ಆರ್ಥಿಕ ಅಭಿವೃದ್ಧಿಗೆ ಸಂವಿಧಾನ ಆಶಯವೇ ಮೂಲ ಮಂತ್ರ

| Published : Jul 08 2024, 12:30 AM IST

ಆರ್ಥಿಕ ಅಭಿವೃದ್ಧಿಗೆ ಸಂವಿಧಾನ ಆಶಯವೇ ಮೂಲ ಮಂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಂವಿಧಾನ ಕಳೆದ ೭೫ ವರ್ಷದಿಂದ ದೇಶದ ಸರ್ವರ ಬೇಕು ಬೇಡಿಕೆಗಳನ್ನು ಪೂರೈಸಿದೆ

ಗದಗ: ದೇಶದ ಆರ್ಥಿಕ ಅಭಿವೃದ್ಧಿಗೆ ಸಂವಿಧಾನದ ಆಶಯವೇ ಮೂಲ ಮಂತ್ರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಅವರು ಸಮೀಪದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಆರ್‌ಡಿಪಿಆರ್‌ ವಿವಿ, ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪ್ರಚಾರ ಅಭಿಯಾನ, ಸಂವಿಧಾನ ಓದು, ವನಮಹೋತ್ಸವ ಹಾಗೂ ಪ್ರವಾಸಿ ಮಾರ್ಗದರ್ಶಿಗಳ ತರಬೇತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಸಂವಿಧಾನ ಕಳೆದ ೭೫ ವರ್ಷದಿಂದ ದೇಶದ ಸರ್ವರ ಬೇಕು ಬೇಡಿಕೆಗಳನ್ನು ಪೂರೈಸಿದೆ. ಆದರಿಂದಲೇ ಸಂವಿಧಾನ ನಮ್ಮ ಹೆಮ್ಮೆ ಎನ್ನುತ್ತೇವೆ. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ನೀಡುವದು ಅಸಾಧ್ಯ ಎಂದು ವಿದೇಶಿಗರು ಹೇಳಿದ್ದರು. ನಮ್ಮ‌ ದೇಶದ ಜನರನ್ನು, ಮುಖಂಡರನ್ನು ಲಘುವಾಗಿ ಕಾಣುತ್ತಿದ್ದರು. ಆದರೇ ನಾವುಗಳು ನಮ್ಮ‌ ಸಂವಿಧಾನ ಸಾಮರ್ಥ್ಯ ಏನೆಂದು ಈಗ ಜಗತ್ತಿಗೆ ತೋರಿಸಿದ್ದೇವೆ. ಹಲವು ರಾಷ್ಟ್ರಗಳಿಗೆ ನಮ್ಮ ದೇಶ ಮಾದರಿಯಾಗಿದೆ. ನಮ್ಮ‌ ದೇಶದ ಅಭಿವೃದ್ಧಿ ಗುರಿ ನೋಡಿ ನಿಬ್ಬೇರಗಾಗಿ ನೋಡುತ್ತಿದ್ದಾರೆ ಎಂದರು.

ಅನ್ಯ ದೇಶಗಳ ಆರ್ಥಿಕ ವ್ಯವಸ್ಥೆಗಿಂತ ನಮ್ಮ ದೇಶ ಉನ್ನತ ಸ್ಥಾನದಲ್ಲಿದ್ದೇವೆ. ಇದಕ್ಕೆ ಮೂಲ ಕಾರಣ ನಮ್ಮ ಸಂವಿಧಾನವಾಗಿದೆ. ಇದನ್ನು ನಾವೆಲ್ಲರೂ ಮರೆಯಬಾರದು. ಎಲ್ಲ ಜಾತಿ, ಧರ್ಮ, ಸಮುದಾಯ ಸರ್ವರನ್ನು ಒಳಗೊಂಡ ಶ್ರೇಷ್ಠ ಸಂವಿಧಾನ ಭಾರತದ ಸಂವಿಧಾನವಾಗಿದೆ ಎಂದರು.

ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲ ಜನ್ಮ ಶತಮಾನೊತ್ಸವ ಅಂಗವಾಗಿ ವಿವಿ ಆವರಣದಲ್ಲಿ 1 ಲಕ್ಷ ಗಿಡ‌ ನೇಡುವ ಮೂಲಕ ಅರಣ್ಯ ಮರು ಸೃಷ್ಠಿ ಪ್ರಯತ್ನ ಯಶಸ್ವಿಯಾಗಲಿ ಎಂದರು.

ಜಿಲ್ಲೆಯಲ್ಲಿ ಶೇ. ೩೩ ರಷ್ಟು ಅರಣ್ಯ ಆಗಬೇಕು. ಆ ದಿಸೆಯಲ್ಲಿ ಇಲಾಖೆ ಕಾರ್ಯ ಪ್ರವೃತ್ತವಾಗಲಿ. ಇದು ಪಂಚವಾರ್ಷಿಕ ಯೋಜನೆ ಆಗದೇ ಶೀಘ್ರವಾಗಿ ಪೂರ್ಣಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಸಿ ಮಿತ್ರರು ನಮ್ಮ ದೇಶದ ಇತಿಹಾಸ, ಮಹತ್ವ ಸಾರುವವರಾಗಿದ್ದಾರೆ. ಅವರು ವಿದೇಶಿಗಳಿಗೆ ನಮ್ಮ ಆಚಾರ ವಿಚಾರ, ಇತಿಹಾಸ ಸಂಸ್ಕೃತಿಗಳ ಪ್ರಚಾರಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ರವಾಸಿ ಮಿತ್ರರಿಗೆ ಸಮವಸ್ತ್ರ ವಿತರಿಸುವ ಬಗ್ಗೆ ಹಾಗೂ ಪ್ರವಾಸಿ ಮಿತ್ರರಿಗೆ ಗುರುತಿನ ಚೀಟಿ ನವೀಕರಣ ಜಿಲ್ಲಾಧಿಕಾರಿಗಳ ಹಂತದಲ್ಲಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ ಮಾತನಾಡಿ, ಭಾರತೀಯ ಸಂವಿಧಾನ ವಿಸ್ತಾರವಾಗಿದೆ.ಈ ಸಂವಿಧಾನ ಅನ್ಯ ದೇಶದ ಸಂವಿಧಾನದ ಕಾಫಿ ಅಲ್ಲ. ನಮ್ಮದೇ ಸ್ವಂತ ಸಂವಿಧಾನ ಇದಾಗಿದೆ. ಇದನ್ನು ನಮಗೆ ನಾವೇ ಅಳವಡಿಸಿಕೊಂಡು 78 ವರ್ಷ ಗತಿಸಿದೆ.ಇದುವೇ ನಮ್ಮ ಶ್ರೇಷ್ಠ ಸಂವಿಧಾನ ಎಂದು ಹೆಮ್ಮೆಯಿಂದ ಹೇಳಿದರು.

ವಿವಿ ಪ್ರಭಾರಿ ಕುಲಪತಿ ಪ್ರೋ. ಸುರೇಶ ನಾಡಗೌಡರ ಮಾತನಾಡಿ, ದೇಶದಲ್ಲಿ ಯಾವುದೇ ಕಾನೂನು ರಚಿಸಿದರು ಅದು ಸಂವಿಧಾನದ ಆಶಯವಾಗಿ ಇರಬೇಕು. ಸಂವಿಧಾನ ನಮ್ಮೆಲ್ಲರಿಗು ಸಮಾನತೆ, ಮಾತನಾಡುವ ಸ್ವಾತಂತ್ರ್ಯ ನೀಡಿದೆ ಎಂದರು.

ಕಾನೂನು ಸಚಿವ ಎಚ್.ಕೆ.ಪಾಟೀಲ ಗ್ರಾಮ ನ್ಯಾಯಾಲಯ ಪರಿಕಲ್ಪನೆಯನ್ನು ಸಂಪುಟ ಸಭೆಯಲ್ಲಿ ಅನುಮೋದನೆ ಮಾಡಿಸಿದ್ದಾರೆ. ಮುಂದಿನ ದಿನಮಾನಗಳಲ್ಲಿ ಎಲ್ಲರಿಗೂ ಸಮಾನತೆ ಸಾಮಾಜಿಕ ನ್ಯಾಯ ದೊರೆಯಲಿದೆ ಎಂದರು.

ಜಾನಪದ ವಿವಿ ಕುಲಪತಿ ಟಿ.ಎಂ. ಬಾಸ್ಕರ್ ಮಾತನಾಡಿ, ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಆರ್ಥಿಕ ಸಾಮಾಜಿಕ ರಾಜಕೀಯ ಸಮಾನತೆ ನೀಡಿದೆ, ಸಂವಿಧಾನದ ಕಾರ್ಯಾಂಗ,ನ್ಯಾಯಾಂಗ, ಶಾಸಕಾಂಗ ಸೇರಿದಂತೆ ಪತ್ರಿಕಾಂಗ ಸಮರ್ಥವಾಗಿ ಕಾರ್ಯನಿರ್ವಹಿಸಿ ದೇಶದ ಸ್ಥಿರ ಅಭಿವೃದ್ಧಿಗೆ ಸಹಕಾರವಾಗಿವೆ. ಸಾರ್ವಜನಿಕರು ಪೂರ್ವಾ ಪೀಡಿತ ಆಲೋಚನೆಗಳಿಂದ ದೂರ ಸರಿದು ದೂರ ದೃಷ್ಟಿಯ ಆಲೋಚನೆ ಪ್ರಾರಂಭಿಸಿ, ದೇಶದ ವಿಜ್ಞಾನ ತಂತ್ರಜ್ಞಾನ ಶೈಕ್ಷಣಿಕ, ಆರ್ಥಿಕವಾಗಿ ಸಬಲವಾಗಬೇಕು ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಓದಿ ತಿಳಿದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಾನಪದ ವಿವಿ ಕುಲಸಚಿವ ಪ್ರೋ.ಸಿ.ಟಿ.ಗುರುಪ್ರಸಾದ್, ಪ್ರಶಾಂತ.ಜೆ.ಸಿ, ಪ್ರವಾಸಿ ಮಿತ್ರರು ಸೇರಿದಂತೆ ಹಲವರು ಇದ್ದರು. ಪ್ರೋ.‌ ಅಬ್ದುಲ್ ಅಜೀಜ್ ಮುಲ್ಲಾ ಪ್ರಾಸ್ತಾವಿಕ ಮಾತನಾಡಿದರು.