿ ರಿವರ್ ಸೇವಾ ಟ್ರಸ್ಟ್‌ನ ಬೋಸ್ ಮೊಣ್ಣಪ್ಪ, ಡಿ.ಆರ್. ಸೋಮಶೇಖರ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಕೊಕ್ಕಲೆರ ಧರಣಿ, ಚೈತನ್ಯ, ಸಮಾಜ ಸೇವಕರಾದ ಕೆ.ಎಸ್. ಶಶಿಕುಮಾರ್ ಗೌಡ ಮತ್ತಿತರರು ಇದ್ದರು.