ನಮೋ ವೇದಿಕೆಗೆ ಸಂಸದರದ್ದೇ ಕುಮ್ಮಕ್ಕು: ಎಂ.ಡಿ.ಉಮೇಶ್

| Published : Sep 19 2024, 01:49 AM IST

ಸಾರಾಂಶ

ಬಣ ರಾಜಕೀಯ ಸೃಷ್ಟಿಸಿ ಪಕ್ಷದ ಹಿನ್ನಡೆಗೆ ಕಾರಣವಾಗಿರುವ ನಮೋ ವೇದಿಕೆ ಮುಖಂಡರಿಗೆ ಸಂಸದ ಬಿ.ವೈ.ರಾಘವೇಂದ್ರ ಕುಮ್ಮಕ್ಕು ನೀಡುವುದಲ್ಲದೇ ಆಕ್ಸಿಜನ್ ತುಂಬುತ್ತಿದ್ದಾರೆ ಎಂದು ಬಿಜೆಪಿ ತಾಲ್ಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ.ಉಮೇಶ್ ಗುರುತರ ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ತಾಲ್ಲೂಕು ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಸೃಷ್ಟಿಸಿ ಪಕ್ಷದ ಹಿನ್ನಡೆಗೆ ಕಾರಣವಾಗಿರುವ ನಮೋ ವೇದಿಕೆ ಮುಖಂಡರಿಗೆ ಸಂಸದ ಬಿ.ವೈ.ರಾಘವೇಂದ್ರ ಕುಮ್ಮಕ್ಕು ನೀಡುವುದಲ್ಲದೇ ಆಕ್ಸಿಜನ್ ತುಂಬುತ್ತಿದ್ದಾರೆ ಎಂದು ಬಿಜೆಪಿ ತಾಲ್ಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ.ಉಮೇಶ್ ಆರೋಪಿಸಿದರು.

ಪಟ್ಟಣದ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಐದು ವರ್ಷಗಳಿಂದ ನಮೋ ವೇದಿಕೆ ಜೀವಂತ ವಾಗಿರುವಲ್ಲಿ ಪರೋಕ್ಷವಾಗಿ ಸಂಸದ ಬಿ.ವೈ.ರಾಘವೇಂದ್ರ ನೆರವು ನೀಡುತ್ತಿದ್ದಾರೆ. ನಮೋ ವೇದಿಕೆ ಮುಖಂಡರು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆ ಮೂಲಕ ಕುಮಾರ್ ಬಂಗಾರಪ್ಪನವರನ್ನು ಪಕ್ಷದಿಂದ ಉಚ್ಚಾಟಿಸು ವಂತೆ ನಮೋ ವೇದಿಕೆ ಮುಖಂಡರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇಂತವರನ್ನು ಕರೆದು ಸಂಸದರು ಬುದ್ಧಿ ಹೇಳಲಿ ಎಂದರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗೆ ನಡೆಸುವ ಆ ಗುಂಪಿಗೆ ತೆರೆಮರೆಯಲ್ಲಿ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ಪಡೆಯಲು ಕುಮಾರ್ ಬಂಗಾರಪ್ಪ ಅವರನ್ನು ಬಳಸಿಕೊಂಡ ಸಂಸದರು ಗೆದ್ದ ನಂತರ ಕುಮಾರ್ ಬಂಗಾರಪ್ಪ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ವಕೀಲ ಸೋಮಶೇಖರ್ ಮಾತನಾಡಿ, ಹಿಂದೆ ಹಾಲಪ್ಪನವರು ಇದ್ದಾಗಲೂ ಇದೇ ನಮೋ ವೇದಿಕೆಯಲ್ಲಿ ಗುರುತಿಸಿ ಕೊಂಡವರೇ ಹಾಲಪ್ಪ ವಿರುದ್ಧ ಇದೇ ರೀತಿಯ ಕುತಂತ್ರ ಮಾಡಿದ್ದರು. ಈಗ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಹೇಳುವ ನೈತಿಕತೆ ಇವರಿಗಿಲ್ಲ. ಇವರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಪಕ್ಷಕ್ಕೆ ಮುಜುಗರ ಮಾಡಿದ್ದಾರೆ. ಹಿಂದುಳಿದ ನಾಯಕ ಕುಮಾರ್ ಬಂಗಾರಪ್ಪ ಅವರ ಅಭಿವೃದ್ಧಿ ಕೆಲಸ ಗಳಿಗೆ ಯಾರೂ ಸರಿ ಸಾಟಿ ಇಲ್ಲ. ಅವರನ್ನು ಟೀಕಿಸುವ ಹಕ್ಕು ಉಳಿಸಿಕೊಂಡಿಲ್ಲ. ನಮೋ ವೇದಿಕೆ ಮುಖಂಡರಿಗೆ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಅವರ ಹಿಂದೆ ಯಾರ ಕೈವಾಡವಿದೆ ಎನ್ನುವುದು ಬಹಿರಂಗವಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಸಂಸದರ ಜೊತೆ ಸ್ನೇಹ ಬೆಳೆಸಿಕೊಂಡು ಅವರ ಕುಮ್ಮಕ್ಕಿನಿಂದಲೇ ಪಕ್ಷ ಒಡೆಯುತ್ತಿರುವ ಮುಖಂಡರನ್ನು ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರು ತಮ್ಮ ಶಕ್ತಿ ಕಳೆದು ಕೊಂಡಿದ್ದರಿಂದಲೆಲೇ ಕೆಲವರು ತಮ್ಮ ಸ್ವ-ಹಿತಾಸಕ್ತಿಗಾಗಿ ಪಕ್ಷದ ಸಂಘಟನೆಯನ್ನು ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡ ಕೃಷ್ಣಮೂರ್ತಿ ಕೊಡಕಣಿ ಮಾತನಾಡಿ, ಮೂಲ ಬಿಜೆಪಿಗರು ಎಂದು ಹೂಂಕರಿಸುವ ಮುಖಂಡರಿಗೆ ಶಾಸಕರನ್ನಾಗಿ ಮಾಡುವ ಶಕ್ತಿ ಇಲ್ಲ. ಸಂಸದರ ಮೂಲಕ ಬಣ ರಾಜಕಾರಣ ಮಾಡುವುದರಿಂದ ಮುಂದೆ ಜಿಲ್ಲಾ, ತಾಲ್ಲೂಕು ಹಾಗೂ ಸ್ಥಳೀಯ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಜನಪ್ರತಿನಿಧಿ ಗಳಾಗುವ ಅವಕಾಶ ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಸೋಮಶೇಖರ್, ಮಹೇಶ್ ತಾಳಗುಪ್ಪ, ಟೆಕಪ್ಪ ಕೊಡಕಣಿ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಮಾರುತಿ, ಶಿವನಗೌಡ, ನಿಂಗಪ್ಪ, ಪ್ರಭು ಮೇಸ್ತ್ರಿ, ಬಸವರಾಜ ತಲಗುಂದ, ಚನ್ನಬಸಪ್ಪ, ಬಸವರಾಜಪ್ಪ ಜಡೆ, ನವೀನಕುಮಾರ್, ಪ್ರಕಾಶ್ ಹುಣಸವಳ್ಳಿ, ಧರ್ಮಪ್ಪ, ಓಂಕಾರಪ್ಪ ಇದ್ದರು.---------

ಫೋಟೊ:೧೮ಕೆಪಿಸೊರಬ-೦೧: ಸೊರಬ ಪಟ್ಟಣದ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಎಂ.ಡಿ.ಉಮೇಶ್ ಮಾತನಾಡಿದರು.

ಫೋಟೊ:೧೮ಕೆಪಿಸೊರಬ-೦೧: ಸೊರಬ ಪಟ್ಟಣದ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಎಂ.ಡಿ.ಉಮೇಶ್ ಮಾತನಾಡಿದರು.