ರಾಮಪ್ಪಗೆ ರಾಜಕೀಯವಾಗಿ ಮುಗಿಸಲು ಷಡ್ಯಂತ್ರ

| Published : Aug 29 2025, 01:00 AM IST

ರಾಮಪ್ಪಗೆ ರಾಜಕೀಯವಾಗಿ ಮುಗಿಸಲು ಷಡ್ಯಂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಚುನಾವಣೆಯಲ್ಲಿ ಕಟ್ಟಾ ಕಾಂಗ್ರೆಸ್ಸಿಗ, ಮಾಜಿ ಶಾಸಕ ರಾಮಪ್ಪ ಪಕ್ಷೇತರವಾಗಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆಂಬ ಸುಳ್ಳು ಆರೋಪ ಹೊರಿಸಿ, ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎನ್ನುತ್ತಿರುವುದು ಪಕ್ಷಕ್ಕೆ ಮಾಡುವ ದ್ರೋಹವಾಗಿದೆ. ಎಸ್.ರಾಮಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಪಕ್ಷದ ಕೆಲವರು ಷಡ್ಯಂತ್ರ ರಚಿಸುತ್ತಿದ್ದಾರೆ ಎಂದು ಪಕ್ಷದ ಮುಖಂಡ ಬಿ.ಮಗ್ದುಮ್ ಆರೋಪಿಸಿದ್ದಾರೆ.

- ಪಕ್ಷೇತರ ಸ್ಪರ್ಧೆ ಎಂಬುದು ಸುಳ್ಳು ಆರೋಪ: ಬಿ.ಮಗ್ದುಮ್‌ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಮುಂದಿನ ಚುನಾವಣೆಯಲ್ಲಿ ಕಟ್ಟಾ ಕಾಂಗ್ರೆಸ್ಸಿಗ, ಮಾಜಿ ಶಾಸಕ ರಾಮಪ್ಪ ಪಕ್ಷೇತರವಾಗಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆಂಬ ಸುಳ್ಳು ಆರೋಪ ಹೊರಿಸಿ, ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎನ್ನುತ್ತಿರುವುದು ಪಕ್ಷಕ್ಕೆ ಮಾಡುವ ದ್ರೋಹವಾಗಿದೆ. ಎಸ್.ರಾಮಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಪಕ್ಷದ ಕೆಲವರು ಷಡ್ಯಂತ್ರ ರಚಿಸುತ್ತಿದ್ದಾರೆ ಎಂದು ಪಕ್ಷದ ಮುಖಂಡ ಬಿ.ಮಗ್ದುಮ್ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿರ್ಲಾ ಕಂಪನಿಯಲ್ಲಿ ಸಾಮಾನ್ಯ ಕಾರ್ಮಿಕರಾಗಿದ್ದ ರಾಮಪ್ಪ ಅವರು ಶಾಸಕರಾಗಿ ಆಯ್ಕೆಯಾಗಿದ್ದು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಪಡೆದವರು ಒಳಗಿನಿಂದ ಆರ್‌ಎಸ್‌ಎಸ್ ಮನಸ್ಥಿತಿ ಹೊಂದಿ, ಕಾಂಗ್ರೆಸ್‌ನ ಮುಖವಾಡ ಹಾಕಿಕೊಂಡಿದ್ದಾರೆಂದು ಟೀಕಿಸಿದರು.

ದೂಡಾ ಮಾಜಿ ಸದಸ್ಯ ಜಿ.ವಿ. ವೀರೇಶ್ ಮಾತನಾಡಿ, ರಾಮಪ್ಪ ಹುಟ್ಟಾ ಕಾಂಗ್ರೆಸ್ಸಿಗ. ಆಪರೇಷನ್ ಕಮಲ ತಿರಸ್ಕರಿಸಿ ₹೩೫ ಕೋಟಿ ಆಮಿಷ ತಿರಸ್ಕರಿಸಿದ್ದರು. ಕಳೆದ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸೋಲಿಗೆ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಲೋಪಗಳೆ ಕಾರಣವಾಗಿವೆ. ನಗರಸಭೆಯ ಹಳ್ಳದಕೇರಿ ವಾರ್ಡಿನಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಯ ವಿರುದ್ಧವೇ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಅವರ ಸಹೋದರರಾಗಿದ್ದರು ಎಂಬುದನ್ನು ಅವರು ಸ್ಮರಿಸಿಕೊಳ್ಳಲಿ ಎಂದರು.

ಪಕ್ಷದ ಮುಖಂಡ ಎಂ.ಆರ್. ಸೈಯದ್ ಸನಾವುಲ್ಲಾ ಮಾತನಾಡಿ, ನಂದಿಗಾವಿ ಶ್ರೀನಿವಾಸ್‌ ಕೆಲವು ಕಾಂಗ್ರೆಸ್ ನಗರಸಭಾ ಸದಸ್ಯರ ವಾರ್ಡುಗಳಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಪೌರಾಯುಕ್ತರಿಗೆ ಸೂಚಿಸಿದ್ದಾರೆ. ಹೀಗಾದಲ್ಲಿ ಪಕ್ಷದ ನಗರಸಭಾ ಸದಸ್ಯರು ಮುಂದಿನ ಚುನಾವಣೆಯಲ್ಲಿ ಗೆದ್ದು ಬರುತ್ತಾರೆಯೇ? ಇವರೆಂಥ ತಾಲೂಕು ಮುಖಂಡರು ಎಂದು ಪ್ರಶ್ನಿಸಿದರು.

ಬಿ.ಮೊಹ್ಮದ್ ಫೈರೋಜ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ರಾಜ್ಯದ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ನೀಡಿ ರಾಮಪ್ಪ ಅವರಿಗೆ ತಪ್ಪಿಸಿದ್ದು ಸರಿಯಲ್ಲ. ಈ ಇಬ್ಬರು ನಾಯಕರ ಬೆಂಬಲಿಗರು ಹೀಗೆಯೇ ಕಚ್ಚಾಡಿದರೆ, ನಷ್ಟ ಕಾಂಗ್ರೆಸ್‌ ಪಕ್ಷಕ್ಕೆ ಎಂಬುದನ್ನು ಅರಿಯಬೇಕಿದೆ ಎಂದರು.

ನಗರಸಭೆ ಮಾಜಿ ಸದಸ್ಯ ಹಬೀಬ್‌ ಉಲ್ಲಾ ಗನ್ನೆವಾಲೆ ಮಾತನಾಡಿ, ರಾಮಪ್ಪ ಪಕ್ಷ ನಿಷ್ಠರಾಗಿದ್ದಾರೆ. ಅವರ ಮೇಲೆ ಆರೋಪ ಹೊರಿಸುತ್ತಿರುವುದು ಸರಿಯಲ್ಲ. ಪಕ್ಷದ ಟಿಕೆಟ್ ಸಿಗದಿದ್ದರೂ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಪ್ರಶ್ನೆಯೆ ಇಲ್ಲ ಎಂದರು.

ಪಕ್ಷದ ಮುಖಂಡರಾದ ಬಿ.ಬಾಲರಾಜ್, ಶಿವರಾಜ್, ಎಂ.ಇಲಿಯಾಸ್, ಅಬ್ದುಲ್ ರಹಮಾನ್, ಸೈಫುಲ್ಲಾ ಹಾಗೂ ಇತರರಿದ್ದರು.

- - -

-28HRR05: ಹರಿಹರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತನಾಡಿದರು.