ಸಾರಾಂಶ
ಸಮಾಜವನ್ನು ಒಂದು ಧರ್ಮದ ಮೇಲೆ ಕಟ್ಟಲು ನಮ್ಮ ಸಂವಿಧಾನ ಹೇಳಿಲ್ಲ. ಹೀಗಾಗಿ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು ಹಾಗೂ ಅಸಮಾನತೆ ತೊಡೆದು ಹಾಕಿ ಸಮ ಸಮಾಜ ನಿರ್ಮಾಣ ಮಾಡಬೇಕಿರುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ’ ಎಂದು ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಬೆಂಗಳೂರು : ‘ದೇಶ ಹಾಗೂ ಸಮಾಜವನ್ನು ಯಾವುದೇ ಒಂದು ಧರ್ಮದ ಮೇಲೆ ಕಟ್ಟಲು ನಮ್ಮ ಸಂವಿಧಾನ ಹೇಳಿಲ್ಲ. ಹೀಗಾಗಿ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು ಹಾಗೂ ಅಸಮಾನತೆ ತೊಡೆದು ಹಾಕಿ ಸಮ ಸಮಾಜ ನಿರ್ಮಾಣ ಮಾಡಬೇಕಿರುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ’ ಎಂದು ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಇದೇ ವೇಳೆ ರಾಜಕಾರಣಿಗಳು ಎಲ್ಲರೂ ಸರಿ ಇದ್ದಾರೆ ಎಂದು ಹೇಳುವುದಿಲ್ಲ. ನೀವಾಗಾಲಿ, ನಾವಾಗಲಿ ಯಾರೇ ಮಾಡಿದರೂ ತಪ್ಪೇ. ನಮ್ಮ ತಪ್ಪುಗಳನ್ನು ಪತ್ರಕರ್ತರು ತೋರಿಸುವ ಕೆಲಸ ಮಾಡುತ್ತಾರೆ. ನ್ಯಾಯಾಂಗ ಶಿಕ್ಷೆ ಕೊಡುವ ಕೆಲಸ ಮಾಡುತ್ತದೆ. ಹೀಗಾಗಿ ಪ್ರಜಾಪ್ರಭುತ್ವದ ಈ ನಾಲ್ಕೂ ಅಂಗಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ ಒಟ್ಟಾಗಿ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ಹೇಳಿದರು.
ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ ವಿಧಾನಸೌಧದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಉದ್ಘಾಟಿಸಿ 2023ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ನೌಕರರ ಬಗ್ಗೆ ಹೆಮ್ಮೆ-ಸಿಎಂ:
ಬಹುತೇಕ ಸರ್ಕಾರಿ ನೌಕರರ ಪ್ರಾಮಾಣಿಕ ಕರ್ತವ್ಯಪ್ರಜ್ಞೆಯಿಂದ ರಾಜ್ಯ ಆರ್ಥಿಕವಾಗಿ ಪ್ರಗತಿ ಸಾಧಿಸಿದೆ. ನಿಮ್ಮ ಕಾರಣದಿಂದ ರಾಜ್ಯ ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ರಾಜ್ಯವಾಗಿದೆ. ನಮ್ಮ ನೌಕರರಲ್ಲಿ ತಪ್ಪು ಮಾಡಿದವರು ಇರಬಹುದು. ಆದರೆ ಬಹುತೇಕ ನೌಕರರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನ ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನೌಕರರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಆದರೂ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳಲು ಸಾಧ್ಯವಿಲ್ಲ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗದ ಹೊರತು ನಮಗೆ ಸಿಕ್ಕಿರುವ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಹೀಗಾಗಿ ಎಲ್ಲರೂ ಒಟ್ಟಾಗಿ ಅಸಮಾನತೆಯನ್ನು ಬೇರು ಸಹಿತ ಕಿತ್ತು ಹಾಕುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸೋಣ ಎಂದರು.ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ವಿಧಾನಸಭೆ ಮುಖ್ಯಸಚೇತಕ ಅಶೋಕ್ ಪಟ್ಟಣ್, ಶಾಸಕರಾದ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಜರಿದ್ದರು.
ಕಚೇರಿಗೆ ಅಲೆಯುವಂತೆ ಜನ ಮಾಡಬೇಡಿ: ಡಿಕೆಶಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಜನರು ಹಾಗೂ ಸರ್ಕಾರದು ದೇವರು ಹಾಗೂ ಭಕ್ತರ ನಡುವಿನ ಸಂಬಂಧ. ಅದೇ ರೀತಿ ಸರ್ಕಾರ ಹಾಗೂ ಜನರ ನಡುವೆ ಸರ್ಕಾರಿ ನೌಕರರು ಅರ್ಚಕರು ಇದ್ದಂತೆ. ನೀವು ಕೆಲಸಕ್ಕಾಗಿ ಜನರನ್ನು ಪದೇ, ಪದೆ ಕಚೇರಿಗೆ ತಿರುಗಿಸುವ ಕೆಲಸ ಮಾಡಬಾರದು. ಕೆಲವರು ಬರೀ ಕೊಕ್ಕೆ ಹಾಕಿ ಜನರನ್ನು ಅಲೆಸುವ ಕೆಲಸ ಮಾಡುತ್ತಾರೆ. ಅವರು ಏನಾದರೂ ತಂದುಕೊಡಬೇಕು ಎಂಬ ಧೋರಣೆ ತೋರುತ್ತಾರೆ. ಇದನ್ನು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ನೀವು(ಕಾರ್ಯಾಂಗ), ನಾವು(ಶಾಸಕಾಂಗ) ತಪ್ಪು ಮಾಡಿದರೆ ನಮ್ಮನ್ನು ತಿದ್ದುವುದು ನ್ಯಾಯಾಂಗ ಹಾಗೂ ಪತ್ರಿಕಾಂಗ. ನಮ್ಮ ತಪ್ಪು ಹೇಳಿದಾಗ ಕೋಪ ಮಾಡಿಕೊಳ್ಳಬಾರದು. ಬದಲಾಗಿ ನಮ್ಮ ತಪ್ಪು ತಿದ್ದಿಕೊಳ್ಳಬೇಕು. ನಾವು ತಪ್ಪು ಮಾಡಿದರೆ ತಾನೆ ಅವರು (ಪತ್ರಕರ್ತರು) ಬರೆಯವುದು. ನಾವು ತಪ್ಪೇ ಮಾಡದಿದ್ದರೆ ಯಾರು ನಮ್ಮ ಬಗ್ಗೆ ಬರೆಯುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ಈ ಹಿಂದೆ ಬೆಂಗಳೂರು ಗ್ರಾಮಾಂತರದ ಜಿಲ್ಲಾಧಿಕಾರಿಯಾಗಿದ್ದ ಪುಟ್ಟರಂಗಪ್ಪ ಅವರು ತಮಗೆ ಚಿತ್ರಮಂದಿರ ಪರವಾನಗಿ ಕೊಡಿಸಿದ್ದನ್ನು ಇದೇ ವೇಳೆ ನೆನೆದರು.
ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ: ಸಿಎಂ
ನೀವು 60 ವರ್ಷವಾದರೆ ವಯೋನಿವೃತ್ತಿ ಆಗುತ್ತೀರಿ. ಆದರೆ ನಮಗೆ (ರಾಜಕಾರಣಿಗಳಿಗೆ) ನಿವೃತ್ತಿ ಎಂಬುದು ಇಲ್ಲ. ಆರೋಗ್ಯ ಸರಿ ಇಲ್ಲದಿದ್ದರೆ ನಿವೃತ್ತಿ ಆಗಬಹುದು ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸರ್ಕಾರಿ ನೌಕರರಿಗೆ ಸಿಎಂ ಪಾಠ
ಸರ್ಕಾರಿ ನೌಕರರ ದಿನಾಚರಣೆ ಏ.21 ರಂದು ಯಾಕೆ ಆಚರಿಸುತ್ತಾರೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾರೊಬ್ಬರೂ ಉತ್ತರ ನೀಡಲಿಲ್ಲ. ಹೀಗಾಗಿ ಪಾಠ ಮಾಡಿದ ಸಿದ್ದರಾಮಯ್ಯ, ‘ಹಿಂದೆ ಐಸಿಎಸ್ ಎಂಬುದು ಇತ್ತು. ಅದು ಐಎಎಸ್ ಎಂದು ಬದಲಾಯಿತು. ಸರ್ದಾರ್ ವಲ್ಲಭಾಬಾಯಿ ಪಟೇಲ್ ಅವರು ಮೊದಲ ಐಎಎಸ್ ಬ್ಯಾಚ್ ಉದ್ದೇಶಿಸಿ ಭಾಷಣ ಮಾಡಿದ್ದರು. ಅದೇ ದಿನವನ್ನು ಸರ್ಕಾರಿ ನೌಕರರ ದಿನಾಚರಣೆ ಎಂದು ಆಚರಣೆ ಮಾಡುತ್ತಾರೆ’ ಎಂದರು.
;Resize=(128,128))
;Resize=(128,128))
;Resize=(128,128))