ನನ್ನನ್ನು ಸೋಲಿಸಲು ಕೆಲವರಿಂದ ಷಡ್ಯಂತ್ರ: ಕುಮಾರಸ್ವಾಮಿ

| Published : Apr 25 2024, 01:11 AM IST / Updated: Apr 25 2024, 01:22 PM IST

ಸಾರಾಂಶ

ಜೆಡಿಎಸ್ ಪಕ್ಷ ಏನು ಮಾಡಿದೆ ಎಂಬುದು ಜಿಲ್ಲೆಯ ಜನರು, ರೈತರಿಗೆ ಗೊತ್ತು. ಜಿಲ್ಲೆಗೆ ದೇವೇಗೌಡರು ಮತ್ತು ನನ್ನ ಕೊಡುಗೆ ಹೇಳುತಾ ಹೋದರೆ ದಿನಗಳೇ ಸಾಲುವುದಿಲ್ಲ - ಎಚ್ ಡಿಕೆ

 ಮದ್ದೂರು :   ಕುತಂತ್ರಗಳ ಮೂಲಕ ಕೆಲ ರಾಜಕಾರಣಿಗಳು ನನ್ನನ್ನು ಸೋಲಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಮತದಾರರು ಇದಕ್ಕೆ ಮಾನ್ಯತೆ ನೀಡದೇ ನಿಮ್ಮ ಮನೆ ಮಗ ಎಂದು ಭಾವಿಸಿ ಚುನಾವಣೆಯಲ್ಲಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮೈತ್ರಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ತಾಲೂಕಿನ ಕೊಪ್ಪದಲ್ಲಿ ಬುಧವಾರ ರೋಡ್ ಶೋ ಮೂಲಕ ಪ್ರಚಾರ ನಡೆಸಿದ ವೇಳೆ ಮಾತನಾಡಿ, ನಾವೇ ಕರೆತಂದು ರಾಜಕೀಯದಲ್ಲಿ ಬೆಳೆಸಿದವರು ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕೊಡುಗೆ ಏನೆಂದು ಪ್ರಶ್ನಿಸುವ ಹಂತಕ್ಕೆ ಬೆಳೆದಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೆಸರೆಳದೆ ಹರಿಹಾಯ್ದರು.

ಜೆಡಿಎಸ್ ಪಕ್ಷ ಏನು ಮಾಡಿದೆ ಎಂಬುದು ಜಿಲ್ಲೆಯ ಜನರು, ರೈತರಿಗೆ ಗೊತ್ತು. ಜಿಲ್ಲೆಗೆ ದೇವೇಗೌಡರು ಮತ್ತು ನನ್ನ ಕೊಡುಗೆ ಹೇಳುತಾ ಹೋದರೆ ದಿನಗಳೇ ಸಾಲುವುದಿಲ್ಲ. ಮೊದಲು ಇತಿಹಾಸ ಅರಿತು ಚಲುವರಾಯಸ್ವಾಮಿ ಮಾತನಾಡಲಿ ಎಂದು ಸಲಹೆ ನೀಡಿದರು.

ಅಂದು ಕಾಂಗ್ರೆಸ್ ನಾಯಕರು ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದರು. ಮೇಕೆದಾಟು ಯೋಜನೆ ರೂಪಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ನಂತರ ಸ್ವಾರ್ಥ ರಾಜಕಾರಣಕ್ಕೆ ಮುಂದಾದರು ಎಂದು ಕಿಡಿಕಾರಿದರು.

ಕೆಆರ್ ಎಸ್ ಅಣೆಕಟ್ಟೆಯಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ಮಂಡ್ಯ ಜಿಲ್ಲೆ ಮತ್ತು ರಾಜ್ಯದಲ್ಲಿ ಬರವಂತೆ ಮಾಡಿದ್ದಾರೆ. ಹನಿ ನೀರಿಗೂ ಪರಿತಪ್ಪಿಸುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ತಾತ್ಕಾಲಿಕ ಯೋಜನೆಗಳನ್ನು ನೀಡಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳನ್ನು ಜನರಿಗೆ ನೀಡುತ್ತಿಲ್ಲ. ಈ ಮೂಲಕ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ದೂರಿದರು.

ಜಿಲ್ಲೆಯ ಜನರ ಅಶೀರ್ವಾದದಿಂದ ನಾನು ಸಂಸಸದನಾಗಿ ಆಯ್ಕೆಯಾದರೆ ಜಿಲ್ಲೆಯ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತೇನೆ. ಮೇಕೆದಾಟು ಯೋಜನೆಯನ್ನು ಕಾನೂನು ವ್ಯಾಪ್ತಿಯಲ್ಲಿ ಶೀಘ್ರವಾಗಿ ಕಾಮಗಾರಿ ಆರಂಭಿಸುತ್ತೇನೆ. ಜೊತೆಗೆ ಕೊಪ್ಪ ಮತ್ತು ಮದ್ದೂರಿನ ಕೊನೆ ಭಾಗಕ್ಕೆ ಶೀಘ್ರವಾಗಿ ಕೆಆರ್ ಎಸ್ ನಿಂದ ನೀರು ತಲುಪುವಂತೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕಪಡಿಸಿದರು.

ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳನ್ನು ಬಿಜೆಪಿ - ಜೆಡಿಎಸ್ ನ ಎನ್ ಡಿಎ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಶೀಘ್ರ ಪತನವಾಗಿ ಹೊಸ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದರು.

ಈ ವೇಳೆ ಮಾಜಿ ಶಾಸಕರಾದ ಸುರೇಶ್ ಗೌಡ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಿರದಕೋಟೆ ಕುಶ, ಯುವ ಘಟಕದ ಉಪಾಧ್ಯಕ್ಷ ಪ್ರದೀಪ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಮುಖಂಡರಾದ ಕೆ.ವಿವೇಕಾನಂದ, ಸುನೀಲ್ ಕುಮಾರ್, ಕೋಣಸಾಲೆ ಮಧು ಇದ್ದರು.

ಎಚ್ಡಿಕೆಗೆ ಹಣ ನೀಡಿದ ದೃಷ್ಟಿಹೀನ ವ್ಯಕ್ತಿ:  ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಕೊಪ್ಪದಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ದೃಷ್ಟಿಹೀನ ವ್ಯಕ್ತಿಯೊಬ್ಬರು ತಾವು ಕೂಡಿಟ್ಟ ಹಣವನ್ನು ಚುನಾವಣಾ ವೆಚ್ಚಕ್ಕೆ ನೀಡಿದರು. ಇದರಿಂದ ಒಂದು ಕ್ಷಣ ಭಾವುಕರಾದ ಕುಮಾರಸ್ವಾಮಿ ನಾನು ಸಂಪಾದಿಸಿರುವುದು ಇಂತವರ ಪ್ರೀತಿ, ವಿಶ್ವಾಸವನ್ನು. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವರ ಋಣವನ್ನು ಎಂದಿಗೂ ನಾನು ತೀರಿಸಲು ಸಾಧ್ಯವಿಲ್ಲ ಎಂದರು.