ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಊರಿಗೊಂದು ಕೆರೆ ನಿರ್ಮಾಣವಾದರೆ ನೀರಿನ ಸಮಸ್ಯೆಗಳು ನೀಗಲಿವೆ. ಜನರ ಜೀವ ಉಳಿಸುವ ನೀರು ಅಮೃತ ಸಮಾನವಾಗಿದೆ. ಬರಗಾಲ ಛಾಯೆಯ ಪರಿಣಾಮ ಅಂತರ್ಜಲಮಟ್ಟ ತೀವ್ರ ಕುಸಿತವಾಗಿದ್ದು, ಈ ಕುರಿತು ಸ್ಥಳೀಯ ಗ್ರಾಮ ಪಂಚಾಯತಿಗಳು, ಸರ್ಕಾರಗಳು ವಿಚಾರ ಮಾಡಬೇಕಿದೆ ಎಂದು ಶಾಸಕ ಜೆ. ಟಿ. ಪಾಟೀಲ ಅಭಿಪ್ರಾಯಪಟ್ಟರು.ತಾಲೂಕಿನ ಸುನಗ ತಾಂಡಾ-೧ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೀಳಗಿ ತಾಲೂಕು, ಗ್ರಾಪಂ ಸುನಗ, ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ್ದ ನಮ್ಮೂರು ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿಗಳು ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದಕ್ಕೆ ಅಭಿನಂದಿಸಿದರು.
ಇತಿಹಾಸ ತೆಗೆದು ನೋಡಿದಾಗ ಹಲವರಿಗೆ ಹಲವು ರೀತಿಯ ಪರೀಕ್ಷೆಗಳು ಎದುರಾಗಿವೆ. ಪ್ರಸ್ತುತ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ ಪರೀಕ್ಷೆ ಕಾಲವನ್ನು ದುಷ್ಟರು ಒಡ್ಡಿದ್ದಾರೆ. ಸುಜಾತಾ ಸುಳ್ಳು ಹೇಳಿದ್ದಕ್ಕೆ ಧರ್ಮಾಧಿಕಾರಿಗಳ ಕ್ಷಮೆ ಕೇಳುವುದಾಗಿ ಹೇಳಿದ್ದು, ಇದೆಲ್ಲ ಏಕೆ ಬೇಕು ಎಂದು ಹರಿಹಾಯ್ದರು.ರಾಜಕಾರಣಿಗಳು ಸಹಿತ ತಪ್ಪು ಮಾಡಿದಾಗ ಮಂಜುನಾಥ ಸ್ವಾಮಿಯ ಮೇಲೆ ಆಣೆ ಪ್ರಮಾಣ ಮಾಡಲು ಹೇಳುವರು. ಇಂಥ ಪವಿತ್ರ, ಜಾಗೃತ ತಾಣದ ಮೇಲೆ ಇಲ್ಲಸಲ್ಲದ ಅಪವಾದ ಹೊರಿಸುವ ಮೂಲಕ ಶ್ರೀಕ್ಷೇತ್ರಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವ ದುಷ್ಟರಾದ ತಿಮರೋಡಿ, ಮಟ್ಟನ್ನವರ, ವಿಠ್ಠಲಗೌಡ, ಮುಸುಕುದಾರಿ ಚಿನ್ನಯ್ಯ ಇವರು ಮಂಜುನಾಥ ಸ್ವಾಮಿಯ ತಾಣ, ಹೆಗ್ಗಡೆಯವರ ಕಾರ್ಯಕ್ಷಮತೆ ಪರೀಕ್ಷೆ ಮಾಡಲು ಹೊರಟಿದ್ದಾರೆ. ಇವರಿಗೆ ಭಗವಂತನೇ ಸರಿಯಾದ ಶಿಕ್ಷೆ ಕೊಡಲಿ ಎಂದು ಹೇಳಿದರು.
ಜಿಲ್ಲಾ ಯೋಜನಾಧಿಕಾರಿ ಚನ್ನಕೇಶವ ಮಾತನಾಡಿ, ಧರ್ಮಾಧಿಕಾರಿಗಳು ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುತ್ತಿದ್ದು, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ೮೩೮ನೇ ಕೆರೆಯನ್ನು ಇಂದು ಕೆರೆ ಅಭಿವೃದ್ಧಿ ಸಮಿತಿಗೆ ಹಸ್ತಾಂತರ ಮಾಡುತ್ತಿರುವ ಕೆರೆಯನ್ನು ೮.೭೩ ಲಕ್ಷ ರೂ. ಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕೆರೆಯ ಹೂಳು ಎತ್ತಿದ ಬಳಿಕ ಶಾಸಕರು ಈ ಕೆರೆ ಸೇರಿದಂತೆ ಒಟ್ಟು ೩ ಕೆರೆಗೆ ನೀರು ತುಂಬಿಸಿದ್ದಕ್ಕೆ ಅಭಿನಂದನೆ ತಿಳಿಸಿದರಲ್ಲದೇ, ಕೆರೆ ಅಭಿವೃದ್ಧಿ ಸಮಿತಿಯವರು ಕೆರೆ ಸಂರಕ್ಷಣೆ ಮಾಡಿಕೊಳ್ಳಬೇಕು. ಅಂತರ್ಜಲಮಟ್ಟ ಹೆಚ್ಚಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕೆಂದರು.ಸುನಗ ಗ್ರಾಪಂ ಅಧ್ಯಕ್ಷೆ ಪವಿತ್ರಾ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಸುಬ್ರಾಯ ಕೆ., ಜನಜಾಗೃತಿ ವೇದಿಕೆ ಅಧ್ಯಕ್ಷ ಶ್ರೀಕಾಂತ ಸಂಧಿಮನಿ, ಗ್ರಾಪಂ ಉಪಾಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಮೇಟಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನಮಂತ ಪವಾರ, ಪ್ರವೀಣಕುಮಾರ ಹಿರೇಮಠ, ಪಿಡಿಒ ಮಹೇಶ ಜಗಲಿ, ಆನಂದ ಲಮಾಣಿ, ಈರಣ್ಣ ನಾಗರಾಳ, ಮಲ್ಲಪ್ಪ ಕರಿಗಾರ, ಲಕ್ಷö್ಮಣ ಗಾಳಿ, ರವಿ ಲಿಂಗಣ್ಣವರ, ನಾರಾಯಣ ಲಮಾಣಿ, ದಾಸು ಲಮಾಣಿ, ಪಾಂಡು ಲಮಾಣಿ ಮತ್ತಿತರಿದ್ದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಾಭ ಮಾಡುವ ಸಂಸ್ಥೆಯಲ್ಲ. ಸಾವಿರಾರು ಕೋಟಿ ರೂ. ಹೊಂದಿದೆ. ಇಂಥ ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ವಜನಿಕರ ಬದುಕಿಗೆ ಆಸರೆಯಾಗಬೇಕು. ಮಹಿಳಾ ಸಬಲೀಕರಣಕ್ಕಾಗಿ ಕೊಡುತ್ತಿರುವ ಸಾಲ ಸೌಲಭ್ಯಕ್ಕೆ ಕಡಿಮೆ ಬಡ್ಡಿ ಆಕರಣೆ ಮಾಡಬೇಕು.
-ಜೆ.ಟಿ. ಪಾಟೀಲ ಶಾಸಕರು ಬೀಳಗಿ-