ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಲ್ಲಿ ಸೋಮವಾರ ಕಾಣಿಸಿಕೊಂಡ ಬಿಸಿಲಿನಿಂದಾಗಿ ಕಾಫಿ ಬೆಳೆಗಾರರ ಮುಖದಲ್ಲಿ ಮೂಡಿದ್ದ ಮಂದಹಾಸ ಸಂಜೆ ವೇಳೆಗೆ ಮರೆಯಾಗಿತ್ತು.ಮೇ ತಿಂಗಳ ಅಂತ್ಯದಿಂದ ತಾಲೂಕಿನಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ನಿರಂತರವಾಗಿದ್ದ ಕಾರಣ ಬಿಸಿಲು ಎಂಬುದು ಮರೀಚಿಕೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಬಿಸಿಲು ಕಾಣದ ಭೂಮಿ ಶೀತ ಪೀಡಿತಗೊಂಡಿದ್ದು, ಕಾಫಿ, ಮೆಣಸು, ಅಡಿಕೆ ಬೆಳೆಯಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದರೆ, ಕಳೆದೊಂದು ವಾರದಿಂದ ಸುರಿದ ಅಪಾರ ಪ್ರಮಾಣದ ಮಳೆ ಹಾಗೂ ಗಾಳಿಯಿಂದಾಗಿ ಸಾಕಷ್ಟು ಕಾಫಿ ಬೆಳೆ ನೆಲ ಸೇರಲಾರಂಭಿಸಿತ್ತು. ಈಗಾಗಲೇ ಗಾಳಿ, ಮಳೆ ಹಾಗೂ ಶೀತದಿಂದಾಗಿ ಹಲವು ಕಾಫಿ ತೋಟಗಳಲ್ಲಿ ಶೇ ೨೦ ರಿಂದ ೪೦ ರಷ್ಟು ಕಾಫಿ ನೆಲಸೇರಿದ್ದು, ಕಾಫಿ ಉಳಿಸಿಕೊಳ್ಳಲು ಕಡ್ಡಾಯವಾಗಿ ಔಷಧಗಳ ಸಿಂಪಡಣೆ ಅಗತ್ಯವಿದ್ದು, ಔಷಧಿ ಸಿಂಪಡಣೆಗೆ ಅಗತ್ಯವಾಗಿ ಮಳೆ ನಿಲುಗಡೆಯಾಗ ಬೇಕಿತ್ತು. ಸದ್ಯ ಬೆಳೆಗಾರರ ನಿರಂತರ ಪ್ರಾರ್ಥನೆಯಂತೆ ಸೋಮವಾರ ಮುಂಜಾನೆಯಿಂದ ಮಳೆ ಬಿಡುವು ನೀಡಿದ್ದು, ತಾಲೂಕಿನ ಹಲವೇಡೆ ಬಿಸಿಲಿನ ದರ್ಶನವಾಗಿದೆ. ಇದರಿಂದಾಗಿ ದೈನಂದಿನ ಜೀವನವೇ ಬದಲಾಗಿದ್ದು, ಜನರು ಛತ್ರಿ, ಕೋಟ್ ಬಿಟ್ಟು ಮನೆಯಿಂದ ಹೊರಬಂದಿದ್ದು, ಮಳೆಯಿಂದ ಕಳೆದ ಹಲವು ದಿನಗಳಿಂದ ಹೋಗದಿದ್ದ ಜಮೀನುಗಳಿಗೆ ಎಡತಾಕಿ ಬೆಳೆಯಹಾನಿಯ ಪ್ರಮಾಣವನ್ನು ಗಮನಿಸಿ, ಜಮೀನಿನಲ್ಲಿ ನಡೆಸಬೇಕಿದ್ದ ಕೆಲಸಗಳ ಬಗ್ಗೆ ಯೋಜನೆ ರೂಪಿಸುತ್ತಿದ್ದದ್ದು ಸಾಮಾನ್ಯವಾಗಿ ಕಂಡುಬಂದಿತ್ತು. ಆದರೆ, ಸಂಜೆ ವೇಳೆಗೆ ಮತ್ತೆ ಜಿಟಿಜಿಟಿ ಮಳೆ ಆರಂಭವಾಗಿದ್ದು, ಬೆಳೆಗಾರರ ಮುಖದಲ್ಲಿ ಮುಂಜಾನೆ ಕಂಡು ಬಂದ ಮಂದಹಾಸ ಸಂಜೆ ವೇಳೆಗೆ ಕಾಣೆಯಾಗಿತ್ತು.
ತಾಲೂಕಿನಲ್ಲಿ ದಾಖಲೆ ಮಳೆ:ತಾಲೂಕಿನಲ್ಲಿ ಜುಲೈ ತಿಂಗಳ ೧೪ ರವರೆಗೆ ಜಿಟಿಜಿಟಿ ಮಳೆ ಸುರಿದರೆ, ನಂತರದ ೮ ದಿನಗಳಲ್ಲಿ ಬಿರುಸಿನ ಮಳೆಯಾಗಿದೆ. ಜುಲೈ ೧೪ ರವರೆಗೆ ಮಾರನಹಳ್ಳಿ ಮಳೆ ಮಾಪನದಲ್ಲಿ ೧೭೬೩ ಮೀಮೀಟರ್ ಮಳೆಯಾದರೆ ನಂತರದ ಎಂಟು ದಿನಗಳಲ್ಲಿ ೧೪೫೦ ಮೀ.ಮೀಟರ್ ಮಳೆಯಾಗಿದ್ದು, ಒಟ್ಟಾರೆ ತಾಲೂಕಿನಲ್ಲಿ ಹೆಚ್ಚು ಮಳೆ ಬೀಳುವ ಮಾರನಹಳ್ಳಿ ಗ್ರಾಮದಲ್ಲಿ ಜುಲೈ ೨೨ ಕ್ಕೆ ೩೨೧೩ ಮೀ.ಮೀಟರ್ ಮಳೆಯಾಗಿದ್ದು, ಜುಲೈ ಮೂರನೇ ವಾರಕ್ಕೆ ಇದು ದಾಖಲೆಯ ಮಳೆಯಾಗಿದೆ. ಇನ್ನು ಸಕಲೇಶಪುರ ಮಳೆ ಮಾಪನ ಕೇಂದ್ರದಲ್ಲಿ ಜುಲೈ ೧೪ ಕ್ಕೆ ೯೯೯ ಮೀ.ಮೀಟರ್ ಮಳೆಯಾಗಿದ್ದರೆ, ನಂತರದ ಎಂಟು ದಿನಗಳಲ್ಲಿ ೬೧೮ ಮೀ.ಮೀಟರ್ ಮಳೆಯಾಗಿದ್ದು, ಒಟ್ಟಾರೆ ಸಕಲೇಪುರದಲ್ಲಿ ಇದುವರಗೆ ೧೬೪೭ ಮೀ.ಮೀಟರ್ ಮಳೆಯಾಗಿದೆ. ಇನ್ನೂ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಹೆತ್ತೂರು ಹೋಬಳಿಯಲ್ಲಿ ಜುಲೈ ೧೪ ಕ್ಕೆ ೧೩೬೦ ಮೀ.ಮೀಟರ್ ಮಳೆಯಾಗಿದ್ದರೆ ನಂತರದ ಎಂಟು ದಿನಗಳಲ್ಲಿ ೭೨೮ ಮೀ.ಮೀಟರ್ ಮಳೆಯಾಗಿದ್ದು, ಇದುವರೆಗೆ ಹೆತ್ತೂರು ಹೋಬಳಿಯಲ್ಲಿ ೨೦೮೮ ಮೀ.ಮೀಟರ್ ಮಳೆಯಾಗಿದೆ. ಇನ್ನೂ ಹಾನುಬಾಳ್ ಹೋಬಳಿಯಲ್ಲಿ ಜುಲೈ ೧೪ ಕ್ಕೆ ೧೨೫೦ ಮೀ.ಮೀಟರ್ ಮಳೆಯಾದರೆ ಜುಲೈ ೨೨ ಕ್ಕೆ ೧೯೪೪ ಮೀ.ಮೀಟರ್ ಮಳೆಯಾಗಿದೆ. ಇನ್ನೂ ತಾಲೂಕಿನಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಬಾಳ್ಳುಪೇಟೆ ಮಳೆ ಮಾಪನ ಕೇಂದ್ರದಲ್ಲಿ ಜುಲೈ ೧೪ ಕ್ಕೆ ೫೫೯ ಮೀ.ಮೀಟರ್ ಮಳೆಯಾಗಿದ್ದರೆ ನಂತರದ ಎಂಟು ದಿನಗಳಲ್ಲಿ ೫೮೨ ಮೀ.ಮೀಟರ್ ಮಳೆಯಾಗಿದ್ದು, ಇಲ್ಲಿ ಒಟ್ಟಾರೆ ೧೧೪೧ ಮೀ.ಮೀಟರ್ ಮಳೆಯಾಗಿದೆ.--------
ತಾಲೂಕುವಾರು ವಾಡಿಕೆ, ಪ್ರಸಕ್ತ ಮಳೆ:ಜುಲೈ ೨೨ ರವರೆಗೆ ತಾಲೂಕಿನಲ್ಲಿ ೧೨೦೬ ಮೀ.ಮೀಟರ್ ಮಳೆಯಾಗಬೇಕಿದ್ದು, ಸದ್ಯ ೧೮೦೯ ಮೀ.ಮೀಟರ್ ಮಳೆಯಾಗಿದ್ದು, ಶೇಕಡವಾರು ೫೫ ರಷ್ಟು ಅಧಿಕ ಮಳೆಯಾಗಿದೆ. ಇನ್ನು ಹೋಬಳಿವಾರು ಲೆಕ್ಕದಂತೆ ಸಕಲೇಶಪುರ ಪಟ್ಟಣಕ್ಕೊಳಪಡುವ ಕಸಬಾ ಹೋಬಳಿಯಲ್ಲಿ ವಾಡಿಕೆಯಂತೆ ೧೧೬೮ ಮಳೆಯಾಗಬೇಕಿದ್ದು ಸದ್ಯ ೧೬೪೭ ಮೀ.ಮೀಟರ್ ಮಳೆಯಾಗಿದ್ದು, ಶೇ ೪೧ ರಷ್ಟು ಅಧಿಕ ಮಳೆಯಾಗಿದೆ. ಇನ್ನೂ ಹೆತ್ತೂರು ಹೋಬಳಿಯಲ್ಲಿ ವಾಡಿಕೆಯಂತೆ ೧೦೬೭ ಮಿ.ಮೀಟರ್ ಮಳೆಯಾಗಬೇಕಿದ್ದರೆ ಇದುವರೆಗೆ ಇಲ್ಲಿ ೨೦೮೮ ಮೀ.ಮೀಟರ್ ಮಳೆಯಾಗಿದ್ದು, ಶೇ ೯೬ ರಷ್ಟು ಅಧಿಕ ಮಳೆಯಾಗಿದೆ. ಬೆಳಗೋಡು ಹೋಬಳಿಯಲ್ಲಿ ೮೭೫ ವಾಡಿಕೆ ಮಳೆಯಾಗ ಬೇಕಿದ್ದರೆ ,೧೧೪೧ ಮೀ.ಮೀಟರ್ ಮಳೆಯಾಗಿದ್ದು, ಶೇ ೩೦ ರಷ್ಟು ಅಧಿಕ ಮಳೆಯಾಗಿದೆ. ಹೆಚ್ಚು ಮಳೆಬೀಳುವ ಮಾರನಹಳ್ಳಿ ಮಳೆಮಾಪನ ಕೇಂದ್ರ ಒಳಪಡುವ ಹಾನುಬಾಳ್ ಹೋಬಳಿಯಲ್ಲಿ ೧೯೪೪ ಮೀಮೀಟರ್ ಮಳೆಯಾಗಿದ್ದು ವಾಡಿಕೆಯಂತೆ ೧೨೬೮ ಮೀ.ಮೀಟರ್ ಮಳೆಯಾಗಬೇಕಿದ್ದು, ಶೇ ೬೦ ರಷ್ಟು ಹೆಚ್ಚು ಮಳೆ ಸುರಿದಿದೆ. ಯಸಳೂರು ಹೋಬಳಿಯಲ್ಲಿ ವಾಡಿಕೆ ಮಳೆ ೮೧೪ ಮೀ.ಮೀಟರ್ ಆಗ ಬೇಕಿದ್ದರೆ ಇಲ್ಲಿ ಇದುವರೆಗೆ ೧೭೪೪ ಮೀ.ಮೀಟರ್ ಮಳೆಯಾಗಿದ್ದು, ಸರಾಸರಿಗಿಂತ ಶೇ ೧೧೪ ರಷ್ಟು ಹೆಚ್ಚು ಮಳೆಯಾಗಿದೆ.
‘ತಾಲೂಕಿನಲ್ಲಿ ಇದುವರೆಗೆ ಶೇ ೫೫ ರಷ್ಟು ಅಧಿಕ ಮಳೆಯಾಗಿದೆ. ಇದು ಕಾಫಿ ಬೆಳೆಗೆ ಮಾರಕವಾಗಿದ್ದರೆ ಭತ್ತದ ನಾಟಿಗೆ ಪೂರಕವಾಗಿದೆ.ಚಲುವರಂಗಪ್ಪ. ಕೃಷಿ ಅಧಿಕಾರಿ. ಸಕಲೇಶಪುರ.’ ‘ಸದ್ಯ ಮಳೆ ಬಿಡುವು ನೀಡದೆ ಹೋದರೆ ಮುಂದಿನ ವರ್ಷದ ಹಂಗಾಮು ಬಾರಿ ಪ್ರಮಾಣದಲ್ಲಿ ಕುಸಿತಗೊಳ್ಳುವುದು ನಿಶ್ಚಿತ. ಈಗಾಗಲೇ ಹಲವು ಕಾಫಿತೋಟಗಳಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ನೆಲಸೇರುತ್ತಿದೆ.’
ಪ್ರಸನ್ನ. ಕಾಫಿಬೆಳೆಗಾರರು. ಕುಣಿಗಾಲ್ ಗ್ರಾಮ.