ಆಕಸ್ಮಿಕ ಗುಂಡು ಹಾರಿ ಕಾನ್ಸಟೇಬಲ್ ಗೆ ಗಂಭೀರ ಗಾಯ

| Published : Feb 15 2024, 01:17 AM IST

ಆಕಸ್ಮಿಕ ಗುಂಡು ಹಾರಿ ಕಾನ್ಸಟೇಬಲ್ ಗೆ ಗಂಭೀರ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಪಾಲಿಕೆ ಆವರಣದ ಇವಿಎಂ ಕೊಠಡಿ ಭದ್ರತಾ ಕಾರ್ಯಕ್ಕೆ ಹಾಜರಾಗಿದ್ದ ವೇಳೆ ಗುಂಡೇಟಿನಿಂದ ತೀವ್ರ ಗಾಯಗೊಂಡ ಕಾನ್ಸಟೇಬಲ್ ಗುರುಮೂರ್ತಿ

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಮಹಾ ನಗರ ಪಾಲಿಕೆ ಇವಿಎಂ ಕೊಠಡಿಯ ಭದ್ರತಾ ಕರ್ತವ್ಯ ನಿರತ ಸಶಸ್ತ್ರ ಮೀಸಲು ಪಡೆಯ ಕಾನ್ಸಟೇಬಲ್ ಆಕಸ್ಮಿಕವಾಗಿ ಬಂದೂಕಿನ ಗುಂಡು ಹಾರಿ, ತೀವ್ರವಾಗಿ ಗಾಯಗೊಂಡ ಘಟನೆ ಇಲ್ಲಿನ ಪಾಲಿಕೆ ಆವರಣದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸಟೇಬಲ್‌, ಮೂಲತಃ ಹರಪನಹಳ್ಳಿ ತಾಲೂಕಿನವರಾದ ಚೌಡನಾಯ್ಕರ ಗುರುಮೂರ್ತಿ ಗುಂಡು ಹಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಂದಿನಂತೆ ಪಾಲಿಕೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಕೊಠಡಿಯ ಭದ್ರತಾ ಕಾರ್ಯಕ್ಕೆ ಹಾಜರಾಗಿದ್ದ ಕಾನ್ಸಟೇಬಲ್‌ ಚೌಡನಾಯ್ಕರ ಗುರುಮೂರ್ತಿ ಮೊಬೈಲ್‌ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿ, ಬೆನ್ನಿನ ಭಾಗ ಕಿತ್ತುಕೊಂಡು ಬಂದಿದೆ.

ಪಾಲಿಕೆಯಲ್ಲಿ ಗುಂಡಿನ ಸದ್ದು ಕೇಳಿದ ಸ್ಥಳದಲ್ಲಿದ್ದ ವೃದ್ಧರೊಬ್ಬರು ತಕ್ಷಣ‍ ಅಲ್ಲಿಗೆ ಧಾವಿಸಿದ್ದಾರೆ. ಸದ್ದು ಕೇಳಿದ ಸುತ್ತಮುತ್ತ ಇದ್ದವರೂ ಅಲ್ಲಿಗೆ ಓಡಿ ಬಂದಿದ್ದಾರೆ. ಪೊಲೀಸ್ ಇಲಾಖೆ ಮೇಲಾಧಿಕಾರಿಗಳು, ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಗಾಯಾಳು ಕಾನ್ಸಟೇಬಲ್ ಗುರುಮೂರ್ತಿಯವರನ್ನು ಇಲ್ಲಿನ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಕರೆದೊಯ್ದು, ದಾಖಲಿಸಲಾಯಿತು. ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ಗುರುಮೂರ್ತಿ ಬೆನ್ನನ್ನು ಛೇದಿಸಿದ್ದು, ಬೆನ್ನಿನ ಭಾಗದ ಮಾಂಸ, ಮೂಳೆಗಳು ಕಿತ್ತು ಬಂದು, ತೀವ್ರ ರಕ್ತಸ್ರಾವವಾಗಿದೆ. ಘಟನಾ ಸ್ಥಳವೆಲ್ಲಾ ರಕ್ತಮಯವಾಗಿತ್ತು.

ಗಾಯಾಳು ಕಾನ್ಸಟೇಬಲ್ ಗುರುಮೂರ್ತಿ ಪರಿಸ್ಥಿತಿ ಗಂಭೀರವಾಗಿದೆಯಾದರೂ, ಪ್ರಾಣಾಪಾಯ ಇಲ್ಲವೆಂಬ ಮಾತು ಕೇಳಿ ಬರುತ್ತಿವೆ. ಸಿಟಿ ಸೆಂಟ್ರಲ್ ಆಸ್ಪತ್ರೆ ತಜ್ಞ ವೈದ್ಯರು, ನುರಿತ ವೈದ್ಯರ ತಂಡ ತುರ್ತು ಚಿಕಿತ್ಸೆ ನೀಡುತ್ತಿದೆ. ವಿಷಯ ತಿಳಿದ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಡಿಎಆರ್ ಅಧಿಕಾರಿ, ಸಿಬ್ಬಂದಿಗಳು, ಗಾಯಾಳು ಕಾನ್ಸಟೇಬಲ್ ಗುರುಮೂರ್ತಿ ಕುಟುಂಬ ವರ್ಗ ಆಸ್ಪತ್ರೆ ಬಳಿ ದೌಡಾಯಿಸಿದೆ. ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಗುರುಮೂರ್ತಿ ಸ್ಥಿತಿ ಗಂಭೀರವಾಗಿದ್ದು, ಆದಷ್ಟು ಬೇಗನೆ ಗುಣಮುಖರಾಗಲೆಂದು ಸಹೋದ್ಯೋಗಿಗಳು, ಕುಟುಂಬ ವರ್ಗ ಪ್ರಾರ್ಥಿಸುತ್ತಿದೆ. ಕಾನ್ಸಟೇಬಲ್ ಗುರುಮೂರ್ತಿಗೆ ಆಕಸ್ಮಿಕವಾಗಿ ಗುಂಡು ಹಾರಿದೆಯೋ ಅಥವಾ ಆತ್ಮಹತ್ಯೆಗೆ ಯತ್ನಿಸಿದರೋ ಎಂಬುದು ಸ್ಪಷ್ಟವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.