ಸಾರಾಂಶ
- ನಾಳೆಯಿಂದ ಕಲಬುರಗಿ ಜಿಲ್ಲೆ ವಾಡಿಯಿಂದ ಬೈಕ್ ರ‍್ಯಾಲಿ, 1 ಲಕ್ಷ ಕಾರ್ಯಕರ್ತರ ಪಡೆ ಸಜ್ಜುಗೊಳಿಸುವ ಗುರಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಹೊಸ ಕಾರ್ಯಕ್ರಮ, ಚಳವಳಿಗೆ ಆರಂಭಕ್ಕೆ ಜನಜನಿತವಾಗಿರುವ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ರೈತ, ಕಾರ್ಮಿಕ, ಮಹಿಳಾ, ದಲಿತ ಸಂಘಟನೆ ಸೇರಿ ನಾನಾ ಸಂಘಟನೆಗಳನ್ನು ಒಳಗೊಂಡಿರುವ ಎದ್ದೇಳು ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಏ.26ರಂದು ಸಂವಿಧಾನ ಸಂರಕ್ಷಕರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘಟನೆ ಮುಖಂಡ ಕೆ.ಎಲ್.ಅಶೋಕ್ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯವನ್ನು ಉಳಿಸುವುದರಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೂ ಇಚ್ಛಾಶಕ್ತಿ ಇಲ್ಲ. ಅಲ್ಲದೇ, ಯಾವುದೇ ರಾಜಕಾರಣಿ ಸಂವಿಧಾನ ಉಳಿಸುತ್ತಾರೆಂಬ ನಂಬಿಕೆ ಇಲ್ಲ. ಸಂವಿಧಾನ ಮತ್ತು ಪ್ರಜಾತಂತ್ರದಲ್ಲಿ ನಂಬಿಕೆ ಇರುವವರಿಂದ ಮಾತ್ರ ಅವು ಉಳಿಸಲು ಸಾಧ್ಯ. ಹಾಗಾಗಿ, ಜ.26 ರಿಂದ ಪ್ರತಿ ಊರು, ಕೇರಿ, ಹಾಡಿ ಮತ್ತು ಬೀದಿಗಳಲ್ಲಿ `ಸಂವಿಧಾನ ಸಂರಕ್ಷಕರ ಪಡೆ'''''''' ಹೆಸರಿನಲ್ಲಿ ದೇಶಪ್ರೇಮಿ ತಂಡ ಕಟ್ಟುವ ಪ್ರಕ್ರಿಯೆಗೆ ಅಲ್ಲಲ್ಲಿ ಚಾಲನೆ ನೀಡಲಾಗಿದೆ ಎಂದರು.ಮುಂದಿನ ವರ್ಷಗಳಲ್ಲಿ 1 ಲಕ್ಷ ಕಾರ್ಯಕರ್ತರ ಪಡೆ ಸಜ್ಜುಗೊಳಿಸುವ ಗುರಿ ಹೊಂದಲಾಗಿದೆ. ಈ ಪ್ರಕ್ರಿಯೆಗೆ ರಾಜ್ಯಮಟ್ಟದಲ್ಲಿ ಚಾಲನೆ ನೀಡಲು ದಾವಣಗೆರೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಏ.26ರಂದು ಸಂವಿಧಾನ ಸಂರಕ್ಷಕರ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಅಂದು ಕಾರ್ಯಕ್ರಮ ಮುನ್ನ ಬೆಳಗ್ಗೆ 10 ಗಂಟೆಯಿಂದ ಬೀರಲಿಂಗೇಶ್ವರ ಮೈದಾನದಿಂದ ಪ್ರಾರಂಭವಾಗುವ ಮೆರವಣಿಗೆ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಗಾಂಧಿ ವೃತ್ತ, ಮಹಾನಗರ ಪಾಲಿಕೆ ರಸ್ತೆ ಮೂಲಕ ಬೀರಲಿಂಗೇಶ್ವರ ಮೈದಾನ ತಲುಪಲಿದೆ ಎಂದರು.ಸಮಾವೇಶ ಹಿನ್ನೆಲೆಯಲ್ಲಿ ಏ.15ರ ಸೋಮವಾರ ಕಲಬುರಗಿ ಜಿಲ್ಲೆಯ ವಾಡಿಯಿಂದ ವಿದ್ಯಾರ್ಥಿಗಳು, ಯುವಜನರ ಬೈಕ್ ರ‍್ಯಾಲಿ ಪ್ರಾರಂಭವಾಗಲಿದೆ. 20 ಜಿಲ್ಲೆಗಳಲ್ಲಿ ರ್ಯಾಲಿ ಸಂಚರಿಸಿ ಏ.25ರ ಸಂಜೆ ದಾವಣಗೆರೆ ತಲುಪಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ಅನೀಸ್ ಪಾಷ, ಡಿ.ತಿಪ್ಪಣ್ಣ ಕತ್ತಲಗೆರೆ, ಹೊನ್ನೂರು ಮುನಿಯಪ್ಪ, ಬುಳ್ಳಾಪುರ ಹನುಮಂತಪ್ಪ, ಪವಿತ್ರ, ಜಬೀನಾ ಖಾನಂ, ಸೈಯ್ಯದ್ ಇಸ್ಮಾಯಿಲ್ ದೊಡ್ಡಮನಿ, ಸತೀಶ್ ಅರವಿಂದ್, ನಿಜಾಮುದ್ದೀನ್, ಎಂ.ಕರಿಬಸಪ್ಪ, ಕುಂದುವಾಡ ಮಂಜುನಾಥ್ ಮತ್ತಿತರರಿದ್ದರು.- - -
(ಬಾಕ್ಸ್) * ಯಾರ್ಯಾರು ಬರ್ತಾರೆ?ಅಂದು ಮಧ್ಯಾಹ್ನ ನಡೆಯುವ ಸಮಾವೇಶದಲ್ಲಿ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಶಾಸಕ ಜಿಗ್ನೇಶ್ ಮೆವಾನಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್, ನಟ ಪ್ರಕಾಶ್ ರೈ, ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಸಂಸದ ಸಸಿಕಾಂತ್ ಶೆಂಥಿಲ್ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ 31 ಜಿಲ್ಲೆಗಳಿಂದ ಸಂವಿಧಾನದ ಬಗ್ಗೆ ಬದ್ಧತೆ ಮತ್ತು ಕಾಳಜಿ ಇರುವ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
- - --13ಕೆಡಿವಿಜಿ32.ಜೆಪಿಜಿ:
ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ಆಯೋಜಿಸಿರುವ ಕುರಿತು ಮುಖಂಡ ಕೆ.ಎಲ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.