3 ದಶಕದಿಂದ ಕ್ಷೇತ್ರದ ಸಮಸ್ಯೆ ಸಂಸತ್ತಿನಲ್ಲಿ ಪ್ರಸ್ತಾಪವಾಗಿಲ್ಲ: ಹಿರಿಯ ಶಾಸಕ ಆರ್.ವಿ. ದೇಶಪಾಂಡೆ

| Published : Apr 28 2024, 01:16 AM IST

3 ದಶಕದಿಂದ ಕ್ಷೇತ್ರದ ಸಮಸ್ಯೆ ಸಂಸತ್ತಿನಲ್ಲಿ ಪ್ರಸ್ತಾಪವಾಗಿಲ್ಲ: ಹಿರಿಯ ಶಾಸಕ ಆರ್.ವಿ. ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆನರಾ ಕ್ಷೇತ್ರದ ಮತದಾರರು ಕಳೆದ ಆರು ಬಾರಿ ಬಿಜೆಪಿ ಅಭ್ಯರ್ಥಿಯನ್ನೇ ಲೋಕಸಭಾ ಸದಸ್ಯರನ್ನಾಗಿ ಆರಿಸಿ ಕಳಿಸಿದ್ದಾರೆ. ಆದರೆ, ಕ್ಷೇತ್ರದ ಸಮಸ್ಯೆಗಳು ಬಗೆಹರಿಯದೇ ಸಮಸ್ಯೆಗಳಾಗಿಯೇ ಮುಂದುವರೆದಿದ್ದು, ಭಾರತ ಸರ್ಕಾರದಿಂದ ಈ ವರೆಗೂ ಯಾವುದೇ ಕ್ರಮವಾಗಲಿಲ್ಲ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಕೆನರಾ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾಗಿರುವ ಯೋಜನೆಗಳಾದ ರೈಲು ಮಾರ್ಗಗಳು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಬಂದುರಗಳ ಅಭಿವೃದ್ಧಿ, ಜಿಲ್ಲೆಯ ಕಡಲತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಜಿಲ್ಲೆಯ ಜನರ ಅರಣ್ಯ ಅತೀಕ್ರಮಣ ಸಮಸ್ಯೆ, ಅಂಕೋಲಾದಲ್ಲಿ ನಾಗರಿಕ ವಿಮಾನ ನಿಲ್ದಾಣ, ಮೀನುಗಾರರ ಹಿತರಕ್ಷಣಾ ಯೋಜನೆಗಳು ಸೇರಿದಂತ ನನೆಗದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿಗಳು ಗಮನಹರಿಸಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಆಗ್ರಹಿಸಿದ್ದಾರೆ.

ಭಾನುವಾರ ಏ. 28ರಂದು ಶಿರಸಿಗೆ ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹಳಿಯಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.

ಕೆನರಾ ಕ್ಷೇತ್ರದ ಮತದಾರರು ಕಳೆದ ಆರು ಬಾರಿ ಬಿಜೆಪಿ ಅಭ್ಯರ್ಥಿಯನ್ನೇ ಲೋಕಸಭಾ ಸದಸ್ಯರನ್ನಾಗಿ ಆರಿಸಿ ಕಳಿಸಿದ್ದಾರೆ. ಆದರೆ, ಕ್ಷೇತ್ರದ ಸಮಸ್ಯೆಗಳು ಬಗೆಹರಿಯದೇ ಸಮಸ್ಯೆಗಳಾಗಿಯೇ ಮುಂದುವರೆದಿದ್ದು, ಭಾರತ ಸರ್ಕಾರದಿಂದ ಈ ವರೆಗೂ ಯಾವುದೇ ಕ್ರಮವಾಗಲಿಲ್ಲ, ಅಥವಾ ಈ ಸಮಸ್ಯೆಗಳ ಪ್ರಸ್ತಾಪವೂ ಸಂಸತ್ತಿನಲ್ಲಿ ಆಗಲಿಲ್ಲ. ಕ್ಷೇತ್ರದ ಸಮಸ್ಯೆಗಳು ಬೇಗನೆ ಪರಿಹಾರವಾಗುತ್ತವೆ ಎಂದು ಮತದಾರರು ಮೂವತ್ತು ವರ್ಷಗಳಿಂದ ಕಂಡ ಕನಸು ನನಸಾಗದೇ ಮುಂದುವರಿದಿದೆ. ಅದಕ್ಕಾಗಿ ಮಾಧ್ಯಮದ ಮೂಲಕ ಕ್ಷೇತ್ರದ ಸಮಸ್ಯೆಗಳನ್ನು ಪ್ರಧಾನ ಮಂತ್ರಿಗಳ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಪ್ರಧಾನಮಂತ್ರಿಗಳಿಗೆ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅವಶ್ಯಕ ಅಭಿವೃದ್ಧಿ ಯೋಜನೆಗಳ ಬಗ್ಗೆ ಪತ್ರವನ್ನು ಬರೆಯುತ್ತೇನೆ ಎಂದರು.

ರೈಲು ಮಾರ್ಗ ನಿರ್ಮಾಣ

ಅಂಕೋಲಾ-ಹುಬ್ಬಳ್ಳಿ ಮತ್ತು ತಾಳಗುಪ್ಪ-ಹೊನ್ನಾವರ ರೈಲು ಮಾರ್ಗಗಳ ಕಾಮಗಾರಿಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಶಂಕುಸ್ಥಾಪನೆ ಮಾಡಿದ್ದು, ಅಂಕೋಲಾ-ಹುಬ್ಬಳ್ಳಿ ಮಾರ್ಗ ಎರಡು ದಶಕಗಳ ನಂತರವೂ ಅಪೂರ್ಣವಾಗಿಯೇ ಉಳಿದಿದೆ. ಕೇವಲ ಕಲಘಟಗಿ ವರೆಗಿನ ಭಾಗ ಮಾತ್ರ ಭಾಗಶಃ ಪೂರ್ಣಗೊಂಡಿರುತ್ತದೆ.

ಬದುಕು ನಿರ್ವಹಣೆಗಾಗಿ ಅರಣ್ಯವನ್ನು ಅವಲಂಭಿಸಿರುವ ಜಿಲ್ಲೆಯ ಅರಣ್ಯ ವಾಸಿಗಳಗೆ ಭೂ ಒಡೆತನದ ಹಕ್ಕನ್ನು ನೀಡಲು ಭಾರತ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆಯಿದೆ.

ನಿರಾಶ್ರಿತರಿಗೆ ಪರಿಹಾರ

ಕೈಗಾ ಮತ್ತು ಸೀ ಬರ್ಡ್‌ ಯೋಜನೆಗಳಿಂದ ಸ್ಥಳಾಂತರಗೊಂಡ ನಿರಾಶ್ರಿತರಿಗೆ ಪೂರ್ಣ ಪರಿಹಾರವನ್ನು ನೀಡಲಾಗಿಲ್ಲ. ಅಲ್ಲದೇ, ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ ನೀಡಿರುವುದಿಲ್ಲ.

ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗಾಗಿ ಮಂಗಳೂರು ಮತ್ತು ಮಡಗಾಂವ್ ನಡುವೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಹೆಚ್ಚಿನ ರೈಲುಗಳನ್ನು ಆರಂಭಿಸಬೇಕು ಹಾಗೂ ಭಾರತೀಯ ರೈಲಿನಲ್ಲ ಕೊಂಕಣ ರೈಲ್ವೆಯನ್ನು ಸೇರ್ಪಡೆ ಮಾಡಬೇಕು.

ಜಿಲ್ಲೆಯ ಕುಣಬಿ ಮತ್ತು ಹಾಲಕ್ಕಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರ್ಪಡೆ ಮಾಡಬೇಕು.

ಉತ್ತರ ಕನ್ನಡ ಜಿಲ್ಲೆ 140-ಕಿಲೋಮೀಟರ್ ಕರಾವಳಿ ತೀರ ಪ್ರದೇಶವನ್ನು ಹೊಂದಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಖ್ಯವಾಗಿ ಕಾರವಾರ, ಗೋಕರ್ಣದ ಬಳಿಯ ಓಂ ಬೀಚ್, ಮುರ್ಡೇಶ್ವರ ಮತ್ತು ಕಾಸರಕೋಡ್‌ನಂತಹ ಕಡಲತೀರಗಳಲ್ಲಿ ಜಲ ಕ್ರೀಡೆಗಳು ಮತ್ತು ಸಂಬಂಧಿತ ಚಟುವಟಿಕೆಗಳನ್ನು ಪ್ರಾರಂಭಿಸುವುದರ ಮೂಲಕ ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಬಹುದಾಗಿದೆ.

ಬಂದರು ಅಭಿವೃದ್ಧಿ

ಖಾನಾಪುರದಿಂದ ಭಟ್ಕಳಕ್ಕೆ ರಾಷ್ಟ್ರೀಯ ಹೆದ್ದಾರಿ ಅವಶ್ಯಕತೆ ಇದ್ದು, ಹೆದ್ದಾರಿಯು ಹಳಿಯಾಳ, ಯಲ್ಲಾಪುರ, ಶಿರಸಿ ಮತ್ತು ಸಿದ್ದಾಪುರ ಮಾರ್ಗವಾಗಿ ಅಭಿವೃದ್ಧಿ ಪಡಿಸುವುದು ಬಹುಕಾಲದ ಬೇಡಿಕೆಯಾಗಿದ್ದು ಪರಿಹರಿಸಬೇಕಾಗಿದೆ.

ವಿಶೇಷವಾಗಿ ಕಾರವಾರ, ಬೇಲೆಕೇರಿ, ತದಡಿ, ಹೊನ್ನಾವರ ಮತ್ತು ಭಟ್ಕಳದಂತಹ ಪ್ರಮುಖ ಸ್ಥಳಗಳಲ್ಲಿ ಬಂದರು ಅಭಿವೃದ್ಧಿ ಪಡಿಸುವುದು ಅವಶ್ಯವಿರುತ್ತದೆ. ಮೀನುಗಾರರ ಜೀವನೋಪಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ಬಂದರುಗಳನ್ನು ಅಭಿವೃದ್ಧಿ ಪಡಿಸಬೇಕೆಂದು ದೇಶಪಾಂಡೆ ಪ್ರಧಾನಿಗಳ ಗಮನಸೆಳೆದಿದ್ದಾರೆ.