ಸಿಎಂ ಸ್ಥಾನದಿಂದ ಸಿದ್ದು ಕೆಳಗಿಳಿಸಲು ವಿರೋಧಿಗಳ ಷಡ್ಯಂತ್ರ

| Published : Oct 07 2024, 01:45 AM IST

ಸಾರಾಂಶ

ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದ ವಿರೋಧಿಗಳು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ, ಅದು ಸಫಲವಾಗುವುದಿಲ್ಲ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ರಟ್ಟೀಹಳ್ಳಿ: ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದ ವಿರೋಧಿಗಳು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ, ಅದು ಸಫಲವಾಗುವುದಿಲ್ಲ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ಕಣವಿಸಿದ್ಗೇರಿ ಗ್ರಾಮದಲ್ಲಿ 2023-24ನೇ ಸಾಲಿನ ಯೋಜನೆಯಡಿ ಅನುಮೋದನೆಗೊಂಡ ಮಳಗಿ ರಸ್ತೆ ಅಭಿವೃದ್ಧಿ ಮತ್ತು ಕಣವಿಸಿದ್ದೇಶ್ವರ ದೇವಸ್ಥಾನ ಆವರಣದ ಕಾಂಕ್ರಿಟ್ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 15 ವರ್ಷದ ಹಿಂದಿನ ಅವಧಿಯಲ್ಲಾದ ಮುಡಾ ಹಗರಣವನ್ನು ವಿರೋಧಿಗಳು ಈಗ ಮುನ್ನೆಲೆಗೆ ತಂದು ಅವರ ಹೆಸರಿಗೆ ಕಪ್ಪು ಮಸಿ ಬಳಿದು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ ಅಂತವರಿಗೆ ನಾನು ಹೇಳಬಯಸುತ್ತೇನೆ, ನಿಮ್ಮ ತಿರುಕನ ಕನಸು ನನಸಾಗುವುದಿಲ್ಲ. 5 ವರ್ಷ ಸಂಪೂರ್ಣ ಆಡಳಿತ ನೀಡಿ ಮುಂಬರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳ ಬಗ್ಗೆ ವಿರೋಧ ಪಕ್ಷದ ನಾಯಕರು ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುವುದು ಎಂದು ವ್ಯಂಗ್ಯ ಮಾಡಿದ ವಿರೋಧಿಗಳು ಇಂದು ಬಾಯಿ ಮೇಲೆ ಬೊಟ್ಟಿಟ್ಟುಕೊಂಡು ನೋಡುತ್ತಿದ್ದಾರೆ ಇದು ಸಿದ್ದರಾಮಯ್ಯನವರ ತಾಕತ್ತು, ನುಡಿದಂತೆ ನಡೆದು ಕೊಟ್ಟ ಭರವಸೆಗಳನ್ನು ಯಥಾವತ್ತಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತ ಪಡಿಸಿದರು.

ಗ್ಯಾರಂಟಿಗಳಿಂದ ಅನೇಕ ಬಡ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಸುಮಾರು 5 ಸಾವಿರದಂತೆ ನೀಡುವ ಮೂಲಕ ದೀನ ದಲಿತರ, ಶೋಷಿತರ ಪರ ಕೆಲಸ ಮಾಡುವ ಸಿದ್ದರಾಮಯ್ಯನವರಿಗೆ ಅಪಾರ ಜನ ಬೆಂಬಲ ಸಿಗುತ್ತಿದೆ ಎಂದರು.

ಗ್ಯಾರಂಟಿ ಜೊತೆ ತಾಲೂಕಿನ ಅಭಿವೃದ್ಧಿಗಾಗಿ ಸಿದ್ದರಾಮಯ್ಯನವರು ಕೋಟ್ಯಂತರ ಹಣ ನೀಡುತ್ತಿರುವ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿದೆ. ಕಾರಣ ಗುತ್ತಿಗೆದಾರ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ ತಾಲೂಕಿನ ಅಭಿವೃದ್ಧಿಗೂ ನಿಮ್ಮ ಸಹಕಾರ ಅತ್ಯಗತ್ಯ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಫಕೀರೇಶ ತುಮ್ಮಿನಕಟ್ಟಿ ಮಾತನಾಡಿ, ಶಾಸಕ ಯು.ಬಿ. ಬಣಕಾರ ಅವರು ತಾಲೂಕಿನ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ನೀಡುತ್ತಿರುವುದು ಸಂತಸದ ವಿಷಯ. ಕಣವಿಸಿದ್ಗೇರಿ ಗ್ರಾಮದ ಅಭಿವೃದ್ಧಿಗಾಗಿ ಗ್ರಾಮಕ್ಕೆ ಹೈ ಮಾಸ್ಕ ನೀಡಬೇಕು ಹಾಗೂ ಕೆರೆ ದುರಗಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಹಣ ಮಂಜೂರು ಮಾಡಿಕೊಡಬೇಕು ಎಂದು ಗ್ರಾಮಸ್ಥರ ಪರ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶಾಂತವ್ವ ಹರಿಜನ, ಮಂಜಪ್ಪ ಎತ್ತಿನಹಳ್ಳಿ, ಮಂಜಮ್ಮ ಬಳಗಾವಿ, ಸಿದ್ದೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ ಶಿವಪುತ್ರಪ್ಪ ಕರಿಯಣ್ಣನವರ, ಗುತ್ತಿಗೆದಾರ ಬೀರೇಶ ಕರಡೆಣ್ಣನವರ, ಗುಡ್ಡಪ್ಪ ಎತ್ತಿನಹಳ್ಳಿ, ರುದ್ರಪ್ಪ ಬಳಗಾವಿ, ಪರಸಪ್ಪ ಪುಟ್ಟಕ್ಕಳವರ, ಕಣಿವೆಪ್ಪ ಬಳಗಾವಿ, ಕಸಪ್ಪ ಕರಡೆಣ್ಣನವರ, ಗದಿಗೆಪ್ಪ ಕೆಂಗಣ್ಣನವರ, ಶಿವಲಿಂಗಪ್ಪ ಕಬ್ಬಾರ, ನಿಂಗಪ್ಪ ಕರಡೆಣ್ಣನವರ, ಶಿವಕುಮಾರ ಪುಟ್ಟಕ್ಕಳವರ, ಬೆಳಕೆರಪ್ಪ ಸಣ್ಣಪ್ಪನವರ, ಮಾಲತೇಶ ಎತ್ತಿನಹಳ್ಳಿ, ಸಿದ್ದಲಿಂಗಪ್ಪ ಮಾನೆಗಾರ್ ಮುಂತಾದವರು ಇದ್ದರು.