ಸಾರಾಂಶ
ತುಮಕೂರು: ಧರ್ಮದ ಆಧಾರದ ಮೇಲೆಯೇ ನಮ್ಮ ಸಂವಿಧಾನ ರಚಿತವಾಗಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಇದು ನನ್ನ ದೇಶ,ನನ್ನ ಧರ್ಮ ಎಂಬ ಭಾವನೆ ಮೂಡಬೇಕೆಂದು ಬರೆಯಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:ಜಿ.ಪರಮೇಶ್ವರ್ ತಿಳಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಂದು ಅದ್ದೂರಿಯ ದಸರಾ ಉತ್ಸವಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಹಿರಿಯರು ಒಗ್ಗೂಡಿ ದಸರಾ ಉತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದರು.ಅವರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಈ ಬಾರಿ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ದಸರಾ ಉತ್ಸವವು ತುಮಕೂರು ಜಿಲ್ಲೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಾಗಬೇಕು. ಸ್ಥಳೀಯ ಸಂಸ್ಕೃತಿ, ಧಾರ್ಮಿಕ ಆಚಾರ-ವಿಚಾರಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ಸಂವಿಧಾನ ಆಶಯವೂ ಆಗಿದೆ ಎಂದರು.ನಮ್ಮ ಧಾರ್ಮಿಕ ಆಚರಣೆ, ವಿಚಾರಧಾರೆ, ಭವ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ತುಮಕೂರಿನಲ್ಲಿ ಪ್ರಪ್ರಥಮ ಬಾರಿಗೆ ತುಮಕೂರು ದಸರಾ ಉತ್ಸವ ಆಚರಣೆಯನ್ನು ಪ್ರಾರಂಭಿಸಲಾಗಿದೆ. ತುಮಕೂರು ದಸರಾ ಉತ್ಸವವನ್ನು ಪ್ರಾರಂಭಿಸಿರುವುದು ಮೈಸೂರು ದಸರಾಗೆ ಹೋಲಿಕೆ ಮಾಡಲು ಅಲ್ಲ ಎಂದು ಸ್ಪಷ್ಟನೆ ನೀಡಿದರು.
ತುಮಕೂರು ದಸರಾ ಆಚರಣೆಗೆ ಮುಖ್ಯಮಂತ್ರಿಯವರು 1 ಕೋಟಿ ರು.ಗಳ ಅನುದಾನ ನೀಡಿ ಪ್ರೋತ್ಸಾಹಿಸಿದ್ದಾರೆ .ದಸರಾ ಪ್ರಯುಕ್ತ ಮುಂದಿನ 9 ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಚಾಮುಂಡೇಶ್ವರಿ ದೇವಿ ಕೃಪೆಗೆ ಪಾತ್ರರಾಗಿ ಖ್ಯಾತ ಕಲಾವಿದರಿಂದ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬೇಕೆಂದು ಮನವಿ ಮಾಡಿದರು. ತುಮಕೂರು ದಸರಾ ಆಚರಣೆ ಮೂಲಕ ಹೊಸ ಚರಿತ್ರೆ ಸೃಷ್ಠಿಇದಕ್ಕೂ ಮುನ್ನ ತುಮಕೂರು ದಸರಾ ಉತ್ಸವದ ಮೊದಲ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಅದ್ದೂರಿಯಾಗಿ ಇಂದಿನಿಂದ 10 ದಿನಗಳ ಕಾಲ ತುಮಕೂರು ದಸರಾ ಉತ್ಸವ ಆಚರಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹೊಸ ಚರಿತ್ರೆ ಸೃಷ್ಠಿಯಾಗಿದೆ ಎಂದು ತಿಳಿಸಿದರು.
ದಸರಾ ಉತ್ಸವದ ಪ್ರಯುಕ್ತ ಅಕ್ಟೋಬರ್ 12ರಂದು ಜರುಗಲಿರುವ ಮೆರವಣಿಗೆಯಲ್ಲಿ ಜಂಬೂ ಸವಾರಿ ನಡೆಯಲಿದ್ದು, ಅಲಂಕೃತ ಆನೆಗಳು, ಕುದುರೆಗಳು,ವಿವಿಧ ಕಲಾ ತಂಡಗಳು ಮತ್ತು ಜಿಲ್ಲೆಯ 70ಕ್ಕೂ ಹೆಚ್ಚು ದೇವರ ಉತ್ಸವ ಮೂರ್ತಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷವೆಂದು ತಿಳಿಸಿದರು.ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ನಮ್ಮಲ್ಲಿರುವ ಕೆಟ್ಟ ಭಾವನೆಯನ್ನು ಹೋಗಲಾಡಿಸಿ ಒಳ್ಳೆಯದ್ದನ್ನು ಅಳವಡಿಸಿಕೊಳ್ಳಬೇಕು ಎಂಬ ಪ್ರತೀಕವೇ ದಸರಾ ಆಚರಣೆ. ತುಮಕೂರಿನ ದಸರಾ ಉತ್ಸವವು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು ಎಂದು ತಿಳಿಸಿದರು.
ಕೊರಟಗೆರೆ ತಾಲೂಕು ಎಲೆರಾಂಪುರದ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಹನುಮಂತನಾಥ ಮಹಾಸ್ವಾಮೀಜಿ ಮಾತನಾಡಿ, ತುಮಕೂರು ದಸರಾ ಉತ್ಸವ ಆಚರಿಸಲು ಜಿಲ್ಲಾಡಳಿತ ಹಗಲಿರುಳು ಶ್ರಮಿಸಿದೆ. ತಾಯಿ ಶ್ರೀ ಚಾಮುಂಡಿ ದೇವಿ ಅನುಗ್ರಹ ಜಿಲ್ಲೆಯ ಜನತೆ ಮೇಲಿರಲಿ ಎಂದು ಆಶೀರ್ವದಿಸಿದರು. ಶಾಸಕ ಟಿ. ಬಿ.ಜಯಚಂದ್ರ ಮಾತನಾಡಿ, ಇಡೀ ದೇಶದಲ್ಲೇ 9 ದಿನಗಳ ಕಾಲ ನವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಮೈಸೂರು ದಸರಾ ಮಾದರಿಯಲ್ಲಿ ತುಮಕೂರಿನಲ್ಲಿಯೂ ದಸರಾ ಉತ್ಸವವನ್ನು ಆರಂಭಿಸಿರುವ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಶಾಸಕ ಕೆ.ಷಡಕ್ಷರಿ ಮಾತನಾಡಿ, ಕಲೆ,ಸಂಸ್ಕೃತಿಯನ್ನು ಬೆಳೆಸಿರುವ ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದಿಂದ ಪ್ರಾರಂಭವಾಗಿರುವ ಈ ದಸರಾ ಉತ್ಸವ ಶಾಶ್ವತವಾಗಿ ಪ್ರತಿವರ್ಷ ಆಚರಿಸುವಂತಾಗಬೇಕು ಎಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸುಮಾರು 33 ವರ್ಷದಿಂದಲೂ ದಸರಾ ಸಮಿತಿ ಸಂಘಟಕರಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಈ ಬಾರಿ ಸರ್ಕಾರದಿಂದಲೇ ದಸರಾ ಉತ್ಸವ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಹಾಗೂ ಪತ್ನಿ ಕನ್ನಿಕಾ ಪರಮೇಶ್ವರ ದಂಪತಿಗಳು ಹೋಮ-ಹವನ,ಧಾರ್ಮಿಕ ವಿಧಿ-ವಿಧಾನದೊಂದಿಗೆ ಶ್ರೀ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ತುಮಕೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದು,ಶಕ್ತಿ ದೇವತೆಯ ಆರಾಧನೆಯಿಂದ ಜಿಲ್ಲೆಯ ಜನತೆಗೆ ಸನ್ಮಂಗಳ ಉಂಟಾಗಲಿ ಎಂದು ಆಶಿಸಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಗಣ್ಯರನ್ನು ಸ್ವಾಗತಿಸಿದರು.ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿಗಳ ಹೆಸರಿನಲ್ಲಿ ನಿರ್ಮಾಣದ ಧಾರ್ಮಿಕ ಮಂಟಪದ ಮುಂಭಾಗದಲ್ಲಿ ಸಚಿವ ಡಾ:ಜಿ.ಪರಮೇಶ್ವರ ಧ್ವಜಾರೋಹಣ ನೆರವೇರಿಸಿದರು.ಭಕ್ತಾದಿಗಳು ಶ್ರೀ ಶೈಲಪುತ್ರಿ ಅಲಂಕಾರದಲ್ಲಿದ್ದ ಶ್ರೀ ಚಾಮುಂಡಿ ದೇವಿಯ ದರ್ಶನ ಮಾಡಿ ತಮ್ಮ ಭಕ್ತಿಭಾವವನ್ನು ಸರ್ಮಪಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ವಂದಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್,ಡಿವೈಎಸ್ಪಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ,ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಸೇರಿದಂತೆ ದಸರಾ ಸಮಿತಿಯ ವಿವಿಧ ಪದಾಧಿಕಾರಿಗಳು,ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು.