ಸಾರಾಂಶ
- ರಾಜ್ಯ ಸರ್ಕಾರಕ್ಕೆ ಜಿಲ್ಲಾ ಕ್ರೀಡಾ ಕರಾಟೆ ಶಿಕ್ಷಕರ ಸಂಘದ ಬಾಷಾ ಸಾಬ್ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕರಾಟೆ ತರಬೇತಿ ನೀಡುವ ನೋಂದಾಯಿತ ಕರಾಟೆ ತರಬೇತುದಾರರನ್ನು ಶಿಕ್ಷಕರೆಂದು ಪರಿಗಣಿಸುವಂತೆ ದಾವಣಗೆರೆ ಜಿಲ್ಲಾ ಕ್ರೀಡಾ ಕರಾಟೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಾಷಾ ಸಾಬ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕರಾಟೆ ತರಬೇತಿ ನೀಡುವ ನೋಂದಾಯಿತ ಕರಾಟೆ ತರಬೇತುದಾರರಿಗೆ ಶಿಕ್ಷಕರೆಂದು ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಂಘಟನೆಗಾಗಿ ತಮ್ಮ ಸಂಸ್ಥೆ ಸ್ಥಾಪನೆಯಾಗಿದೆ ಎಂದರು.
ದಾವಣಗೆರೆಯ ನುರಿತ ಹಾಗೂ ನೋಂದಾಯಿತ ಕಾರ್ಯನಿರತ ಕರಾಟೆ ಶಿಕ್ಷಕರು ಸೇರಿದಂತೆ ಕರಾಟೆ ಶಿಕ್ಷಕರು, ಕರಾಟೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ, ಯುವಜನರ ಒಳಿತಿಗಾಗಿ ಕರಾಟೆ ಶಿಕ್ಷಕರನ್ನು ಒಗ್ಗೂಡಿಸಲು ಕರಾಟೆ ಶಿಕ್ಷಕರ ಸಂಘವನ್ನು ನೋಂದಾಯಿಸಿ, ಸಂಘಟನೆ ಆರಂಭಿಸಿದ್ದೇವೆ. ಸಂಘವು ಈಗಾಗಲೇ ರಾಜ್ಯಮಟ್ಟದಲ್ಲಿ ಕರಾಟೆ ತರಬೇತುದಾರರು, ವಿದ್ಯಾರ್ಥಿಗಳ ಒಳತಿಗಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ರಾಜ್ಯ ಕರಾಟೆ ಶಿಕ್ಷಕರ ಸಂಘದಿಂದ ಅನುಮೋದನೆ ಪಡೆದಿದೆ ಎಂದು ತಿಳಿಸಿದರು.ಸಂಘವನ್ನು ಜಿಲ್ಲೆಯ ಎಲ್ಲ ಶಿಕ್ಷಕರನ್ನು ಒಗ್ಗೂಡಿಸಿಕೊಂಡು, ಸಾರ್ವಜನಿಕರ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಬರುವ ಪಿಎಂ ಶ್ರೀ ಮತ್ತು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಸ್ವಯಂ ಕೌಶಲ್ಯ ಮತ್ತು ಅನುದಾನಿತ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿಯಂತಹ ಯೋಜನೆಗಳನ್ನು ಸಂಘದಿಂದ ಯಶಸ್ವಿಯಾಗಿ ನಡೆಸಿಕೊಡುವುದು ಮತ್ತು ಪ್ರತಿ ಸರ್ಕಾರಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರನ್ನು ಕಾಯಂ ಶಿಕ್ಷಕರಾಗಿ ನೇಮಿಸಿ, ನಿರಂತರ ಸೇವೆಗೆ ಅವಕಾಶ ನಮ್ಮ ಒತ್ತಾಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಣ್ಣಪ್ಪ, ಆನಂದ ಮೊದಲಿಯಾರ್, ಎಂ.ರಾಜು, ನಜೀರ್ ಭಾಷಾ, ಸಾದಿಕ್ ಭಾಷಾ, ಸೋಮಶೇಖರ, ಮಹಮ್ಮದ್ ಸಾದಿಕ್ ಇತರರು ಇದ್ದರು.- - -
(ಬಾಕ್ಸ್) * ರಾಜ್ಯ ಸಂಘ ಮೂಲಕವೂ ಒತ್ತಾಯ: ಸಂಜಯ್ ಪ್ರಧಾನ ಕಾರ್ಯದರ್ಶಿ ಸಂಜಯ್ ಮಾತನಾಡಿ, ಈಗಿರುವ ಕರಾಟೆ ಶಿಕ್ಷಕರು ಬಹುತೇಕರು ದಿನಗೂಲಿಕಾರರು ಮತ್ತು ಸಣ್ಣಪುಟ್ಟ ಉದ್ಯಮ ವರ್ಗದವರು, ಆಟೋ ಚಾಲಕರಾಗಿದ್ದಾರೆ. ಕರಾಟೆಯಿಂದ ತರಬೇತುದಾರರಿಗೆ ಅನುಕೂಲ ಆಗಲೆಂಬುದು ನಮ್ಮ ಉದ್ದೇಶ. ಸಂಘದ ಎಲ್ಲ ಶಿಕ್ಷಕರು ನುರಿತ ತೀರ್ಪುಗಾರರಾಗಿದ್ದು, ಇಲಾಖೆಯಿಂದ ನಡೆಸಲಾಗುವ ತಾಲೂಕುಮಟ್ಟದ ಮತ್ತು ಜಿಲ್ಲಾಮಟ್ಟದ ಆಯ್ಕೆ ಕರಾಟೆ ಸ್ಪರ್ಧೆಗಳಲ್ಲಿ ನಾವು ಜವಾಬ್ದಾರಿಯಿಂದ ತೆಗೆದುಕೊಂಡ ನಿರ್ಧಾರಗಳಿಂದ ತೊಂದರೆಯಾಗದಂತೆ ಯಶಸ್ವಿಗೊಳಿಸುತ್ತ ಬಂದಿದ್ದೇವೆ. ನೋಂದಾಯಿತ ಕರಾಟೆ ತರಬೇತುದಾರರನ್ನು ಶಿಕ್ಷಕರೆಂದು ಪರಿಗಣಿಸಲು ಜಿಲ್ಲಾ ಹಾಗೂ ರಾಜ್ಯ ಕರಾಟೆ ಶಿಕ್ಷಕರ ಸಂಘದ ಮೂಲಕವೂ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.- - -
-28ಕೆಡಿವಿಜಿ3:ದಾವಣಗೆರೆಯಲ್ಲಿ ಗುರುವಾರ ದಾವಣಗೆರೆ ಜಿಲ್ಲಾ ಕ್ರೀಡಾ ಕರಾಟೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಾಷಾ ಸಾಬ್, ಪ್ರಧಾನ ಕಾರ್ಯದರ್ಶಿ ಸಂಜಯ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.