ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಐದು ಕೋಟಿ ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸುವ ಸಂಕಲ್ಪ ತೊಟ್ಟು ಸಾಕಾರಗೊಳಿಸಿದ್ದಾರೆ. ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳೂ ಕೂಡ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅವುಗಳ ಭಿನ್ನ ಬದುಕಿನ ಚಿತ್ರಣ ಮತ್ತು ಜೀವನ ಕ್ರಮವನ್ನರಿತು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಡೀನ್ ಡಾ.ಎ.ಟಿ.ಶಿವರಾಮು ಹೇಳಿದರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳ ಕಚೇರಿ, ಎನ್‌ಎಸ್‌ಎಸ್ ಘಟಕ-10 ಹಾಗೂ ಇಕೋ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಿದ್ದ ವನ್ಯಜೀವಿ ಸಪ್ತಾಹದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಐದು ಕೋಟಿ ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸುವ ಸಂಕಲ್ಪ ತೊಟ್ಟು ಸಾಕಾರಗೊಳಿಸಿದ್ದಾರೆ. ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳೂ ಕೂಡ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದು ಶ್ಲಾಘಿಸಿದರು.ದೇಶದ ಸತ್ಪ್ರಜೆಗಳಾದ ನೀವು ಉತ್ತಮ ಅಭ್ಯಾಸ ಮತ್ತು ಹವ್ಯಾಸಗಳನ್ನು ಬೆಳೆಸಿಕೊಂಡು ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು. ಪರಿಸರ, ವನ್ಯಜೀವಿ ಮತ್ತು ಅರಣ್ಯ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಬದುಕಿನಂತೆ ಪ್ರಕೃತಿಯೂ ಕೂಡ ತನ್ನದೇ ಎಂದು ಭಾವಿಸಿದರೆ ಈ ಕಾರ್ಯ ಯಶಸ್ವಿಯಾಗುತ್ತದೆ ಎಂದರು.
ವಲಯ ಅರಣ್ಯಾಧಿಕಾರಿ ಎಸ್.ಸಂಪತ್ ಪಟೇಲ್ ಮಾತನಾಡಿ, ದೇಶದಲ್ಲಿ 1957ರಲ್ಲಿ ಮೊದಲ ವನ್ಯಜೀವಿ ಸಪ್ತಾಹವನ್ನು ಆರಂಭಿಸಿ ಪ್ರಾಣಿ, ಪಕ್ಷಿ ಹಾಗೂ ಅರಣ್ಯ ಸಂಪತ್ತಿನ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅರಣ್ಯ ಉಳಿದರೆ ಮಾತ್ರ ವನ್ಯಜೀವಿಗಳು ಸುರಕ್ಷಿತ. ಹಾಗಾಗಿ ವನ್ಯಜೀವಿಗಳು ಮತ್ತು ಅರಣ್ಯ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾಗಿ ಬಹುಮಾನ ಪಡೆದ ವಿದ್ಯಾರ್ಥಿಗಳು ಪ್ರಕೃತಿ ಮತ್ತು ವನ್ಯಜೀವಿಗಳ ಕುರಿತು ಮಾತನಾಡಿದರು. ಮಹತ್ವ ಪೂರ್ಣ ಸಾಕ್ಷ್ಯಚಿತ್ರವನ್ನು ಬಿತ್ತರಿಸಿ ಅಪಾರ ವನ್ಯಜೀವಿಗಳ ಮಾಹಿತಿಯೊಂದಿಗೆ ಸಂರಕ್ಷಣೆಯ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಕೆ.ಆರ್.ಶಿವಲಿಂಗಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪ್ರಶಾಂತ್, ಕಾಲೇಜು ಸಹಾಯಕ ಪ್ರಾಧ್ಯಾಪಕ ಎ.ಎಚ್.ಗೋಪಾಲ್, ಗಸ್ತು ಅರಣ್ಯಾಧಿಕಾರಿ ಪ್ರವೀಣ್ ಜಿ.ವರಗಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸಿ.ಎಲ್.ಶಿವಣ್ಣ, ಬಿ.ಎಸ್.ಗಂಗಾಧರ್, ಕಳಸೇಗೌಡ, ಚಿಕ್ಕಣ್ಣ, ಅರ್ಪಿತ, ಸಹಾಯಕ ಪ್ರಾಧ್ಯಾಪಕರಾದ ಡಾ.ಎ.ಸಿ.ದೇವಾನಂದ್, ಲೋಕೇಶ್ ಕುಮಾರ್, ಜಿ.ರವಿಕುಮಾರ್, ಹಂಪೇಶ್ ಸೇರಿದಂತೆ ಹಲವರು ಇದ್ದರು.