ಸಾರಾಂಶ
ಆದರಳ್ಳಿ ಗ್ರಾಮದ ಗವಿಮಠದಿಂದ ನನ್ನನ್ನು ಹೊರ ಹಾಕಲು ತಾಲೂಕಿನ ರಾಜಕೀಯ ಮುಖಂಡರು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಅವರು ಮಾತಾಡಿರುವ ವಾಯಸ್ ರೇಕಾರ್ಡ್ ನನ್ನ ಹತ್ತಿರ ಇದ್ದು, ಅದನ್ನು ಶೀಘ್ರದಲ್ಲಿ ಮಾಧ್ಯಮಗಳಿಗೆ ನೀಡುತ್ತೇನೆ ಎಂದು ಆದರಳ್ಳಿ ಗವಿಮಠದ ಕುಮಾರ ಮಹಾರಾಜರು ಹೇಳಿದರು.
ಲಕ್ಷ್ಮೇಶ್ವರ: ಆದರಳ್ಳಿ ಗ್ರಾಮದ ಗವಿಮಠದಿಂದ ನನ್ನನ್ನು ಹೊರ ಹಾಕಲು ತಾಲೂಕಿನ ರಾಜಕೀಯ ಮುಖಂಡರು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಅವರು ಮಾತಾಡಿರುವ ವಾಯಸ್ ರೇಕಾರ್ಡ್ ನನ್ನ ಹತ್ತಿರ ಇದ್ದು, ಅದನ್ನು ಶೀಘ್ರದಲ್ಲಿ ಮಾಧ್ಯಮಗಳಿಗೆ ನೀಡುತ್ತೇನೆ ಎಂದು ಆದರಳ್ಳಿ ಗವಿಮಠದ ಕುಮಾರ ಮಹಾರಾಜರು ಹೇಳಿದರು.
ಸಮೀಪದ ಆದರಳ್ಳಿ ಗ್ರಾಮದ ಸಂತ ಸೇವಾಲಾಲ್ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ, ಆದರಳ್ಳಿ ಗ್ರಾಮದ ಸುತ್ತ ಮುತ್ತ ನಡೆಯುತ್ತಿರುವ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ತಡೆಯಲು ಹೋದ ನನ್ನ ಗಡಿಪಾರಿಗೆ ಆಗ್ರಹಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ನಾವು ನ್ಯಾಯಯುತ ಹೋರಾಟ ಮಾಡುತ್ತಿದ್ದರೆ ಇತ್ತ ನಮ್ಮ ಆದರಳ್ಳಿ ಗ್ರಾಮದ ಗವಿಮಠದ ನಮ್ಮ ಆಶ್ರಮಕ್ಕೆ ಕೆಲ ಕಿಡಿಗೇಡಿಗಳು ಬೀಗ ಜಡಿದಿದ್ದಾರೆ. ಇದರ ಹಿಂದೆ ಕೆಲ ರಾಜಕೀಯ ಮುಖಂಡರ ಕೈವಾಡವಿದೆ. ರಾಜಕೀಯ ಮುಖಂಡರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ಮಠದಿಂದ ನನ್ನನ್ನು ಹೊರ ಹಾಕುವ ಷಡ್ಯಂತ್ರ ಮಾಡುತ್ತಿದ್ದಾರೆ. ನನಗೆ ಮಠ ಮುಖ್ಯವಲ್ಲ, ಸಮಾಜದಲ್ಲಿನ ಮೂಢ ನಂಬಿಕೆ ಹೋಗಲಾಡಿಸುವುದು ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆಯಲು ಹೋದಾಗ ನನ್ನನ್ನು ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಮೂಲಕ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇಂತಹ ಘಟನೆಗಳಿಗೆ ನಾನು ಅಂಜುವುದಿಲ್ಲ. ಮಠದ ಭಕ್ತರು ಹಾಗೂ ಗ್ರಾಮಸ್ಥರು ನನಗೆ ಮಠ ಬಿಟ್ಟು ಹೋಗಲು ತಿಳಿಸಿದರೆ ನಾನು ಮಠದಿಂದ ದೂರ ಹೋಗಲು ಸಿದ್ದನಿದ್ದೇನೆ. ಆದರೆ ನಾನು ಯಾವ ತಪ್ಪು ಮಾಡದೆ ಇದ್ದರೂ ನನ್ನ ಮೇಲೆ ವಿನಾಕಾರಣ ಆರೋಪ ಹೊರಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ನನ್ನ ಮೇಲೆ ಮಾಡಿರುವ ಆರೋಪಗಳಿಗೆ ಸಾಕ್ಷಿ ನೀಡಿದರೆ ಅವರು ಹೇಳಿದಂತೆ ಮಠ ಬಿಟ್ಟು ಹೋಗುತ್ತೇನೆ, ನಮ್ಮ ಬಂಜಾರ ಸಮಾಜದ ಹಿರಿಯರು ಹಾಗೂ ಗ್ರಾಮದ ಶ್ರೀಮಠದ ಅಭಿಮಾನಿಗಳು ನ್ಯಾಯುತ ತೀರ್ಮಾನ ಮಾಡುವುದಾಗಿ ತಿಳಿಸಿದ್ದರಿಂದ ಅವರ ಮಾತಿಗೆ ಕಟ್ಟು ಬಿದ್ದು ಸುಮ್ಮನಿದ್ದೇನೆ ಎಂದು ಹೇಳಿದರು.ಸಂಜೆಯ ವೇಳೆಗೆ ಬಂಜಾರ ಸಮಾಜದ ಕೆಲ ಮುಖಂಡರು ಹಾಗೂ ಶ್ರೀಮಠದ ಭಕ್ತರು ತೆಗೆದುಕೊಂಡ ತೀರ್ಮಾನದಂತೆ ಶ್ರೀಮಠಕ್ಕೆ ಹೋಗಿ ಶ್ರೀಮಠದಲ್ಲಿನ ನಿತ್ಯ ಪೂಜಾ ಚಟುವಟಿಕೆ ಮುಂದುವರೆಸಿಕೊಂಡು ಹೋಗುವಂತೆ ತಿಳಿಸಿದ್ದರಿಂದ ಶ್ರೀಮಠಕ್ಕೆ ಹೋಗಿರುವುದಾಗಿ ತಿಳಿದು ಬಂದಿದೆ.