ವಕ್ಫ್‌ ಹೆಸರಿನಲ್ಲಿ ಜಮೀನು ಕಬಳಿಸುವ ಸಂಚು

| Published : Nov 16 2024, 12:35 AM IST

ಸಾರಾಂಶ

ರೈತರ ಉತಾರದಲ್ಲಿ ವಕ್ಫ್ ಆಸ್ತಿ ಎಂಬುದನ್ನು ತಿದ್ದುಪಡಿ ಮಾಡಿ ರೈತರಿಗೆ ನೀಡಿರುವ ನೋಟಿಸ್‌ ಮಾತ್ರ ವಾಪಸ್ ಪಡೆದರೆ ಸಾಲಲ್ಲ. ಉತಾರದ ಪಹಣಿ ಕಾಲಂ 11ರಲ್ಲಿರುವ ವಕ್ಫ್ ಆಸ್ತಿ ಎಂದು ಬರೆದಿರುವುದನ್ನು ಯಾವುದೇ ಶರತ್ ಬದ್ದು ದಾಖಲೆಗಳಿಲ್ಲದೆ ಮೊದಲಿನ ಉತಾರದಂತೆ ತಿದ್ದುಪಡಿ ಮಾಡಬೇಕು.

ಕಲಘಟಗಿ:

ಸರ್ಕಾರ ವಕ್ಫ್ ಬೋರ್ಡ್ ಹೆಸರಲ್ಲಿ ಸರ್ಕಾರಿ ಹಾಗೂ ರೈತರ ಜಮೀನುಗಳನ್ನು ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಕಿಸಾನ್ ಸಂಘದ ನೇತ್ವತ್ವದಲ್ಲಿ ಪಟ್ಟಣದ ಎಪಿಎಂಸಿಯಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ರಾಜ್ಯ ಸರ್ಕಾರ ರೈತರ ಜಮೀನು, ಮಠ, ಮಂದಿರ, ಹಿಂದೂ ಸಮಾಜದ ರುದ್ರಭೂಮಿ ಮತ್ತು ಸರ್ಕಾರದ ಆಸ್ತಿಯ ಮೇಲೆ ವಕ್ಫ್ ಹೆಸರು ಸೇರಿಸಿರುವುದನ್ನು ಶೀಘ್ರವೇ ರದ್ದುಗೊಳಿಸಬೇಕು. ರೈತರ ಉತಾರದಲ್ಲಿ ವಕ್ಫ್ ಆಸ್ತಿ ಎಂಬುದನ್ನು ತಿದ್ದುಪಡಿ ಮಾಡಿ ರೈತರಿಗೆ ನೀಡಿರುವ ನೋಟಿಸ್‌ ಮಾತ್ರ ವಾಪಸ್ ಪಡೆದರೆ ಸಾಲಲ್ಲ. ಉತಾರದ ಪಹಣಿ ಕಾಲಂ 11ರಲ್ಲಿರುವ ವಕ್ಫ್ ಆಸ್ತಿ ಎಂದು ಬರೆದಿರುವುದನ್ನು ಯಾವುದೇ ಶರತ್ ಬದ್ದು ದಾಖಲೆಗಳಿಲ್ಲದೆ ಮೊದಲಿನ ಉತಾರದಂತೆ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.

ಹಿಂದೂ ಸಮಾಜ ಮತ್ತು ರೈತರನ್ನು ಲಘುವಾಗಿ ಕಾಣುತ್ತಿರುವ ಸಚಿವ ಜಮೀರ್ ಅಹ್ಮದ್‌ ಅವರನ್ನು ಕೂಡಲೇ ಮಂತ್ರಿ ಮಂಡಲದಿಂದ ವಜಾ ಮಾಡಿ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಈ ಬೇಡಿಕೆ ಈಡೇರಿಸುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆ ವೇಳೆ ಗಲಾಟೆ:

ತಹಸೀಲ್ದಾರ್ ಕಚೇರಿಯಲ್ಲಿ ಪ್ರತಿಭಟನಾಕಾರರು ಭಾಷಣ ಮಾಡುವ ವೇಳೆ ಅನ್ಯ ಕೋಮಿನ ವ್ಯಕ್ತಿಯೊಬ್ಬ ಮಧ್ಯದಲ್ಲಿ ಮಾತನಾಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟಕಾರರು ರೈತರ ಹಾಗೂ ಸರ್ಕಾರಿ ಆಸ್ತಿ ತಮ್ಮಪ್ಪನ ಆಸ್ತಿ ಎಂದು ಕೊಂಡಿದ್ದಾರೆ’ ಎಂದಾಗ, ಅನ್ಯಕೋಮಿನ ವ್ಯಕ್ತಿ ‘ಆಸ್ತಿ ನಿಮ್ಮಪ್ಪಂದಾ’ ಎಂದು ಪ್ರಶ್ನಿಸಿದ. ಇದರಿಂದ ಕುಪಿತಗೊಂಡ ಪ್ರತಿಭಟನಾಕಾರರು ಆ ವ್ಯಕ್ತಿಯನ್ನು ಥಳಿಸಲು ಮುಂದಾದರು. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು. ನಂತರ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಅವನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಇದ್ದರು.