ರಾಜಕೀಯವಾಗಿ ಮುಗಿಸಲು ಕಾಣದ ಕೈಗಳ ವ್ಯವಸ್ಥಿತಿ ಪಿತೂರಿ: ಅರುಣ್‌ ಕುಮಾರ್‌ ಪುತ್ತಿಲ

| Published : Sep 12 2024, 01:59 AM IST

ರಾಜಕೀಯವಾಗಿ ಮುಗಿಸಲು ಕಾಣದ ಕೈಗಳ ವ್ಯವಸ್ಥಿತಿ ಪಿತೂರಿ: ಅರುಣ್‌ ಕುಮಾರ್‌ ಪುತ್ತಿಲ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಾಲದಯಲ್ಲಿನ ಪ್ರಕರಣ ಮುಕ್ತಾಯವಾದ ಬಳಿಕ ನಿಮ್ಮೊಂದಿಗೆ ಔಪಚಾರಿಕ ಮಾತುಕತೆ ಮತ್ತು ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಪುತ್ತಿಲ ಹೇಳಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರ ವಿರುದ್ಧ ಅತ್ಯಾಚಾರ ಆರೋಪದಡಿ ದಾಖಲಾಗಿರುವ ಎಫ್‌ಐಆರ್ ಮತ್ತು ನ್ಯಾಯಾಲಯದ ಮುಂದಿನ ತನಿಖಾ ಪ್ರಕ್ರಿಯೆಗೆ ಮಂಗಳವಾರ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಬುಧವಾರ ಬೆಳಗ್ಗೆ ಅರುಣ್ ಪುತ್ತಿಲ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಾರ್ಯಕರ್ತರ ಜೊತೆಗೂಡಿ ಆಗಮಿಸಿ ದೇವರಿಗೆ ಮಲ್ಲಿಗೆ ಸಮರ್ಪಣೆ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾದ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ನನ್ನ ವಿರುದ್ಧ ಮಾಡಿದ ಷಡ್ಯಂತ್ರಗಳ ಬಗ್ಗೆ ಪುತ್ತೂರಿನ ಜನತೆಗೆ, ಜಿಲ್ಲೆಗೆ ತಿಳಿದಿದೆ. ಕಾಣದ ಕೈಗಳು ವ್ಯವಸ್ಥಿತವಾದ ಪಿತೂರಿಯಿಂದ ಈ ಕಾರ್ಯವನ್ನು ಮಾಡುತ್ತಾ ರಾಜಕೀಯವಾಗಿ ನನ್ನನ್ನು ಮುಗಿಸುವ ಹುನ್ನಾರ ಮಾಡಿದ್ದಾರೆ. ಆದರೆ ಮಹಾಲಿಂಗೇಶ್ವರ ಮತ್ತು ಉಳ್ಳಾಲ್ತಿ ಅಮ್ಮನವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಯಾವತ್ತೂ ಕೂಡ ಸತ್ಯಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ನಾನು ಹಿಂದುತ್ವದ ಮತ್ತು ಸಮಾಜದ ಕೆಲಸವನ್ನು ಎಲ್ಲರ ಸಹಕಾರದಲ್ಲಿ ಮಾಡಿಕೊಂಡು ಬಂದಿದ್ದೇನೆ. ಶನಿಪೂಜೆ, ಅಕ್ಷತಾ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಿದ ಸಂದರ್ಭ, ಸೌಮ್ಯ ಕೊಲೆ ಪ್ರಕರಣದ ಸಂದರ್ಭದಲ್ಲಿ ನನ್ನ ವಿರುದ್ದ ಅನೇಕ ಪಿತೂರಿ ನಡೆದಿದೆ. ಈಗಲೂ ಈ ಪ್ರಯತ್ನ ನಡೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಇದಾಗಿದೆ ಎಂದರು. ನ್ಯಾಯಾಲದಯಲ್ಲಿನ ಪ್ರಕರಣ ಮುಕ್ತಾಯವಾದ ಬಳಿಕ ನಿಮ್ಮೊಂದಿಗೆ ಔಪಚಾರಿಕ ಮಾತುಕತೆ ಮತ್ತು ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಪುತ್ತಿಲ ಹೇಳಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾರ್ತ ಮಾತನಾಡಿ, ನ್ಯಾಯಾಲಯ ಪುತ್ತಿಲ ಅವರಿಗೆ ರಿಲೀಫ್ ನೀಡಿದೆ. ಈ ಕ್ಷಣದಿಂದಲೇ ಅವರು ಪಕ್ಷದ ಸಂಘಟನೆಗಾಗಿ ಕೆಲಸ ಮಾಡಲಿದ್ದಾರೆ. ಎಲ್ಲ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಕೃಷ್ಣ ಉಪಾಧ್ಯಾಯ ಮತ್ತಿತರು ಉಪಸ್ಥಿತರಿದ್ದರು.

ದೂರು ನೀಡಿದ ಮಹಿಳೆ ದೇವಸ್ಥಾನಕ್ಕೇ ಭೇಟಿ, ಪ್ರಾರ್ಥನೆಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರ ಮೇಲೆ ಎಫ್‌ಐಆರ್ ಮತ್ತು ಮುಂದಿನ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನಲೆಯಲ್ಲಿ ಪುತ್ತಿಲ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಮುನ್ನ ಅವರ ವಿರುದ್ದ ಅತ್ಯಾಚಾರದ ದೂರು ನೀಡಿರುವ ಮಹಿಳೆಯೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬುಧವಾರ ಬೆಳಗ್ಗೆ ೮.೩೦ಕ್ಕೆ ದೇವಳಕ್ಕೆ ತನ್ನ ಪುತ್ರಿಯೊಂದಿಗೆ ಆಗಮಿಸಿದ ಮಹಿಳೆಯು ರುದ್ರಾಭಿಷೇಕ ಸೇವೆ ಸಲ್ಲಿಸಿ, ಸಂಕಲ್ಪ ನೆರವೇರಿಸಿ ತೆರಳಿದರು. ಮಹಿಳೆಯು ತೆರಳಿದ ಬಳಿಕ ಬೆಳಗ್ಗೆ ೯.೧೫ಕ್ಕೆ ಅರುಣ್ ಕುಮಾರ್ ಪುತ್ತಿಲ ದೇವಳಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.