ಸಾರಾಂಶ
ಹುಬ್ಬಳ್ಳಿ: ಭಾರತ ಸುಪರ್ ಪವರ್ ಆಗಬಾರದೆಂಬ ದುರುದ್ದೇಶದಿಂದಾಗಿ ಅಮೆರಿಕ, ಚೀನಾದಂತಹ ರಾಷ್ಟ್ರಗಳು ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಿವೆ ಎಂದು ಹಿರಿಯ ನ್ಯಾಯವಾದಿ ಅರುಣ ಜೋಶಿ ಅಭಿಪ್ರಾಯ ಪಟ್ಟರು.
ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಆಯೋಜಿಸಿದ್ದ ವಿಭಜನೆ ವಿಭೀಷಣ‘ಸ್ಮೃತಿ ದಿವಸ’ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿಯೊಬ್ಬ ಭಾರತೀಯನಿಗೆ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾಗಬೇಕು. ನಮ್ಮಲ್ಲಿರುವ ಜಾತಿ, ಬೇಧ ಬಿಡಬೇಕು. ಭ್ರಷ್ಟಾಚಾರ ನಿಯಂತ್ರಿಸಬೇಕು ಎಂದರು.
ಜನರಿಗೆ ದೇಶ ವಿಭಜನೆ ಆಗುವುದು ಬೇಕಾಗಿರಲಿಲ್ಲ. ಆದರೆ, ಅಧಿಕಾರದ ದುರಾಸೆ ಹೊಂದಿದ್ದ ರಾಜಕಾರಣಿಗಳಿಂದಾಗಿ ದೇಶ ಒಡೆಯಿತು. ಧರ್ಮದ ಹೆಸರಲ್ಲಿ ದೇಶ ವಿಭಜನತೆಯಾದರೂ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಭಾರತದಲ್ಲಿದ್ದಾರೆ ಎಂದು.ಬ್ರಿಟಿಷರು ಭಾರತವನ್ನು ಸುಲಭವಾಗಿ ಆಳಬೇಕಾದರೆ ದೇಶದಲ್ಲಿ ಒಡೆದಾಳುವ ನೀತಿಯನ್ನು ಅನುಸರಿಸಿದರು. ಅಖಂಡ ಭಾರತವನ್ನು ತುಂಡರಿಸಿದ್ದು ಯಾರು ಎಂಬುದರ ಇತಿಹಾಸ ಭಾರತಿಯರು ಅರಿತುಕೊಳ್ಳಬೇಕು ಎಂದರು
ಒಂದು ಹನಿ ರಕ್ತ ಕೊಡದೇ ಸ್ವಾತಂತ್ರ್ಯ ಪಡೆದೇವೆಂಬ ಹೇಳಿಕೆಗಳು ಸಂರ್ಪೂಣ ಸುಳ್ಳು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ನಗುತ್ತಲೇ ನೇಣುಗಂಬ ಏರಿದ್ದನ್ನು ದೇಶವಾಸಿಗಳು ಮರೆಯಲು ಸಾಧ್ಯವಿಲ್ಲ ಎಂದರು.ಧರ್ಮದ ಆಧಾರದ ಮೇಲೆ ದೇಶ ನಿರ್ಮಾಣಗೊಳ್ಳುವುದಿಲ್ಲ. ಬದಲಾಗಿ, ಸಂಸ್ಕೃತಿಯ ಮೇಲೆ ನಿರ್ಮಾಣಗೊಳ್ಳುತ್ತದೆ ಎಂಬ ಭಾರತೀಯರ ನಂಬಿಕೆಯನ್ನು ಬ್ರಿಟಿಷರು ಒಡೆದು ಹಾಕಿದರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ದೇಶದೊಳಗಿನ ದ್ರೋಹಿಗಳ ಮನಸ್ಥಿತಿ ಬದಲಾಗಬೇಕು. ರಾಷ್ಟ್ರದ ಬಗ್ಗೆ ಅಭಿಮಾನ ಇಲ್ಲದವರು ವಿದೇಶಗಳಿಗೆ ಹೋಗಿ ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಉಪ ಮಹಾಪೌರ ಸಂತೋಷ ಚವ್ಹಾಣ, ಹು-ಧಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ಸುಧೀಂದ್ರ ದೇಶಪಾಂಡೆ, ಮಹೇಂದ್ರ ಕೌತಾಳ ಹಾಗೂ ಸತೀಶ ಶೇಜವಾಡಕರ, ಉಮೇಶ ದುಷಿ, ರೂಪಾ ಶೆಟ್ಟಿ, ವೀಣಾ ಬರದ್ವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.