ಪ್ರಜಾಪ್ರಭುತ್ವದ ಅಡಿಪಾಯವೇ ಸಂವಿಧಾನ

| Published : Jan 27 2025, 12:46 AM IST

ಸಾರಾಂಶ

1949 ನವೆಂಬರ್ 26 ರಲ್ಲಿ ನಮ್ಮ ಸಂಸತ್ತಿನಲ್ಲಿ ಅಂಗೀಕಾರಗೊಂಡ ಸಂವಿಧಾನವನ್ನು 1950 ಜನವರಿ 26 ರಂದು ಜಾರಿಗೆ ತಂದ ದಿನವಿದು. ಸಂವಿಧಾನ ಜಾರಿಗೆ ಬಂದು 75ನೇ ವರ್ಷವಿದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ನಾವೆಲ್ಲ ನೆನಪಿಸಿಕೊಳ್ಳಲೇಬೇಕಾದ ದಿನ. ಸಂವಿಧಾನವೆ ನಮ್ಮೆಲ್ಲರಿಗೂ ಸರ್ವೋಚ್ಛ ಕಾನೂನು ಇದ್ದಂತೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರೂಪಿತಗೊಂಡ ಸಂವಿಧಾನ ನಮ್ಮದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು. ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸಂವಿಧಾನವೇ ಸರ್ವೋಚ್ಚ

ಸ್ವಾತಂತ್ರ್ಯ ಬಂದಾಗ ನಮ್ಮದೇಶದಲ್ಲಿ 562 ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದ ದೇಶವನ್ನು ಒಂದುಗೂಡಿಸಿ, 1949 ನವೆಂಬರ್ 26 ರಲ್ಲಿ ನಮ್ಮ ಸಂಸತ್ತಿನಲ್ಲಿ ಅಂಗೀಕಾರಗೊಂಡ ಸಂವಿಧಾನವನ್ನು 1950 ಜನವರಿ 26 ರಂದು ಜಾರಿಗೆ ತಂದ ದಿನವಿದು. ಸಂವಿಧಾನ ಜಾರಿಗೆ ಬಂದು 75ನೇ ವರ್ಷವಿದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ನಾವೆಲ್ಲ ನೆನಪಿಸಿಕೊಳ್ಳಲೇಬೇಕಾದ ದಿನ. ಸಂವಿಧಾನವೆ ನಮ್ಮೆಲ್ಲರಿಗೂ ಸರ್ವೋಚ್ಛ ಕಾನೂನು ಎಂದರು.

ನಮ್ಮದು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರೂಪಿತಗೊಂಡ ಸಂವಿಧಾನ ನಮ್ಮದು. ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆಯನ್ನು ನಮ್ಮ ಸಂವಿಧಾನವು ಎತ್ತಿ ಹಿಡಿದಿದೆ. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ ಭ್ರಾತೃತ್ವ ನಮ್ಮ ಸಂವಿಧಾನದ ಮಹತ್ವದ ಮೌಲ್ಯಗಳನ್ನು ಸಾರುತ್ತದೆ ಎಂದು ಹೇಳಿದರು.

ಸೌರವಿದ್ಯುತ್‌ಗೆ ಜಮೀನು

ಜಿಲ್ಲೆಯಲ್ಲಿ ಕುಸುಮ-ಸಿ ಯೋಜನೆಯಡಿ ಸೌರ ವಿದ್ಯುತ್ ಘಟಕಗಳನ್ನು ನಿರ್ಮಾಣ ಮಾಡಲು ಸುಮಾರು 257.34 ಎಕರೆ ಸರ್ಕಾರಿ ಜಮೀನನ್ನು ಕಾಯ್ದಿರಿಸಿ, ಇಂಧನ ಇಲಾಖೆಯ ಹೆಸರಿಗೆ ಹಸ್ತಾಂತರಿಸಲಾಗಿರುತ್ತದೆ. ನೂತನ ಹೊವಿನ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕಾಗಿ 20-00 ಎಕರೆ ಜಮೀನನ್ನು ಕಾಯ್ದಿರಿಸಿ, ಕಾರ್ಯದರ್ಶಿಗಳು, ಕೃಷಿ ಉತ್ಪನ್ನ ಮಾರುಕಟ್ಟೆರವರಿಗೆ ಹಸ್ತಾಂತರಿಸಲಾಗಿರುತ್ತದೆ.ಜಿಲ್ಲಾ ಕೇಂದ್ರದಲ್ಲಿ ಸು. 17.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಕನ್ನಡ ಭವನ (ಜಿಲ್ಲಾ ರಂಗಮಂದಿರ) ನಿರ್ಮಾಣ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಮಾಡಲು ಯೋಜಿಸಲಾಗಿದೆ ಎಂದರು.

ಪಥಸಂಚನದಲ್ಲಿ 17 ತುಕಡಿ

ಸಚಿವರು ಭಾಷಣಕ್ಕೂ ಮುನ್ನ ಪಥಸಂಚನದಲ್ಲಿ ಭಾಗವಹಿಸಲು ಬಂದಿದ್ದ 17 ತುಕಡಿಗಳ ಪರಿವೀಕ್ಷಣೆ ನಡೆಸಿದರು. 17 ತುಕಡಿಗಳು ಪಥಸಂಚನವನ್ನ ಲಯಬದ್ದವಾಗಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದವು. ಪಥಸಂಚನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ತುಕಡಿ, ಜಿಲ್ಲಾ ಮಹಿಳಾ ಪೊಲೀಸ್ ತುಕಡಿ,ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಎನ್.ಸಿ.ಸಿ ತಂಡ, ಭಾರತ ಸೇವಾದಳ, ಪಂಚಗಿರಿ ಬೋಧನಾ ಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕ್ವಾಯಟ್ ಕಾರ್ನರ್ ಪ್ರೌಢಶಾಲೆ, ನ್ಯೂಟನ್ ಗ್ರಾಮರ್ ಪ್ರೌಢಶಾಲೆ, ಸಂತ ಜಾನ್ಸ್ ಪ್ರೌಢಶಾಲೆ, ಇಂಡಿಯನ್ ಪಬ್ಲಿಕ್ ಶಾಲೆ, ಪ್ರಕೃತಿ ಶಾಲೆ ,ಬ್ರೈಟ್ ಪ್ರೌಢಶಾಲೆ ಮತ್ತು ಪೊಲೀಸ್ ಬ್ಯಾಂಡ್ ತಂಡಗಳು ಭಾಗವಹಿಸಿದ್ದವು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್.ಜಿ.ಟಿ.ನಿಟ್ಟಾಲಿ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಲ್ಲ್ ಚೌಕ್ಸೆ, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಕಾಸಿಂ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪ ವಿಭಾಗಾಧಿಕಾರಿ ಅಶ್ವಿನ್ ,ನಗರಸಭೆ ಅಧ್ಯಕ್ಷ ಎ.ಗಜೇಂದ್ರ.ಉಪಾಧ್ಯಕ್ಷ ಜೆ.ನಾಗರಾಜ್,ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ,ನಗರಸಭಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ,ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ,ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ,ಸಾರ್ವಜನಿಕರು ಇದ್ದರು.