ಯುಕೆಪಿ ಯೋಜನೆ ಗಂಭೀರವಾಗಿ ಪರಿಗಣಿಸಿ

| Published : Jul 13 2025, 01:18 AM IST

ಸಾರಾಂಶ

ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸುವುದು, ಯುಕೆಪಿ ಯೋಜನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು

ಕನ್ನಡಪ್ರಭ ವಾರ್ತೆ ಮುಧೋಳ

ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸುವುದು, ಯುಕೆಪಿ ಯೋಜನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕೆಂದು ಅವಳಿ ಜಿಲ್ಲಾ ಯುಕೆಪಿ ಸಂತ್ರಸ್ತರ ನಿಯೋಗ ಇತ್ತೀಚಿಗೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿತು.

ಯುಕೆಪಿ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂತರಗೊಂಡ ಮಾತನಾಡಿ, ಕಳೆದ 13 ವರ್ಷಗಳ ಹಿಂದೆ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. 13 ವರ್ಷಗಳಿಂದಲೂ ಒಂದಿಲ್ಲೊಂದು ಒಂದು ಸಮಸ್ಯೆಗಳಲ್ಲಿ ಅನ್ನದಾತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಸರ್ಕಾರ ಹಿನ್ನೀರು ಪ್ರದೇಶಗಳಲ್ಲಿ ಅಭಿವೃದ್ಧಿ ಮಾಡಲು ಹಿಂದೇಟು ಹಾಕಿತ್ತು. ಬಾಗಲಕೋಟೆಯಲ್ಲಿ ಕಳೆದ ಆರೇಳು ತಿಂಗಳ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಯುಕೆಪಿ ಯೋಜನೆ ಹೋರಾಟಕ್ಕೆ ಸ್ಪಂದಿಸಿ ಆಶಾಭಾವನೆ ಹುಟ್ಟಿಸಿದ್ದರು. ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಿಕೊಂಡು ಕನ್ಸೆಂಟ್ ಬೆಲೆ ನಿಗದಿ ಮಾಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಭೂಸ್ವಾಧಿನಕ್ಕೆ ಪ್ರತ್ಯೇಕವಾಗಿ ಹಣ ಮೀಸಲಿಡಬೇಕು ಆದರೆ ಈ ಕುರಿತು ನಮಗೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸಂತ್ರಸ್ತರು ಸಂಕಷ್ಟ ಸ್ಥಿತಿಯಲ್ಲಿ ಉಳಿದುಕೊಂಡಿದ್ದಾರೆ. ಇದಕ್ಕೆ ಪರಿಹಾರ ಕಾಣಿಸಿ ಎಂದು ಒಕ್ಕೂರಲಿನಿಂದ ಸಚಿವರನ್ನು ಆಗ್ರಹಿಸಿದರು.

ನಿಮ್ಮ ಅಧ್ಯಕ್ಷತೆ ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಂತ್ರಸ್ತರ ಹಾಗೂ ಅಧಿಕಾರಿಗಳ ಸಭೆಯನ್ನು ಕರೆಯಬೇಕೆಂದು ಸಂತ್ರಸ್ತರು ಮನವಿ ಮಾಡಿಕೊಂಡರು. ಇದಕ್ಕೆ ಸಚಿವ ಆರ್.ಬಿ.ತಿಮ್ಮಾಪೂರ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರತಿ ತಿಂಗಳು ಸಭೆ ನಡೆಸುವುದಾಗಿ ಹೇಳಿದರು. ವಿಜಯಪೂರದಲ್ಲಿ ಶೀಘ್ರವೇ ಕ್ಯಾಬಿನೆಟ್ ಸಭೆ ನಡೆಸುವುದಾಗಿ ಸಿಎಂ ತಿಳಿಸಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರಗೆ ಯುಕೆಪಿ ಯೋಜನೆ ಕುರಿತು ಮನವರಿಕೆ ಮಾಡಿರುವೆ. ಜು.16ರಂದು ಸಭೆ ನಡೆಸಿ ಕ್ಯಾಬಿನೆಟ್‌ಗೆ ಬರಲು ಪ್ರಯತ್ನಿಸಲಾಗುವುದು. ರೈತರು, ಸಂತ್ರಸ್ತರು ಸಹಕರಿಸಬೇಕೆಂದರು.

ವೆಂಕಣ್ಣ ಗಿಡಪ್ಪನ್ನವರ, ಆನಂದಪ್ಪ ನಾಯಕ, ಎಸ್.ಡಿ.ಪಾಟೀಲ, ಮಂಜು ಅರಕೇರಿ, ಮುತ್ತಪ್ಪ ಕೋಮಾರ, ನಾಗೇಶ ಗೋಲಶೆಟ್ಟಿ, ಡಾ.ಎ.ಜಿ.ಪಾಟೀಲ, ಜೆ.ಡಿ.ದೇಸಾಯಿ, ಸಂಗಪ್ಪ ಕೊಪ್ಪದ, ಶಿವಮೂರ್ತಿ ನಾರಾ ಇತರರು ಇದ್ದರು. ಮುಧೋಳ, ಬೀಳಗಿ, ಬಾಗಲಕೋಟೆ, ಬಬಲೇಶ್ವರ, ಜಮಖಂಡಿ, ವಿಜಯಪೂರ ತಾಲೂಕಿನ ಸಂತ್ರಸ್ತರು ಭಾಗವಹಿಸಿದ್ದರು.

ಶೀಘ್ರವೇ ವಿಜಯಪೂರದಲ್ಲಿ ಕ್ಯಾಬಿನೆಟ್ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಅಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಲಾಗುವುದು. ಪ್ರತಿ ತಿಂಗಳು ಯುಕೆಪಿ ಯೋಜನೆಯ ಕುರಿತು ಸಭೆ ನಡೆಸಲಾಗುವುದು. ಸಂತ್ರಸ್ತರ, ರೈತರ ಪರ ನಮ್ಮ ಸರ್ಕಾರವಿದೆ. ಆರ್.ಬಿ.ತಿಮ್ಮಾಪೂರ, ಅಬಕಾರಿ ಸಚಿವ