ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಅತ್ಯಂತ ಮಹತ್ವವನ್ನು ನೀಡಿದವರು. ಶಿಕ್ಷಣ ಎಂದರೆ ನಾವು ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಅವರು ದೇಶದಲ್ಲಿದ್ದ ಮೌಢ್ಯ, ಜಾತಿ ಪದ್ಧತಿ ಅಸ್ಪೃಶ್ಯತೆ ಹಾಗೂ ಅಸಮಾನತೆ ಅಂಧಕಾರವನ್ನು ಹೋಗಲಾಡಿಸಿ ಸಮಾನತೆಯನ್ನು ರೂಪಿಸಲು ಶ್ರಮಿಸಿದರು. ಅಂಬೇಡ್ಕರ್ ದೇಶದ ಸಂವಿಧಾನವನ್ನು ರಚಿಸುವ ಮೂಲಕ ದೇಶದಲ್ಲಿ ಸಮಾನತೆ ಮತ್ತು ಅಭಿವೃದ್ಧಿಗಾಗಿ ಭದ್ರ ಬುನಾದಿಯನ್ನು ಹಾಕಿದರು ಎಂದು ರಂಗತಜ್ಞ ಡಾ.ಶ್ರೀಪಾದ್ ಭಟ್ ಹೇಳಿದರು.

ಉಡುಪಿ : ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಅತ್ಯಂತ ಮಹತ್ವವನ್ನು ನೀಡಿದವರು. ಶಿಕ್ಷಣ ಎಂದರೆ ನಾವು ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಅವರು ದೇಶದಲ್ಲಿದ್ದ ಮೌಢ್ಯ, ಜಾತಿ ಪದ್ಧತಿ ಅಸ್ಪೃಶ್ಯತೆ ಹಾಗೂ ಅಸಮಾನತೆ ಅಂಧಕಾರವನ್ನು ಹೋಗಲಾಡಿಸಿ ಸಮಾನತೆಯನ್ನು ರೂಪಿಸಲು ಶ್ರಮಿಸಿದರು. ಅಂಬೇಡ್ಕರ್ ದೇಶದ ಸಂವಿಧಾನವನ್ನು ರಚಿಸುವ ಮೂಲಕ ದೇಶದಲ್ಲಿ ಸಮಾನತೆ ಮತ್ತು ಅಭಿವೃದ್ಧಿಗಾಗಿ ಭದ್ರ ಬುನಾದಿಯನ್ನು ಹಾಕಿದರು ಎಂದು ರಂಗತಜ್ಞ ಡಾ.ಶ್ರೀಪಾದ್ ಭಟ್ ಹೇಳಿದರು.ಅವರು ಇಲ್ಲಿನ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅನೇಕ ತಾರತಮ್ಯಗಳನ್ನು ಎದುರಿಸಿದ್ದರೂ ಸಹ ತಮ್ಮ ಛಲದಿಂದಾಗಿ ಶಿಕ್ಷಣವನ್ನು ಪಡೆದು, ಆ ಮೂಲಕ ದೇಶದಲ್ಲಿ ಅನೇಕ ಬದಲಾವಣೆಯನ್ನು ತಂದರು. ನೊಂದವರಿಗೆ ಬೆಳಕಾದ ಅಂಬೇಡ್ಕರ್ ಅವರ ಬದುಕು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಮೀದಾ ಬಾನು, ದೇಶದ ಅಭಿವೃದ್ಧಿಗಾಗಿ ಅಪಾರ ಕೊಡುಗೆಯನ್ನು ನೀಡಿದ ಅಂಬೇಡ್ಕರ್ ಹಾಗೂ ಸಂವಿಧಾನದ ಕುರಿತು ವಿದ್ಯಾರ್ಥಿಗಳು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಯಕ್ರಮ ಸಂಚಾಲಕಿ ರತ್ನಮಾಲ ನಿರೂಪಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಮಾರುತಿ ವಂದಿಸಿದರು.