ಸಾರಾಂಶ
ಜನಾದೇಶದೊಂದಿಗೆ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮಂದಿ ಮೊದಲಿನಿಂದಲೂ ಹವಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜನಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮಂದಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಆರೋಪಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜನಾದೇಶದೊಂದಿಗೆ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮಂದಿ ಮೊದಲಿನಿಂದಲೂ ಹವಣಿಸುತ್ತಿದ್ದಾರೆ. ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ಕ್ರಮ ಅಸಂವಿಧಾನಿಕ ಮತ್ತು ಇದು ಬಿಜೆಪಿಯ ಷಡ್ಯಂತ್ರದ ಒಂದು ಭಾಗ ಎಂದು ಟೀಕಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತರು ರಾಜ್ಯಪಾಲರಿಗೆ ನೀಡಿರುವ ದೂರು ಮತ್ತು ಕೆಲವು ಮಾಜಿ ಮುಖ್ಯಮಂತ್ರಿಗಳ ವಿರುದ್ಧದ ಪ್ರಕರಣವನ್ನು ರಾಜ್ಯಪಾಲರು ಯಾಕೆ ಇನ್ನೂ ಪರಿಗಣಿಸಿಲ್ಲ ಎಂದು ಪ್ರಶ್ನಿಸಿರುವ ಧರ್ಮಜ ಉತ್ತಪ್ಪ, ಕೇವಲ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಖಾಸಗಿ ವ್ಯಕ್ತಿಗಳು ನೀಡಿದ ದೂರನ್ನು ಶೀಘ್ರ ಪರಿಶೀಲಿಸಿ ವಿಚಾರಣೆಗೆ ಅನುಮತಿ ನೀಡಿರುವುದನ್ನು ಗಮನಿಸಿದರೆ ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿರುವುದು ಸ್ಪಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಆಪರೇಷನ್ ಕಮಲಕ್ಕೆ ಪ್ರಯತ್ನಪಟ್ಟ ಬಿಜೆಪಿ ಅದು ವಿಫಲವಾದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪರಸ್ಪರ ಬಣಗಳಾಗಿ ಒಡೆಯಲು ಪ್ರಯತ್ನಿಸಿದರು. ಇದು ಸಂಪೂರ್ಣವಾಗಿ ವಿಫಲವಾದಾಗ ರಾಜಭವನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ನಾಡಿನ ಜನತೆ ಸರ್ಕಾರದ ಪರವಾಗಿದ್ದಾರೆ. ಪಕ್ಷದ ಹೈಕಮಾಂಡ್, ಇಡೀ ಸಚಿವ ಸಂಪುಟ ಹಾಗೂ ಪಕ್ಷದ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.