ಸಾರಾಂಶ
ಕೆಲ ದಿನಗಳ ಹಿಂದೆ ಎಸ್ಪಿ ಕಾನ್‌ಸ್ಟೇಬಲ್‌ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದರು. ಇದಾದ ಬಳಿಕ ಮತ್ತೆ ಕಾನ್‌ಸ್ಟೇಬಲ್‌ಗಳ ವರ್ಗಾವಣೆ ಮಾಡಲಾಗಿದೆ. ಎರಡನೇ ಬಾರಿ ವರ್ಗಾವಣೆ ಮಾಡಿದ ವೇಳೆ ಸುರೇಶ್ ಜೋಗಿ ಅವರನ್ನು ಹನುಮಸಾಗರ ಠಾಣೆಗೆ ವರ್ಗಾಯಿಸಲಾಗಿದೆ.
ಕಾರಟಗಿ:
ಕನಕಗಿರಿ ಕ್ಷೇತ್ರದ ಪೊಲೀಸ್ ಪೇದೆಗಳ ವರ್ಗಾವಣೆ ಹಿಂದೆ ಸಚಿವ ಶಿವರಾಜ ತಂಗಡಗಿ ಅವರ ಹಸ್ತಕ್ಷೇಪವಿದೆ ಎಂದು ಆರೋಪಿಸಿರುವ ಇಲ್ಲಿನ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸುರೇಶ್ ಕುಟುಂಬಸ್ಥರು ಪಟ್ಟಣದ ಸಚಿವರ ಮನೆ ಮುಂದೆ ಬುಧವಾರ ಪ್ರತಿಭಟನೆ ಮಾಡಿದರು.ಕೆಲ ದಿನಗಳ ಹಿಂದೆ ಎಸ್ಪಿ ಕಾನ್‌ಸ್ಟೇಬಲ್‌ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದರು. ಇದಾದ ಬಳಿಕ ಮತ್ತೆ ಕಾನ್‌ಸ್ಟೇಬಲ್‌ಗಳ ವರ್ಗಾವಣೆ ಮಾಡಲಾಗಿದೆ. ಎರಡನೇ ಬಾರಿ ವರ್ಗಾವಣೆ ಮಾಡಿದ ವೇಳೆ ಸುರೇಶ್ ಜೋಗಿ ಅವರನ್ನು ಹನುಮಸಾಗರ ಠಾಣೆಗೆ ವರ್ಗಾಯಿಸಲಾಗಿದೆ. ಇದಕ್ಕೂ ಮುನ್ನ ಇದೇ ಠಾಣೆಯ ರಮೇಶ್ ಎಂಬುವರನ್ನು ಹನುಮಸಾಗರ ಠಾಣೆಗೆ ವರ್ಗಾಯಿಸಲಾಗಿತ್ತು. ಇದರ ಹಿಂದೆ ಸಚಿವರ ಹಸ್ತಕ್ಷೇಪವಿದೆ ಎಂದು ಆರೋಪಿಸಿ ಕಾನ್‌ಸ್ಟೇಬಲ್ ಸುರೇಶ್ ಕುಟುಂಬಸ್ಥರು ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಬಳಿಕ ಸಚಿವರ ಆಪ್ತರು ಸಚಿವರೊಂದಿಗೆ ಮಾತನಾಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಯಾಗಿದೆ ಎನ್ನಲಾಗಿದೆ. ಈ ಸಂಬಂಧ ಕಾರಟಗಿ ಪಿಐ ಸುಧೀರ್ ಬೆಂಕಿ ಅವರನ್ನು ಪ್ರಶ್ನಿಸಿದಾಗ, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಕಾನ್‌ಸ್ಟೇಬಲ್ ಸುರೇಶ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಸಹ ಸಾಧ್ಯವಾಗಿಲ್ಲ.ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ:
ಕಾನ್‌ಸ್ಟೇಬಲ್ ವರ್ಗಾವಣೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಕೈಗೊಳ್ಳಲಾಗಿದೆ ಮತ್ತು ಅವರ ಕೋರಿಕೆ ಕುರಿತು ಚರ್ಚಿಸಿ ಆದೇಶಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಹೇಳಿದ್ದಾರೆ. ಕಾರಟಗಿ ಪೊಲೀಸ್ ಠಾಣೆಯ ಎಚ್.ಸಿ. ರಮೇಶ ಕಾರಟಗಿ ಠಾಣೆಯಲ್ಲಿ ಈ ಹಿಂದೆ 6 ವರ್ಷ, ನಂತರ 2ನೇ ಬಾರಿಗೆ 5 ವರ್ಷ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ, ಅವರ ಸ್ವಂತ ಕೋರಿಕೆ ಮೇರೆಗೆ ಗಂಗಾವತಿ ವಿಭಾಗದ ಹನುಮಸಾಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದನ್ನು ಮಾರ್ಪಾಡು ಮಾಡಿ ಕನಕಗಿರಿ ಪೊಲೀಸ್ ಠಾಣೆಗೆ ವರ್ಗಾಹಿಸಲಾಗಿದೆ. ಸುರೇಶ ಮೂರು ಬಾರಿಯೂ ವರ್ಗಾವಣೆಯಾದಾಗ ಪುನಃ ಇಲ್ಲಿಯೇ ಕಾರ್ಯನಿರ್ವಹಿಸಿದ್ದಾರೆ. ಈಗ ಆಡಳಿತಾತ್ಮಕ ದೃಷ್ಟಿಯಿಂದ ಹನುಮಸಾಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಕುರಿತು ಕುಂದು-ಕೊರತೆ ಇದ್ದರೆ ಪರಿಶೀಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.