ನನ್ನನ್ನು ಜೈಲಿಗೆ ಕಳುಹಿಸಲು ಷಡ್ಯಂತ್ರ ನಡೀತಿದೆ: ಡಿಕೆಶಿ

| Published : Feb 13 2024, 12:50 AM IST

ನನ್ನನ್ನು ಜೈಲಿಗೆ ಕಳುಹಿಸಲು ಷಡ್ಯಂತ್ರ ನಡೀತಿದೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನನ್ನು ಜೈಲಿಗೆ ಕಳುಹಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಈ ಬಗ್ಗೆ ನಮ್ಮ ಜಿಲ್ಲೆಯವರು ಸೇರಿ ಅನೇಕರು ಮಾತನಾಡಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರನನ್ನನ್ನು ಜೈಲಿಗೆ ಕಳುಹಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಈ ಬಗ್ಗೆ ನಮ್ಮ ಜಿಲ್ಲೆಯವರು ಸೇರಿ ಅನೇಕರು ಮಾತನಾಡಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ತಮ್ಮನ್ನು ಜೈಲಿಗೆ ಕಳುಹಿಸುತ್ತೇವೆಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಪದೇ ಪದೆ ಹೇಳುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ನನ್ನನ್ನು ಜೈಲಿಗೆ ಕಳುಹಿಸುವುದಾಗಿ ನನ್ನ ಜಿಲ್ಲೆಯವರೂ ಸೇರಿ ಅನೇಕರು ಮಾತನಾಡಿದ್ದಾರೆ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಸಿಬಿಐ, ಬೇರೆಯವರ ಮೂಲಕ ಏನೇನೋ ಮಾಡಿಸುತ್ತಿದ್ದಾರೆಂಬುದು ನನಗೂ ಗೊತ್ತಿದೆ. ಸಮಯ ಬಂದಾಗ ಆ ಕುರಿತು ಮಾತನಾಡುತ್ತೇನೆ ಎಂದರು.ಡಿ.ಕೆ. ಸೋದರರನ್ನು ರಾಮನಗರದಲ್ಲಿ ಕಟ್ಟಿಹಾಕಲು ಬದ್ಧವೈರಿಗಳು ಒಂದಾಗಿದ್ದಾರೆಯೇ ಎಂಬ ಪ್ರಶ್ನೆಗೆ, ಯಾರು ಏನಾದರೂ ಮಾಡಲಿ. ಅವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ರಾಜಕಾರಣ ಮಾಡುವವರನ್ನು ನಾವು ಬೇಡ ಎನ್ನಲು ಸಾಧ್ಯವೇ? ಹಿಂದೆಯೂ ಸುರೇಶ್ ಅವರು ಚುನಾವಣೆಗೆ ನಿಂತಾಗ ದಳ ಮತ್ತು ಬಿಜೆಪಿ ಒಪ್ಪಂದ ಮಾಡಿಕೊಂಡು ಅನಿತಾ ಕುಮಾರಸ್ವಾಮಿಯವರನ್ನು ಮಾತ್ರ ಕಣಕ್ಕಿಳಿಸಿದ್ದರು. ಅವರು ಏನೇ ರಾಜಕಾರಣ ಮಾಡಲಿ. ರಾಜ್ಯದ 28 ಸಂಸದರ ಪೈಕಿ ಸುರೇಶ್ ಮಾಡಿರುವ ಕೆಲಸ ಬೇರಿನ್ಯಾವ ಸಂಸದರೂ ಮಾಡಿಲ್ಲ. ಅದಕ್ಕೆ ದಾಖಲೆಗಳಿವೆ ಎಂದು ಸೋದರನನ್ನು ಶಿವಕುಮಾರ್‌ ಸಮರ್ಥಿಸಿಕೊಂಡರು.

ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಕುಮಾರಸ್ವಾಮಿ ಈ ಹಿಂದೆ ಹೇಳಿದ್ದೆಲ್ಲ ಮತ್ತೆ ನೆನಪಿಸಿಕೊಳ್ಳಿ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ದೇವೇಗೌಡರೇ ಹೇಳಿದ್ದರು. ಆಗ ಪ್ರಧಾನಿಗಳು ನನ್ನ ಮನೆಯಲ್ಲೇ ಜಾಗ ನೀಡುತ್ತೇನೆ ಬನ್ನಿ ಎಂದಿದ್ದರು. ಕುಮಾರಸ್ವಾಮಿ ಮಾತುಗಳ ದಾಖಲೆ ನಿಮ್ಮ ಬಳಿಯೇ ಇದೆ ಅಲ್ಲವೇ? ಎಂದು ಟಾಂಗ್ ನೀಡಿದರು.

ಕುಡಿಯುವ ನೀರು, ಅರಣ್ಯ ಜಮೀನು ಕೊಡಿಸಿರುವುದು, ಕೆರೆ ತುಂಬಿಸಿರುವುದು, ನಿವೇಶನ ಹಂಚಿಕೆ ಸೇರಿ ಅನೇಕ ಕೆಲಸಗಳನ್ನು ಡಿ.ಕೆ.ಸುರೇಶ್‌ ಮಾಡಿದ್ದಾರೆ. ಈಗ ಸ್ಪರ್ಧಿಸುವವರು ತಮ್ಮ ಬಳಿ ಅಧಿಕಾರ ಇದ್ದಾಗ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸಿದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, ರಾಜ್ಯದ ಮಹಿಳೆಯರಿಗೆ 2 ಸಾವಿರ ಪಡೆಯುತ್ತಿರುವುದು, ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುತ್ತಿರುವುದು, ಯುವಕರು ನಿರುದ್ಯೋಗ ಭತ್ಯೆ ಪಡೆಯುತ್ತಿರುವುದು, ಬಡವರಿಗೆ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣ ಸಿಗುತ್ತಿರುವುದು, 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತಿರುವುದೆಲ್ಲ ಸುಳ್ಳೇ ಎಂದು ಪ್ರಶ್ನಿಸಿದರು.ಬಿಜೆಪಿಯವರು ಕೇಸರಿ ಶಾಲು ಧರಿಸಿ ಸದನ ಪ್ರವೇಶಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಏನು ಬೇಕಾದರೂ ಮಾಡಲಿ, ಬಣ್ಣಬೇಕಿದ್ದರೂ ಹಾಕಿಕೊಳ್ಳಲಿ, ನಮ್ಮದೇನೂ ಅಭ್ಯಂತರವಿಲ್ಲ. ಅವರು ರಾಮನ ಹೆಸರಲ್ಲಿ ಮತ ಕೇಳಲು ಹೊರಟಿದ್ದಾರೆ. ರಾಮ ಭಕ್ತ ಆಂಜನೇಯನ ದೇವಾಲಯವನ್ನು ಕೆಂಗಲ್ ಹನುಮಂತಯ್ಯ ಕಟ್ಟಿಸಿಲ್ವಾ? ರಾಮ ಅವರ ಮನೆ ಆಸ್ತಿಯೇ? ರಾಮ ನಮ್ಮ ಆಸ್ತಿಯಲ್ವೇ? ನಾವು ಹಿಂದೂಗಳಲ್ಲವೇ? ಎಂದು ತಿರುಗೇಟು ನೀಡಿದರು.