ಎಲ್ಲರ ಆಶಯಗಳಿಗೆ ಪೂರಕವಾಗಿದೆ ಸಂವಿಧಾನ

| Published : Feb 05 2024, 01:48 AM IST

ಸಾರಾಂಶ

ಸಂವಿಧಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ, ಅರಿವು ಮೂಡಿಸುವ ದಿಸೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಈ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ ಪ್ರತಿ ಭಾರತೀಯರ ಆಶಯಗಳಿಗೆ ಅಂಬೇಡ್ಕರರು ಪೂರಕವಾಗಿ ಸಂವಿಧಾನ ರಚಿಸಿದ್ದು ಜಗತ್ತಿನ ಸರ್ವಶ್ರೇಷ್ಠ, ಅತಿದೊಡ್ಡ ಪ್ರಜಾಪ್ರಭುತ್ವದ ಹೆಗ್ಗಳಿಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಹುಕ್ಕೇರಿ ಪಟ್ಟಣಕ್ಕೆ ಶನಿವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ, ಸ್ತಬ್ಧ ಚಿತ್ರಗಳನ್ನೊಳಗೊಂಡ ವಿಶೇಷ ರಥದ ಮೆರವಣಿಗೆ ಸ್ವಾಗತಿಸಿ ಮಾತನಾಡಿದ ಅವರು, ಸಂವಿಧಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ, ಅರಿವು ಮೂಡಿಸುವ ದಿಸೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಈ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಸಂವಿಧಾನ ಪೀಠಿಕೆ ಮಹತ್ವ ಸಾರಲು ಈ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ. ಸ್ಥಬ್ದ ಚಿತ್ರದ ಮೆರವಣಿಗೆ ಜಿಲ್ಲೆಯ ವಿವಿಧ ಗ್ರಾಪಂನಲ್ಲಿ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ಸ್ವಯಂ ಸೇವಾ ಸಂಘಟನೆಗಳು ಸ್ವಾಗತಿಸಲಿದ್ದು ಗ್ರಾಮಗಳಲ್ಲಿ ಹಬ್ಬದ ವಾತಾವರಣ ನೆಲೆಯೂರಲಿದೆ ಎಂದು ಅವರು ಹೇಳಿದರು.

ತಹಸೀಲ್ದಾರ್‌ ಮಂಜುಳಾ ನಾಯಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ, ಪುರಸಭೆ ಮುಖ್ಯಾಧಿಕಾರಿ ಕಿಶೋರ ಬೆಣ್ಣಿ, ಸಿಪಿಐ ಮಹಾಂತೇಶ ಬಸ್ಸಾಪುರ, ಬಿಇಒ ಪ್ರಭಾವತಿ ಪಾಟೀಲ, ಕಾರ್ಮಿಕ ನಿರೀಕ್ಷಕಿ ಜಾನ್ಹವಿ ತಳವಾರ, ಪುರಸಭೆ ಸದಸ್ಯರಾದ ಆನಂದ ಗಂಧ, ಸದಾಶಿವ ಕರೆಪ್ಪಗೋಳ, ಸಂಗೀತಾ ಹುಕ್ಕೇರಿ, ಮಹಾಂತೇಶ ತಳವಾರ, ಚಂದು ಮುತ್ನಾಳೆ, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ಕರೆಪ್ಪ ಗುಡೆನ್ನವರ, ಮುಖಂಡ ಉದಯ ಹುಕ್ಕೇರಿ, ಸದಾಶಿವ ಕಾಂಬಳೆ, ಬಸವರಾಜ ಕೋಳಿ, ಕೆಂಪಣ್ಣಾ ಶಿರಹಟ್ಟಿ, ಕೆ.ವೆಂಕಟೇಶ, ರಾಜು ಮೂಥಾ ಮತ್ತಿತರರು ಇದ್ದರು.

ವಿಶೇಷ ವಾಹನದಲ್ಲಿ ನಿರ್ಮಿಸಿದ ಸಂವಿಧಾನ ಪೀಠಿಕೆಯುಳ್ಳ ಸ್ಥಬ್ದ ಚಿತ್ರದ ರಥವನ್ನು ಅದ್ದೂರಿಯಾಗಿ ಸಕಲ ವಾದ್ಯಮೇಳದೊಂದಿಗೆ ಬರಮಾಡಿಕೊಳ್ಳಲಾಯಿತು. ಮಹಿಳೆಯರು ಕುಂಭ ಹೊತ್ತು ಸಾಗಿದ್ದು ಮೆರವಣಿಗೆ ಮತ್ತು ಐಕ್ಯತಾ ಸಮಾವೇಶಕ್ಕೆ ಮತ್ತಷ್ಟು ಮೆರಗು ತಂದಿತು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಲೇಜಿಮ್ ಬಾರಿಸಿ ಹರ್ಷ ವ್ಯಕ್ತಪಡಿಸಿದರು. ಆಶಾ-ಅಂಗನವಾಡಿ ಕಾರ್ಯಕರ್ತೆಯರು ಆರತಿ ಬೆಳಗಿ ಜಾಥಾಗೆ ಶುಭ ಹಾರೈಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಶಿಸ್ತು ಬದ್ಧ ನಡಿಗೆ ಗಮನ ಸೆಳೆಯಿತು.