ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂವಿಧಾನ ರಚನೆಯಾಗಿ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಫೆ. 24 ಮತ್ತು 25ರಂದು ಅರಮನೆ ಮೈದಾನದಲ್ಲಿ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶ 24’ ಆಯೋಜಿಸಿದೆ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು, ಕೇಂದ್ರ ಸಚಿವರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.ಸಮಾವೇಶವನ್ನು ಫೆ. 24ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಕೇಂದ್ರ ಸಚಿವರಾದ ಎಂ. ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ, ಸಭಾಧ್ಯಕ್ಷ ಯು.ಟಿ. ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷ ಅನಂತ್ ನಾಥ್ ಸೇರಿದಂತೆ ಇನ್ನಿತರರು ಆಹ್ವಾನಿತರಾಗಿದ್ದಾರೆ. ಎರಡು ದಿನಗಳ ಸಮಾವೇಶಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್‌ನ ಅಧ್ಯಕ್ಷ ಶರದ್ ಪವಾರ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಜಮ್ಮು- ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಸಿಪಿಐಎಂನ ಸೀತಾರಾಂ ಯೆಚೂರಿ, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಸೇರಿದಂತೆ ಐಎನ್‌ಡಿಐಎ (ಇಂಡಿಯಾ) ಒಕ್ಕೂಟದ ಹಲವು ಗಣ್ಯರನ್ನೂ ಆಹ್ವಾನಿಸಲಾಗಿದೆ.ಎರಡು ದಿನಗಳ ಸಮಾವೇಶದಲ್ಲಿ ಹಲವು ವಿಚಾರಗಳ ಕುರಿತಂತೆ ಸಂವಾದ ನಡೆಸಲಾಗುತ್ತದೆ. ಸಂವಿಧಾನದ 75ನೇ ವರ್ಷ, ಸಂವಿಧಾನ, ಕಲ್ಯಾಣ ಮತ್ತು ಅಭಿವೃದ್ಧಿ, ಕರ್ನಾಟಕದಲ್ಲಿನ ಅಭಿವೃದ್ಧಿಯ ದೃಷ್ಟಿಕೋನ, ಪ್ರಜಾಪ್ರಭುತ್ವ ಮತ್ತು ಎಲ್ಲರನ್ನೂ ಒಳಗೊಂಡ ಕರ್ನಾಟಕ ವಿಷಯಗಳ ಅಡಿಯಲ್ಲಿ ವಿವಿಧ ವಿಚಾರಗಳ ಕುರಿತಂತೆ ಸಂವಾದ, ವಿಚಾರ ಮಂಡನೆ ಮಾಡಲಾಗುತ್ತದೆ.
;Resize=(128,128))
;Resize=(128,128))
;Resize=(128,128))
;Resize=(128,128))