ಸುದೀರ್ಘಕಾಲದ ಪರಕೀಯರ ಆಳ್ವಿಕೆ, ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯ ಗಳಿಸಿದ ಸಂದರ್ಭಗಳಲ್ಲಿ ನಮ್ಮ ದೇಶ ಬಡತನ, ಹಸಿವು, ಅನಾರೋಗ್ಯ, ಅಸ್ಪೃಶ್ಯತೆ ಅಸಮಾನತೆ ಮತ್ತು ತಾರತಮ್ಯಗಳಲ್ಲಿ ಮುಳುಗಿಹೋಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶತಮಾನಗಳ ಕಾಲ ಪರಕೀಯರ ಆಕ್ರಮಣ ಹಾಗೂ ತಾರತಮ್ಯದಲ್ಲಿದ್ದ ಭಾರತವು ಇಂದು ಜಗತ್ತಿನಲ್ಲಿ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುಲು ನಮ್ಮ ಸಂವಿಧಾನ ಪ್ರೇರಣೆಯಾಗಿದೆ ಹಾಗೂ ದಾರಿದೀಪವಾಗಿದೆ ಎಂದು ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಕೋಡಿರಂಗಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸುದೀರ್ಘಕಾಲದ ಪರಕೀಯರ ಆಳ್ವಿಕೆ, ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯ ಗಳಿಸಿದ ಸಂದರ್ಭಗಳಲ್ಲಿ ನಮ್ಮ ದೇಶ ಬಡತನ, ಹಸಿವು, ಅನಾರೋಗ್ಯ, ಅಸ್ಪೃಶ್ಯತೆ ಅಸಮಾನತೆ ಮತ್ತು ತಾರತಮ್ಯಗಳಲ್ಲಿ ಮುಳುಗಿಹೋಗಿತ್ತು. ಸಮಾಜ ಸುಧಾರಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಪರಿಶ್ರಮದಿಂದ ದೇಶದ ಜನಜೀವನ ಹಾಗೂ ಚಿಂತನೆಗಳ ಪರಿವರ್ತನೆಗೆ ಪ್ರೇರಣೆಯಾಯಿತು ಎಂದರು. ಸ್ವಾತಂತ್ರ್ಯ ನಂತರ ನಮ್ಮ ಸಂವಿಧಾನವನ್ನು ರಚಿಸಿಕೊಳ್ಳುವ ಜವಾಬ್ದಾರಿ ಹೊತ್ತ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್, ಕರಡು ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಸಮಿತಿಗಳ ಸದಸ್ಯರು ತಮ್ಮ ಅಧ್ಯಯನ ಶೀಲತೆ, ಚಿಂತನೆ, ದೂರದೃಷ್ಟಿ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಶ್ರೀಸಾಮಾನ್ಯರ ಬಗೆಗಿನ ಕಾಳಜಿಯಿಂದ ರಚಿಸಿರುವ ಸಂವಿಧಾನವು ಭಾರತ ಪ್ರಜೆಗಳಾದ ನಾವು ಎಂಬ ಭಾವದಿಂದ ಆರಂಭವಾಗಿ ಜನತೆಯ ಕಲ್ಯಾಣದೊಂದಿಗೆ ದೇಶದ ಉನ್ನತಿ ಮತ್ತು ಭಾವೈಕ್ಯತೆಯನ್ನು ಕಲ್ಪಿಸಿಕೊಡುವ ದೊಡ್ಡ ಸಂಪನ್ಮೂಲ ಹಾಗೂ ತಳಹದಿಯಾಗಿದೆ.

ವ್ಯಕ್ತಿ ಗೌರವ ಹಾಗೂ ರಾಷ್ಟ್ರೀಯ ಭಾವೈಕ್ಯತೆಗೆ ಆದ್ಯತೆ ನೀಡುತ್ತಾ ಸ್ವಾತಂತ್ರ್ಯ, ಸಮಾನತೆ, ಸಮತೆ, ಸಾಮಾಜಿಕ ನ್ಯಾಯ, ಹಕ್ಕು ಬಾಧ್ಯತೆಗಳು ನೊಂದವರನ್ನು ಸಶಕ್ತ ಗೊಳಿಸುವುದು ಮುಂತಾಗಿ ದೇಶವನ್ನು ಸುಭದ್ರಗೊಳಿಸಿ ಸಾಮರಸ್ಯದ ಬದುಕನ್ನು ಕಲ್ಪಿಸಿಕೊಡುವ ಆಶಯ ಹೊಂದಿದೆ. ಮಾನವ ಘನತೆ ಮತ್ತು ಭಾವೈಕ್ಯತೆಗೆ ಹೆಚ್ಚು ಒತ್ತು ನೀಡಿರುವ ಸಂವಿಧಾನವು ಸಾಮಾಜಿಕ ನ್ಯಾಯದ ಜೊತೆಗೆ ಸಾಂಸ್ಕೃತಿಕ ಬಹುತ್ವ ಹಾಗೂ ಜಾತ್ಯತೀತ ಆದರ್ಶದೊಂದಿಗೆ ಧಾರ್ಮಿಕ ಸಾಮರ್ಥ್ಯವನ್ನು ಎತ್ತಿ ಹಿಡಿದಿರುವ ಸಂವಿಧಾನ ದಾರಿದೀಪವಾಗಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ಹಾಗೂ ಸಂಸ್ಥೆ ಆಡಳಿತ ವ್ಯವಸ್ಥೆಯು ಸಂವಿಧಾನದ ಮೌಲ್ಯಗಳು ಆಶಯಗಳು ಹಾಗೂ ಸಿದ್ಧಾಂತಗಳನ್ನು ಓದಿ ತಿಳಿದು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಾಂಶುಪಾಲ ಪ್ರಸಾದ್ ಮಾತನಾಡಿ, ಭಾರತಕ್ಕೆ ಇಂದು ಜಗತ್ತಿನಲ್ಲಿ ದೊಡ್ಡ ಗೌರವ ನಾಯಕತ್ವವು ಲಭ್ಯವಾಗಿರುವುದಕ್ಕೆ ಸಂವಿಧಾನವು ಆಧಾರವಾಗಿದ್ದು ದೇಶದ ಎಲ್ಲಾ ಜನರನ್ನು ಒಳಗೊಳ್ಳುವ ಹಾಗೂ ಎಲ್ಲ ಜನರ ಕಲ್ಯಾಣಕ್ಕೆ ಕಾನೂನಾತ್ಮಕ, ಆಡಳಿತಾತ್ಮಕ ಹಾಗೂ ನೈತಿಕ ಬೆಂಬಲ ನೀಡಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾಂತ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ. ನರೇಶ್ ಕುಮಾರ್, ಶಾಂತ ವಿದ್ಯಾನಿಕೇತನ್ ಪ್ರಾಂಶುಪಾಲರಾದ ವಿಜಯಲಕ್ಷ್ಮಿ, ಬಸವರಾಜ್, ಗೀತಾಂಜಲಿ, ಉಪ ಪ್ರಾಂಶುಪಾಲೆ ಕಲ್ಯಾಣಿ, ಬೋಧಕ ವರ್ಗದವರಾದ ರೇವತಿ, ಪ್ರಸೀತ, ಸಾಯಿ ಕೃಷ್ಣ ಪವನ್, ಪ್ರಾರ್ಥನಾ, ಡಾ. ಬ್ಯೂಟಿ, ರಂಗರಾಜನ್ ವೆಂಕಟೇಶ್, ಶಶಿಧರ್ ಸುಜಯಾ, ರಾಧಾ ಆಡಳಿತಾಧಿಕಾರಿ ಕೆನೇತ್ ಹಾಲಿ ಡೇ, ವಿತ್ತಾಧಿಕಾರಿ ಶರವಣ, ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್, ಸಂದೇಶ್ ಇದ್ದರು. ಸಿಕೆಬಿ-1 ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಡಾ.ಕೋಡಿರಂಗಪ್ಪ ಮಾತನಾಡಿದರು.