ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಭಾರತದಲ್ಲಿದ್ದ ಬಹುತೇಕ ಸಾಮಾಜಿಕ ಕಾಯಿಲೆಗಳಿಗೆ ಸಂವಿಧಾನವೆಂಬ ಒಂದೇ ಔಷಧಿಯನ್ನು ಕೊಟ್ಟವರು ಡಾ.ಬಿ.ಆರ್. ಅಂಬೇಡ್ಕರ್ ಅವರು ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಹೇಳಿದರು. ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು ಅವರ 68ನೇ ಜನ್ಮದಿನ ನೆನಪಿನಾರ್ಥವಾಗಿ ಗುರುನಮನ ಸಮಿತಿ ಹಾಗೂ ಮೈಸೂರು ವಿವಿ ಸಂಶೋಧಕರ ಸಂಘದ ಸಹಯೋಗದಲ್ಲಿ ಭಾರತೀಯ ಸಂವಿಧಾನ ವಿಶಿಷ್ಟತೆ ಮತ್ತು ಮುಂದಿನ ಸವಾಲುಗಳ ಕುರಿತು ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಬದುಕನ್ನು ಧಾರವಾಹಿಗಳ ಮೂಲಕ ಸಾಮಾನ್ಯರಿಗೆ ತಲುಪಿಸಲಾಗುತ್ತಿದೆ, ಆದರೆ ಸಂವಿಧಾನ ಪ್ರತಿ ಮನೆಗೂ ತಲುಪಬೇಕು. ಡಾ.ಬಿ.ಆರ್. ಅಂಬೇಡ್ಕರ್ ಕೇವಲ ಬೇರೆ ದೇಶಗಳ ಸಂವಿಧಾನಗಳನ್ನು ಮಾತ್ರ ಓದಿಕೊಂಡು ಸಂವಿಧಾನ ರಚನೆ ಮಾಡಿಲ್ಲ ಜೊತೆಗೆ ಭಾರತದ ಎಲ್ಲ ವರ್ಗದ ಜನರ ಮನಸ್ಥಿತಿ ಅರಿತು ಸಂವಿಧಾನ ರಚಿಸಿದ್ದಾರೆ ಎಂದು ಅವರು ತಿಳಿಸಿದರು. ಮುಖ್ಯಅತಿಥಿಗಳಾಗಿದ್ದ ಜಾನಬುತ್ತಿ ಸಂಸ್ಥೆಯ ಜೈನಳ್ಳಿ ಸತ್ಯನಾರಾಯಣ ಗೌಡ, ಡಾ.ಎಂ. ದಿಲೀಪ್ ನರಸಯ್ಯ ಮಾತನಾಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾಗಿ ಬಹುಮಾನ ಗಳಿಸಿದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪ್ರತಿಮಾ - ಪ್ರಥಮ, ಜೆಎಸ್ಎಸ್ ವಿಜ್ಞಾನ ಕಲಾ ಹಾಗೂ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ನಿತಿನ್ -ದ್ವಿತೀಯ. ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿನಿ ಸುಜನ -ತೃತೀಯ ಬಹುಮಾನ ಪಡೆದರು. ಅಧ್ಯಕ್ಷತೆಯನ್ನು ಜಯಶ್ರೀ ಜಗದೀಶ್ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಪ್ರೊ. ಗುರು ಅವರ ಧರ್ಮಪತ್ನಿ ಡಾ.ಸಿ. ಹೇಮಾವತಿ, ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಕಾರ್ಯಕ್ರಮ ಸಂಯೋಜಕ ಬಿ.ಸಿ. ಸಂಜಯ್ ಭಾಗವಹಿಸಿದ್ದರು.