ಸಂವಿಧಾನಕ್ಕೆ ಅಗೌರವ ಸಲ್ಲದು

| Published : Apr 15 2025, 12:47 AM IST

ಸಾರಾಂಶ

ಭಾರತೀಯರಿಗೆ ಮಹಾಭಾರತ ಹಾಗೂ ರಾಮಾಯಣ ಹೇಗೆ ಶ್ರೇಷ್ಠ ಗ್ರಂಥವೋ, ಅದೇ ರೀತಿ ಸಂವಿಧಾನದ ಕೃತಿಯೂ ಶ್ರೇಷ್ಠ

ಕನ್ನಡಪ್ರಭ ವಾರ್ತೆ ಮೈಸೂರುಪ್ರಜಾಪ್ರಭುತ್ವದ ಪವಿತ್ರ ಗ್ರಂಥ ಸಂವಿಧಾನ ಕುರಿತು ಅಗೌರವದ ಹೇಳಿಕೆಗಳನ್ನು ನೀಡುವುದು ಸಲ್ಲದು ಎಂದು ಮಾಜಿ ಮೇಯರ್‌ ಸಂದೇಶ್ ಸ್ವಾಮಿ ಹೇಳಿದರು.ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಸೋಮವಾರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಾ, ಭಾರತೀಯರಿಗೆ ಮಹಾಭಾರತ ಹಾಗೂ ರಾಮಾಯಣ ಹೇಗೆ ಶ್ರೇಷ್ಠ ಗ್ರಂಥವೋ, ಅದೇ ರೀತಿ ಸಂವಿಧಾನದ ಕೃತಿಯೂ ಶ್ರೇಷ್ಠ. ಆದರೆ ಇಂದು ಸಂವಿಧಾನ ಕುರಿತು ಪರ ವಿರೋಧ ಚರ್ಚೆಗಳು ಹೆಚ್ಚಾಗುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಸಂವಿಧಾನ ಬರುವುದಕ್ಕೆ ಮುನ್ನ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳ ವಿಚಾರಧಾರೆಗಳನ್ನು ಅನುಸರಿಸಿ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ನಮ್ಮ ಪೂರ್ವಿಕರು ಮುಂದಾಗಿದ್ದಾಗಿ ಹೇಳಿದರು.ಆದರೆ ಇಂದು ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡಿರುವಾಗ, ಅದರ ಬುನಾದಿಯಾಗಿರುವ ಸಂವಿಧಾನವನ್ನು ಯಾವುದೇ ಅಪಸ್ವರವಿಲ್ಲದೆ ಅನುಸರಿಸಿಕೊಂಡು ನಡೆಯಬೇಕಿದೆ ಎಂದರು.ಸಂವಿಧಾನದ ಮೂಲ ಆಶಯವೇ ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬುದು. ಮಾನವ ಕುಲ ಒಂದೇ ಎಂಬುದು ಸಂವಿಧಾನ ರೂಪಿಸಿದ ಡಾ. ಅಂಬೇಡ್ಕರ್ ಅವರ ಆಶಯ. ಅವರ ತತ್ತ್ವ ಮತ್ತು ಆದರ್ಶಗಳನ್ನು ನಾವು ನೀವೆಲ್ಲರೂ ಅನುಸರಿಸಬೇಕು. ಇದು ನಾವು ಅವರಿಗೆ ಕೊಡಬಹುದಾದ ನಿಜವಾದ ಗೌರವ ಎಂದು ಅವರು ಹೇಳಿದರು.ಜಗತ್ತಿನಲ್ಲಿ ಅತಿಜನಸಂಖ್ಯೆ ಹೊಂದಿರುವ ಭಾರತ ದೇಶದ ಮುನ್ನೆಡೆಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಅದಕ್ಕೆ ಮೂಲಕಾರಣವಾಗಿರುವುದು ಸಂವಿಧಾನ. ಇಡೀ ವಿಶ್ವವೇ ನಮ್ಮ ಸಂವಿಧಾನ ಮೆಚ್ಚಿಕೊಂಡಿದೆ. ಹೀಗಿರುವಾಗ ಯಾವುದೇ ಪಕ್ಷದ ನಾಯಕರು ತಮ್ಮ ಸ್ವಹಿತಾಸಕ್ತಿಗಾಗಿ ಸಂವಿಧಾನದ ಬಗ್ಗೆ ಅಗೌರವದ ಹೇಳಿಕೆ ನೀಡುವುದು ಸರಿಯಲ್ಲ. ಅದರ ಬದಲು ಸಂವಿಧಾನದ ಆಶಯಗಳನ್ನು ಸಮಾಜಕ್ಕೆ ಸಾರುವ ಮೂಲಕದೇಶದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.