ಅರಕೆರೆಯಲ್ಲಿ ಬಯೋ ರಿಫೈನರಿ ಸ್ಥಾಪನೆಗೆ ಚಿಂತನೆ

| Published : Apr 29 2024, 01:31 AM IST / Updated: Apr 29 2024, 09:25 AM IST

ಅರಕೆರೆಯಲ್ಲಿ ಬಯೋ ರಿಫೈನರಿ ಸ್ಥಾಪನೆಗೆ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

  ಯಲಹಂಕ ಕ್ಷೇತ್ರದ ಅರಕೆರೆ ಸ್ವಚ್ಛ ಸಂಕೀರ್ಣ ಘಟಕಕ್ಕೆ ಅಮೆರಿಕದ ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆಯ ನಿರ್ದೇಶಕಿ ಪೂಜಾ ಭೇಟಿ ನೀಡಿ, ಘಟಕದಲ್ಲಿನ ಕಸ ವಿಲೇವಾರಿ ಮಾದರಿಯನ್ನು ಪರಿಶೀಲಿಸಿದರು.

 ಯಲಹಂಕ :  ಅತ್ಯಾಧುನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವ ಮೂಲಕ ರಾಷ್ಡ್ರ ಮಟ್ಟದಲ್ಲಿ ಗಮನ ಸೆಳೆದಿರುವ ಯಲಹಂಕ ಕ್ಷೇತ್ರದ ಅರಕೆರೆ ಸ್ವಚ್ಛ ಸಂಕೀರ್ಣ ಘಟಕಕ್ಕೆ ಅಮೆರಿಕದ ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆಯ ನಿರ್ದೇಶಕಿ ಪೂಜಾ ಭೇಟಿ ನೀಡಿ, ಘಟಕದಲ್ಲಿನ ಕಸ ವಿಲೇವಾರಿ ಮಾದರಿಯನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಪ್ರೈ.ಲಿಮಿಟೆಡ್ ಸಂಸ್ಥೆಯು ಬಯೋ ರಿಫೈನರಿಗೆ ಸಂಬಂಧಿಸಿದ ಸಂಸ್ಥೆಯಾಗಿದ್ದು, 5 ಸಾವಿರ ಟನ್ ಕಸವನ್ನು ಒಂದೇ ದಿನದಲ್ಲಿ ವಿಲೇವಾರಿ ಮಾಡಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸುಷ್ಟು ಸಾಮರ್ಥ್ಯ ಹೊಂದಿದೆ. ಕಸವನ್ನು ಆತ್ಯಾಧುನಿಕ ರೀತಿಯ ತಾಂತ್ರಿಕ ಉಪಕರಣಗಳ ಸಹಕಾರದಿಂದ ತ್ವರಿತ ಗತಿಯಲ್ಲಿ ವಿಂಗಡಿಸಿ, ಕಸದಲ್ಲಿನ ಬ್ಯಾಕ್ಟೀರಿಯಾಗಳು ಗಾಳಿಗೆ ಹರಡದಂತೆ, ವಾಸನೆಗೆ ಯಾವುದೇ ಅವಕಾಶವಿಲ್ಲದಂತೆ ವಿಲೇವಾರಿ ಮಾಡಿ, ಕಸದಿಂದ ಸಿಎನ್‌ಜಿ ಗ್ಯಾಸ್ ಮತ್ತು ಸಾವಯವ ರಸಗೊಬ್ಬರ ತಯಾರಿಸಬಹುದಾಗಿದೆ ಎಂದು ತಿಳಿಸಿದರು.

5 ಸಾವಿರ ಟನ್ ಕಸದಿಂದ 285 ಟನ್ ಸಿಎನ್‌ಜಿ ಗ್ಯಾಸ್ ಉತ್ಪಾದಿಸಬಹುದು. ಈ ಗ್ಯಾಸ್ಸನ್ನು ಪಿಎನ್‌ಜಿ ಪೈಪ್ ಲೈನ್ ಮೂಲಕ ಸರಬರಾಜು ಮಾಡಬಹುದಾಗಿದೆ. ಅಲ್ಲದೆ ಸಿಲಿಂಡರ್‌ಗಳಿಗೂ ತುಂಬಿಸಬಹುದು. ಇದರಿಂದ ಉತ್ಪಾದಿಸಲಾಗುವ ಸಾವಯವ ರಸಗೊಬ್ಬರ ಶೇಕಡ 16ರಷ್ಟು ನೈಟ್ರೋಜನ್ ಹೊಂದಿದೆ. ಬರಡು ಭೂಮಿಯನ್ನು ಉತ್ಕೃಷ್ಟ ಭೂಮಿಯನ್ನಾಗಿಸಿ ಪರಿವರ್ತನೆ ಮಾಡುವಷ್ಟು ಫಲವತ್ತತೆ ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.

ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಸಂಸ್ಥೆಯ ವತಿಯಿಂದ ಈಗಾಗಲೇ ಅಮೆರಿಕಾ, ಭಾರತದ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಬಯೋ ರಿಫೈನರಿ ಘಟಕಗಳನ್ನು ಸ್ಥಾಪಿಸಲು ಸಕಲ ರೀತಿಯ ಸಿದ್ಧತೆಗಳು ನಡೆದಿವೆ. 5 ಸಾವಿರ ಟನ್ ಕಸವನ್ನು ಒಂದೇ ದಿನದಲ್ಲಿ ಪ್ರತ್ಯೇಕಿಸುವ ಸಾಮರ್ಥ್ಯದ ಈ ಬಯೋ ರಿಫೈನರಿ ಘಟಕ ಸ್ಥಾಪನೆಗೆ 50 ಎಕರೆ ಅಗತ್ಯವಿದ್ದು, ನಮಗೆ ಸರ್ಕಾರ ಭೂಮಿಯನ್ನು ಲೀಸ್‌ಗೆ ಕೊಟ್ಟರೆ ನಾವು ದೇಶದ ಪ್ರಖ್ಯಾತ ಕಂಪನಿಗಳ ಸಹಯೋಗದೊಂದಿಗೆ ₹300 ಕೋಟಿ ವೆಚ್ಛದ ಬಯೋ ರಿಫೈನರಿ ಘಟಕವನ್ನು ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಸತೀಶ್ ಕಡತನಮಲೆ, ಅರಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಸಿ.ಎಲ್.ಎನ್.ಗೌಡ, ಮುಖಂಡರಾದ ಚೊಕ್ಕನಹಳ್ಳಿ ನಾಗೇಶ್, ಅರಸೇಗೌಡ, ಮುನಿಕೃಷ್ಣಪ್ಪ, ದಿಬ್ಬೂರು ಮಧು ಇದ್ದರು.

ಕಸ ಮುಕ್ತಿ ಯೋಜನೆಗೆ ಸಹಕಾರ: ವಿಶ್ವನಾಥ್

ಅರಕೆರೆ ಭಾಗದಲ್ಲಿ ಬಯೋ ರಿಫೈನರಿ ಘಟಕ ಸ್ಥಾಪನೆಯ ಪ್ರಸ್ತಾಪ ಕುರಿತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಪ್ರೈ.ಲಿ. ಸಂಸ್ಥೆಯ ಪ್ರತಿನಿಧಿಗಳು ಅರಕೆರೆಯಲ್ಲಿ ಬೃಹತ್ ಬಯೋ ರಿಫೈನರಿ ಘಟಕ ಸ್ಥಾಪಿಸಲು ಇಂಗಿತ ವ್ಯಕ್ತಪಡಿಸಿರುವುದು ಸಂತೋಷದ ಸಂಗತಿ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕಸ ವಿಲೇವಾರಿ ಯದ್ದೇ ಬಹುದೊಡ್ಡ ಲಾಬಿಯಾಗಿದ್ದು, ನಗರದ ಕಸಕ್ಕೆ ಶಾಶ್ವತ ಮುಕ್ತಿ ಕಾಣಿಸುವ ಯಾವುದೇ ಪ್ರಯತ್ನಕ್ಕೆ ನನ್ನ ಬೆಂಬಲವಿದೆ ಎಂದರು.