ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುಣಾವಣೆಗೆ ಸ್ಪರ್ಧಿಸದಂತೆ ತಡೆಯಲು ಉದ್ದೇಶ ಪೂರ್ವಕವಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಒಂದು ವರ್ಷದ ಅವಧಿಗೆ ಚುನಾವಣೆಗೆ ಸ್ಪರ್ಧಿಸದಂತೆ ಅಮಾನತುಗೊಳಿಸಿದ್ದಾರೆ ಎಂದು ಅಭ್ಯರ್ಥಿ ಮಾಯಣ್ಣ ಆರೋಪಿಸಿದರು.ಮಳವಳ್ಳಿಯ ಶ್ರೀಲಕ್ಷ್ಮೀನರಸಿಂಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕನಾಗಿರುವ ನಾನು ಫೆಬ್ರವರಿ 10 ರಂದು ನಡೆಯುವ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ, ಫೆ.3 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅಷ್ಟರೊಳಗೆ ರಾಜಕೀಯ ಪ್ರಭಾವ ಬಳಸಿ ನನ್ನನ್ನು ಶ್ರೀಲಕ್ಷ್ಮೀನರಸಿಂಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸದಂತೆ ಸಂಚು ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷನಾಗಿದ್ದ ನಾನು ಕಳೆದ ಮೂರು ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅಂದಿನಿಂದ ಇಂದಿನವರೆಗೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದೇ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿಯೇ ಎಲ್ಲ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ನನಗೆ ಯಾವುದೇ ನೋಟಿಸ್ ನೀಡದೇ ಸಂಘದ ಮೂರು ತುರ್ತು ಸಭೆಗಳನ್ನು ಒಂದೇ ವಾರದಲ್ಲಿ ನಡೆಸಿ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದೇನೆ. ಜೊತೆಗೆ ನ್ಯಾಯಾಲಯ ಕೂಡ 30 ದಿನಗಳವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಆದೇಶ ಮಾಡಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದು ಸಂಘದ ಮೂರು ತುರ್ತು ಸಭೆಗಳಿಗೆ ಹಾಜರಾಗಲಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು ನಿರ್ದೇಶಕ ಸ್ಥಾನದಿಂದ ಸಹಾಯಕ ಸಂಘಗಳ ಸಹಕಾರ ನಿಬಂಧಕರು ನನ್ನನ್ನು ನಿಯಮಬಾಹೀರವಾಗಿ ಅಮಾನತುಗೊಳಿಸಿದ್ದಾರೆ ಎಂದು ದೂರಿದರು.
ಸೋಮವಾರ(ಫೆ.3)ದಂದು ಪಿಎಲ್‌ಡಿ ಬ್ಯಾಂಕ್‌ನ ನಾಮಪತ್ರ ಪರಿಶೀಲನೆ ನಡೆಯಲಿದ್ದು ನನ್ನನ್ನು ಅಮಾನತುಗೊಳಿಸಿ ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದು ನನ್ನ ವಿರೋಧಿಗಳ ಹುನ್ನಾರವಾಗಿದೆ ಎಂದು ಕಿಡಿಕಾರಿದರು.ಪೊಲೀಸರ ಸರ್ಪಗಾವಲು:
ಸಹಕಾರ ಸಂಘಗಳ ಸಹಾಯಕ ನಿಬಂಧನೆಗಳ ಕಚೇರಿಗೆ ಪ್ರಕರಣದ ವಿಚಾರಣೆಗೆ ಮಾಯಣ್ಣ ಆಗಮಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರ ದಂಡೇ ನೆರೆದಿದ್ದು ಸಾರ್ವಜನಿಕರನ್ನು ನಿಬ್ಬೆರಗಾಗುವಂತೆ ಮಾಡಿತು. ಡಿವೈಎಸ್ಪಿ, ಆರಕ್ಷಕ ವೃತ್ತ ನಿರೀಕ್ಷಕರು ಜೊತೆಗೆ ಎರಡು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು ಕಚೇರಿಯಲ್ಲಿ ಅಧಿಕಾರಿಗಳಿಗೆ ರಕ್ಷಣೆ ನೀಡಿದರು.