ಪರಿಸರ ನಾಶದಿಂದಾಗಿ ಹವಾಮಾನ ವೈಪರಿತ್ಯವಾಗುತ್ತಿದೆ. ಸರಿಯಾದ ಸಮಯಕ್ಕೆ ಮಳೆಯಾಗದೆ ಕೆರೆ-ಕೆಟ್ಟೆಗಳು ತುಂಬುತ್ತಿಲ್ಲ, ಅಂತರ್ಜಲ ಕುಸಿಯುತ್ತಿದೆ. ನೀರಿನ ಸಮಸ್ಯೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತಿದೆ. ಹೀಗಾಗಿ ಪರಿಸರ ಮತ್ತು ಆರೋಗ್ಯ ಸಮತೋಲನವಾಗಿದ್ದರೆ ಮಾತ್ರ ಮನುಷ್ಯನ ಆರೋಗ್ಯ ಸುಧಾರಿಸಲು ಸಾಧ್ಯ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪರಿಸರ ಸಂರಕ್ಷಣೆ ಮಾಡುವ ಮೂಲಕ ಮನುಷ್ಯನ ಆರೋಗ್ಯ ಸುಧಾರಣೆಗೆ ಕಾಳಜಿ ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಹೇಳಿದರು.

ತಾಲೂಕಿನ ತಿರುಮಲಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮಿ ಲವಕುಮಾರ್ ಹಾಗೂ ಶಾಲಾಭಿವೃದ್ಧಿ ಸಮಿತಿಯಿಂದ ಹಮ್ಮಿಕೊಂಡಿದ್ದ ಸಸ್ಯ ಸಮೃದ್ಧಿ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪರಿಸರ ನಾಶದಿಂದಾಗಿ ಹವಾಮಾನ ವೈಪರಿತ್ಯವಾಗುತ್ತಿದೆ. ಸರಿಯಾದ ಸಮಯಕ್ಕೆ ಮಳೆಯಾಗದೆ ಕೆರೆ-ಕೆಟ್ಟೆಗಳು ತುಂಬುತ್ತಿಲ್ಲ, ಅಂತರ್ಜಲ ಕುಸಿಯುತ್ತಿದೆ. ನೀರಿನ ಸಮಸ್ಯೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತಿದೆ. ಹೀಗಾಗಿ ಪರಿಸರ ಮತ್ತು ಆರೋಗ್ಯ ಸಮತೋಲನವಾಗಿದ್ದರೆ ಮಾತ್ರ ಮನುಷ್ಯನ ಆರೋಗ್ಯ ಸುಧಾರಿಸಲು ಸಾಧ್ಯ. ಆದ್ದರಿಂದ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿವಹಿಸಬೇಕು ಎಂದರು.

ಪರಿಸರ ಪ್ರೇಮಿ ಲವಕುಮಾರ್ ಅವರು ಪಾಂಡವಪುರ, ಕೆ.ಆರ್.ಪೇಟೆಯ ಹಲವು ಕಡೆಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಬೇಬಿಗ್ರಾಮದಿಂದ ಶ್ಯಾದನಹಳ್ಳಿಗೆ ಸಂಪರ್ಕಿಸುವ ರಸ್ತೆ ಇಕ್ಕೆಲಗಳಲ್ಲಿ 260 ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪರಿಸರ ಪ್ರೇಮಿ ಲವಕುಮಾರ್ ಮಾತನಾಡಿ, ಪರಿಸರ ಬೆಳೆಸಿ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಾಲೆಗಳು, ಮನೆಯಂಗಳ, ಜಮೀನು, ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಬೇಕು. ಪರಸರಿ ಉಳಿದರೆ ಮಾತ್ರ ಸಮಾಜ ಉಳಿಯಲಿದೆ ಇಲ್ಲವಾದರೆ ಪ್ರಾಕೃತಿಕ ವಿಕೋಪಗಳು ಸಂಭವಿಸಲಿದೆ ಎಂದು ಎಚ್ಚರಿಸಿದರು.

ಈ ವೇಳೆ ಶಾಲಾ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಶಿಕ್ಷಕ, ಸಹ ಶಿಕ್ಷಕರು, ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ: ಜೈಶಂಕರ್

ಹಲಗೂರು:ಸಮಯ ಅಮೂಲ್ಯವಾಗಿದ್ದು, ವ್ಯರ್ಥ ಮಾಡದೇ ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸಿ.ಜೈಶಂಕರ್ ಕರೆ ನೀಡಿದರು.

ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪದವಿ ನಂತರ ಹಲವು ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಬೇಜವಾಬ್ದಾರಿ ತೋರದೇ ಕಲಿಕೆಯಲ್ಲಿ ತೊಡಗಿದರೆ ಸಾಧನೆ ಸಾಧ್ಯವಾಗಲಿದೆ ಎಂದರು.ಪ್ರಾಂಶುಪಾಲ ಎನ್.ಎಸ್.ಶಂಕರೇಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಅಧ್ಯತೆ ನೀಡಬೇಕಿದೆ. ಕಲೆ, ಹಾಡು, ನೃತ್ಯ ವಿವಿಧ ಪ್ರಕಾರಗಳು ಮನುಷ್ಯನನ್ನು ಸಂವೇದನಾ ಲೋಕಕ್ಕೆ ಕರೆದೊಯ್ದು, ಮನಸ್ಸನ್ನು ಮುದಗೊಳಿಸಿ ಸಂತೃಪ್ತಿಗೊಳಿಸಲಿವೆ ಎಂದರು.

ಈ ವೇಳೆ ಕ್ರೀಡಾ ಸಂಚಾಲಕ ಟಿ.ಶ್ರೀನಿವಾಸ್, ಸಾಂಸ್ಕೃತಿಕ ಸಂಚಾಲಕಿ ಸೀಮಾ ಕೌಸರ್, ಐಕ್ಯೂಎಸಿ ಸಂಚಾಲಕಿ ತಾರ ಜಯಲಕ್ಷ್ಮಿ, ಎನ್.ಎಸ್.ಎಸ್ ಸಂಚಾಲಕ ಬಿ.ಸಿ.ರವಿ, ಗುರುಪ್ರಸಾದ್, ಸೂಪರಿಂಟೆಂಡೆಂಟ್ ಕುಮಾರಸ್ವಾಮಿ ಸೇರಿದಂತೆ ಹಲವು ಭಾಗವಹಿಸಿದ್ದರು.