ಒಂದು ತಿಂಗಳ ಕಾಲ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ

| Published : Jan 25 2024, 02:05 AM IST

ಒಂದು ತಿಂಗಳ ಕಾಲ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾದ್ಯಂತ ಜ.೨೬ರಿಂದ ಫೆ.೨೩ರವರೆಗೆ ಸಂವಿಧಾನದ ಜಾಗೃತಿ ಮತ್ತು ಅರಿವಿಗಾಗಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂವಿಧಾನ ಜಾಗೃತಿ ಕಾರ್ಯಕ್ರಮ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲಾದ್ಯಂತ ಜ.೨೬ರಿಂದ ಫೆ.೨೩ರವರೆಗೆ ಸಂವಿಧಾನದ ಜಾಗೃತಿ ಮತ್ತು ಅರಿವಿಗಾಗಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂವಿಧಾನದ ಜಾಗೃತಿಗಾಗಿ ಸ್ಥಬ್ಧಚಿತ್ರ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ಪೂರ್ವಸಿದ್ಧತಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ಒಂದು ತಿಂಗಳ ಕಾಲಾವಧಿಯಲ್ಲಿ ಜಿಲ್ಲೆಯಲ್ಲಿ ಜಾಥಾ ಸಂಚರಿಸಿ ಬೆಂಗಳೂರಿನಲ್ಲಿ ಫೆ.೨೫ರಂದು ನಡೆಯಲಿರುವ ರಾಷ್ಟ್ರಮಟ್ಟದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ ಎಂದರು.

ಪ್ರತಿ ದಿನ ಮೂರು ಹಳ್ಳಿಗಳಂತೆ ಜಿಲ್ಲೆಯ ೨೨೩ ಗ್ರಾಮ ಪಂಚಾಯಿತಿ ಹಾಗೂ ಹತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಎರಡು ಟ್ಯಾಬ್ಲೋಗಳು ಸಂಚರಿಸಲಿವೆ. ಪ್ರತಿ ಗ್ರಾಪಂಗಳಲ್ಲಿ ಎಲ್.ಇ.ಡಿ. ಮೂಲಕ ಸಂವಿಧಾನದ ಜಾಗೃತಿ ಸಾಕ್ಷ್ಯಚಿತ್ರ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಒಳಗೊಂಡಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಂವಿಧಾನ ಜಾಗೃತಿ ಸಾಕ್ಷ್ಯಚಿತ್ರ ಎರಡು ತಂಡವಾಗಿ ಸಾಗಲಿದೆ. ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ಮಾರ್ಗದಲ್ಲಿ ಒಂದು ಟ್ಯಾಬ್ಲೋ ಹಾಗೂ 2ನೇ ಟ್ಯಾಬ್ಲೋ ಹಾನಗಲ್, ಶಿಗ್ಗಾಂವಿ, ಸವಣೂರು, ಹಾವೇರಿ ಮಾರ್ಗದಲ್ಲಿ ಸಂಚರಿಸಲಿದೆ. ಪ್ರತಿ ಟ್ಯಾಬ್ಲೋ ಪ್ರತಿ ದಿನ ಮೂರು ಗ್ರಾಮಗಳಿಗೆ ಸಂಚರಿಸಲಿದೆ. ಆಯಾ ಗ್ರಾಮಗಳಲ್ಲಿ ನಿಗದಿತ ಕಾಲಾವಧಿಯಲ್ಲಿ ಕಾರ್ಯಕ್ರಮ ಪೂರ್ಣಗೊಳಿಸಿ ಮುಂದೆ ಸಾಗಲಿದೆ. ಪ್ರತಿ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಲೋಪವಾಗದಂತೆ ನಿಗದಿತ ಸಮಯಾವಕಾಶದಲ್ಲಿ ಆಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಟ್ಯಾಬ್ಲೋ ಜೊತೆಗೆ ಎಲ್.ಇ.ಡಿ. ವಾಹನ ಹಾಗೂ ಇತರ ವಾಹನ ಸೇರಿದಂತೆ ಮೂರು ವಾಹನಗಳು ಇರುತ್ತವೆ. ಪ್ರತಿ ತಾಲೂಕಿನಲ್ಲಿ ಟ್ಯಾಬ್ಲೋ ಸಾಗುವ ದಾರಿ, ಪೊಲೀಸ್ ರಕ್ಷಣೆ, ಟ್ಯಾಬ್ಲೋ ಹಾಗೂ ಕಲಾವಿದರ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಸೇರಿದಂತೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಗ್ರಾಮ ಹಾಗೂ ಪಟ್ಟಣಗಳಲ್ಲಿ ನಡೆಯುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸ್ಥಳೀಯ ಎಲ್ಲ ಇಲಾಖಾ ಅಧಿಕಾರಿಗಳು ಭಾಗವಹಿಸಬೇಕು. ಜಾಥಾದ ಜೊತೆಗೆ ಕಲಾ ತಂಡಗಳು, ಬೀದಿ ನಾಟಕ, ಜಾನಪದ ಸಂಗೀತ ತಂಡಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದರು.

ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆ, ಪೋಸ್ಟ್ ಕಾರ್ಡ್ ಬರೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಉಪವಿಭಾಗಾಧಿಕಾರಿಗಳಾದ ಚೆನಪ್ಪ ಹಾಗೂ ಮಹ್ಮದ್ ಖಿಜರ್ ಇತರರು ಇದ್ದರು.

ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ, ವಿವಿಧ ಸ್ಪರ್ಧೆ:

ಚುನಾವಣಾ ಆಯೋಗದ ನಿರ್ದೇಶನದಂತೆ ಜ.೨೫ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಹಾಗೂ ಜಿಲ್ಲೆಯ ಎಲ್ಲ ಬೂತ್ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜ.೨೫ರಂದು ಬೆಳಗ್ಗೆ ೮ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ೨,೫೦೦ ವಿದ್ಯಾರ್ಥಿಗಳಿಂದ ಮತದಾನದ ಗುರುತಾಗಿ ತೋರು ಬೆರಳಿಗೆ ಶಾಹಿ ಹಾಕುವ ಆಕೃತಿ ರಚನೆ, ನಂತರ ೨೦೦ ವಿದ್ಯಾರ್ಥಿಗಳಿಂದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ರಚನೆ, ನಗರದ ಪ್ರಮುಖ ಮಾರ್ಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.

ಗುರುಭವನದಲ್ಲಿ ಬೆಳಗ್ಗೆ ೧೦.೩೦ಕ್ಕೆ ರಾಷ್ಟ್ರೀಯ ಮತದಾರರ ದಿನಾಚರಣೆ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಭಿತ್ತಿಪತ್ರ ಸ್ಪರ್ಧೆ ಆಯೋಜಿಸಿ ಈ ಮೂರು ವಿಭಾಗದಲ್ಲಿ ಅತ್ಯುತ್ತಮ ಮೂರು ಜನರನ್ನು ಆಯ್ಕೆ ಮಾಡಿ ಬಹುಮಾನ ವಿತರಣೆಗೆ ಕ್ರಮವಹಿಸುವಂತೆ ಸೂಚಿಸಲಾಯಿತು.

ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಸದಾಗಿ ನೊಂದಾಯಿಸಿಕೊಂಡ ಯುವ ಮತದಾರರಿಗೆ ಗುರುತಿನ ಚೀಟಿ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾರರಿಗೆ ಜಾಗೃತಿ ಮೂಡಿಸಲು ಸಲಹೆ ನೀಡಲಾಯಿತು. ಇದರ ಅಂಗವಾಗಿ ಜಿಲ್ಲೆಯ ೧೪೮೨ ಮತಗಟ್ಟೆಗಳಲ್ಲಿ ಬೂತ್ ಲೆವಲ್ ಅಧಿಕಾರಿಗಳು ಉಪಸ್ಥಿತರಿದ್ದು, ಮತದಾರರ ದಿನಾಚರಣೆ ಆಚರಿಸಬೇಕು ಎಂದು ಡಿಸಿ ಸೂಚಿಸಿದರು.

ಸಭೆಯಲ್ಲಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಉಪವಿಭಾಗಾಧಿಕಾರಿಗಳಾದ ಚೆನಪ್ಪ ಹಾಗೂ ಮಹ್ಮದ್ ಖಿಜರ್ ಇತರರು ಇದ್ದರು.