ಸಂವಿಧಾನ ಬದಲಿಸಿದ್ಯಾರು, ಓದಿ ಸತ್ಯ ತಿಳಿದುಕೊಳ್ಳಿ!

| Published : Jan 12 2025, 01:15 AM IST

ಸಂವಿಧಾನ ಬದಲಿಸಿದ್ಯಾರು, ಓದಿ ಸತ್ಯ ತಿಳಿದುಕೊಳ್ಳಿ!
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಡಾ.ಅಂಬೇಡ್ಕರ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ಹೇಳುತ್ತಿರುವ ಸುಳ್ಳು ಆರೋಪದ ವಿಚಾರದಲ್ಲಿ ಸತ್ಯ ಹೊಸಲು ದಾಟುವ ಮುಂಚೆ ಸುಳ್ಳು ಊರೆಲ್ಲ ಸುತ್ತಾಡಿಕೊಂಡು ಬರುತ್ತದೆ ಎಂಬ ಗಾದೆ ಮಾತು ನಿಜವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಡಾ.ಅಂಬೇಡ್ಕರ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ಹೇಳುತ್ತಿರುವ ಸುಳ್ಳು ಆರೋಪದ ವಿಚಾರದಲ್ಲಿ ಸತ್ಯ ಹೊಸಲು ದಾಟುವ ಮುಂಚೆ ಸುಳ್ಳು ಊರೆಲ್ಲ ಸುತ್ತಾಡಿಕೊಂಡು ಬರುತ್ತದೆ ಎಂಬ ಗಾದೆ ಮಾತು ನಿಜವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಸಂಗನಬಸವ ಸಮುದಾಯ ಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂವಿಧಾನ ಸನ್ಮಾನ ಪುಸಕ್ತ ಬಿಡುಗಡೆ ಮಾಡಿ ಅವರು ಮಾತನಾಡಿದರು. ಯಾರು ಅಂಬೇಡ್ಕರ ಅವರ ಪ್ರೇಮಿಗಳು, ಯಾರು ವಿರೋಧಿಗಳು ಎಂಬ ಸತ್ಯ ಗೊತ್ತಾಗಬೇಕು. ಅಂಬೇಡ್ಕರ ನಿಧನವಾದಾಗ ಅವರಿಗೆ ಯಾರು ಅವಮಾನ ಮಾಡಿದರು. ಅವರ ನಿಧನಾನಂತರ ಯಾರು ಗೌರವ ನೀಡಿದರು? ಸಂವಿಧಾನ ಬದಲಿಸಿದ್ದು ಯಾರು ಎಂಬ ಪುಸ್ತಕ ಓದಿ, ನಂತರ ಸತ್ಯ ತಿಳಿದುಕೊಳ್ಳಿ ಎಂದು ಮನವಿ ಮಾಡಿದರು.

ಚುನಾವಣೆಯಲ್ಲಿ ಅಂಬೇಡ್ಕರ ಅವರನ್ನು ಕಾಂಗ್ರೆಸ್‌ನವರು ಸೋಲಿಸುತ್ತಾರೆ. 2015 ಜನವರಿಯಿಂದ ನವೆಂಬರ್ 26ರವರೆಗೆ ಸಂವಿಧಾನ ದಿನ ಆಚರಣೆ ಮಾಡುತ್ತಿದ್ದೆವು. ಅಂಬೇಡ್ಕರ ಬದುಕಿದ್ದಾಗ ಅವರನ್ನು ಸೋಲಿಸಿದವರು ಯಾರು? ಸೋಲಿಸಿದ ಪಕ್ಷ ಯಾವುದು? ಸೋಲಿಸಿದ್ದು ಕಾಂಗ್ರೆಸ್ ಪಾರ್ಟಿ, ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರು. ಉಪ‌ಚುನಾವಣೆಯಲ್ಲಿ ಅಂಬೇಡ್ಕರ ವಿರುದ್ದ ಪ್ರಚಾರ ಮಾಡಿದರು. ಹಾಗಾದರೆ ಅಂಬೇಡ್ಕರ ಅವರ ವಿರೋಧಿ ಯಾರು ಎಂದು ನೀವೇ ಹೇಳಿ ಹೇಳಿದರು.

ಸಂವಿಧಾನ ತಿದ್ದುಪಡಿ ಯಾವಾಗಾಯ್ತು?:

ನರೇಂದ್ರ ಮೋದಿ ಸರ್ಕಾರ ಅಂಬೇಡ್ಕರ ಅವರಿಗೆ ಗೌರವ ನೀಡಿದೆ. ಸಮಗ್ರ ಭಾರತಕ್ಕೆ ಸಂವಿಧಾನ ಅನುಷ್ಠಾನ ಮಾಡಿದ್ದೇ ಅಂಬೇಡ್ಕರ. ಮೀಸಲಾತಿ ಅಭಿವೃದ್ಧಿಗೆ ಮಾರಕ ಎಂದು ಪ್ರಧಾನಿಯಾಗಿದ್ದ‌ ವೇಳೆ ನೆಹರು ಎಲ್ಲ ರಾಜ್ಯಗಳ ಸಿಎಂಗಳಿಗೆ ಪತ್ರ ಬರೆದಿದ್ದರು. ಸಂವಿಧಾನ 106 ಬಾರಿ ತಿದ್ದುಪಡಿಯಾಗಿದೆ. ಯಾಕೆ ತಿದ್ದುಪಡಿ ಮಾಡಲಾಗಿದೆ ಎಂದು ಕಂಡುಕೊಳ್ಳಿ. 75 ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ತಿದ್ದುಪಡಿಯಾಗಿದೆ, 31ಬಾರಿ ಇತರೆ ಪಕ್ಷಗಳು ಇದ್ದಾಗ ಹಾಗೂ 22 ಬಾರಿ ಬಿಜೆಪಿ ಸರ್ಕಾರವಿದ್ದಾಗ ತಿದ್ದುಪಡಿ ಮಾಡಲಾಗಿದೆ. ಯಾರೆಲ್ಲ ಯಾಕೆ ತಿದ್ದುಪಡಿ ಮಾಡಿದರು?. ನೆಹರು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಮೊಟ್ಟ ಮೊದಲು ಸಂವಿಧಾನ ತಿದ್ದುಪಡಿ ಮಾಡಲಾಯಿತು. ಇಂದಿರಾ ಕಾಲದಲ್ಲಿ ಸಂವಿಧಾನಕ್ಕೆ 38ನೇ ತಿದ್ದುಪಡಿ ತಂದರು. ರಾಷ್ಟ್ರಪತಿಗಳ ನಿರ್ಧಾರ ಯಾವುದೇ ನ್ಯಾಯಾಲಯ ಪ್ರಶ್ನೆ ಮಾಡಬಾರದು ಎಂದು ತಿದ್ದುಪಡಿ ಮಾಡಿದರು. 40 ನೇ ತಿದ್ದುಪಡಿ ತಂದು ಮಾಧ್ಯಮಗಳಿಗೆ ನಿರ್ಬಂಧ ಹೇರಿದರು ಎಂದು ವಾಗ್ದಾಳಿ ನಡೆಸಿದರು. ನಂತರ ನ್ಯಾಯಾಂಗದ ಅಧಿಕಾರ ಮೊಟಕುಗೊಳಿಸಲು 42ನೇ ತಿದ್ದುಪಡಿ ಜಾರಿ ಮಾಡಿದರು. ಇವರು ತಮ್ಮ ಕುರ್ಚಿ ಉಳಿಸೋಕೆ ತಿದ್ದುಪಡಿ ಮಾಡಿದರು. ಇಂಡಿಯಾ ಇಸ್ ಇಂದಿರಾ ಎಂದು ಹೊಗಳು ಭಟ್ಟರಿದ್ದರು. ಇಗ ಇಂದಿರಾ ಇಲ್ಲ, ಇಂಡಿಯಾ ಇದೆ. ಸರ್ವಾಧಿಕಾರಿ ಇಂದಿರಾ ಗಾಂಧಿ ಪಕ್ಷ 1975 ರಲ್ಲಿ ಸೋತು ಹೋಯ್ತು. ಹಾಗಾಗಿ ಸಂವಿಧಾನ ಉಳಿಯಿತು. ವಾಜಪೇಯಿ ಹಾಗೂ ಮೋದಿ 356ನೇ ವಿಧಿ ಬಳಸಿ ಯಾವುದೇ ಸರ್ಕಾರ ಮೊಟಕುಗೊಳಿಸಿಲ್ಲ, 27 ರಾಜ್ಯ ಸರ್ಕಾರಗಳನ್ನು ಕಿತ್ತು ಹಾಕಿದ ಕೀರ್ತಿ ಇಂದಿರಾಗಿದೆ. ನರಸಿಂಹರಾವ್ ಪಿಎಂ ಆಗಿದ್ದಾಗ 4 ರಾಜ್ಯ ಸರ್ಕಾರಗಳನ್ನು ಕಿತ್ತು ಹಾಕಿದರು. ವಾಜಪೇಯಿ ಅವರು ಮೀಸಲಾತಿ ವಿಸ್ತರಿಸಲು, ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ತಿದ್ದುಪಡಿ ಮಾಡಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಅವಧಿಯಲ್ಲಾದ ಸಂವಿಧಾನ ತಿದ್ದುಪಡಿ ಮಾಡಿರೋ ಕುರಿತು ವಿಸೃತವಾಗಿ ಅವರು ವಿವರಿಸಿದರು.

ಮಾಜಿ ಸಚಿವ ಎನ್.ಮಹೇಶ, ಲೇಖಕ ವಿಕಾಸಕುಮಾರ.ಪಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಜಿ.ಬಿರಾದಾರ, ನಾಗೂರ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಬಿ.ನಾಗೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕೋಟ್‌

ಸಮಗ್ರ ಭಾರತಕ್ಕೆ ಸಂವಿಧಾನ ಅನುಷ್ಠಾನ ಮಾಡಿದ್ದೇ ಅಂಬೇಡ್ಕರ. ಮೀಸಲಾತಿ ಅಭಿವೃದ್ಧಿಗೆ ಮಾರಕ ಎಂದು ಪ್ರಧಾನಿಯಾಗಿದ್ದ‌ ವೇಳೆ ನೆಹರು ಎಲ್ಲ ರಾಜ್ಯಗಳ ಸಿಎಂಗಳಿಗೆ ಪತ್ರ ಬರೆದಿದ್ದರು. ಸಂವಿಧಾನ 106 ಬಾರಿ ತಿದ್ದುಪಡಿಯಾಗಿದೆ, ಯಾಕೆ ತಿದ್ದುಪಡಿ ಮಾಡಲಾಗಿದೆ ಎಂದು ಕಂಡುಕೊಳ್ಳಿ. 75 ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ತಿದ್ದುಪಡಿಯಾಗಿದೆ, 31ಬಾರಿ ಇತರೆ ಪಕ್ಷಗಳು ಇದ್ದಾಗ ಹಾಗೂ 22 ಬಾರಿ ಬಿಜೆಪಿ ಸರ್ಕಾರವಿದ್ದಾಗ ತಿದ್ದುಪಡಿ ಮಾಡಲಾಗಿದೆ.

ಸಿ.ಟಿ.ರವಿ, ಎಂಎಲ್‌ಸಿ