ಸಾರಾಂಶ
ಯಲ್ಲಾಪುರ: ಸಂವಿಧಾನವು ಭವ್ಯ ಭಾರತದ ಭದ್ರ ಬುನಾದಿ. ಸಂವಿಧಾನದ ನೆರಳಿನಲ್ಲಿ ಗಣತಂತ್ರ ವ್ಯವಸ್ಥೆಯಲ್ಲಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಮುನ್ನಡೆಯುತ್ತಿದೆ ಎಂದು ತಾಲೂಕು ದಂಡಾಧಿಕಾರಿ ಯಲ್ಲಪ್ಪ ಗೋನೆಣ್ಣವರ್ ತಿಳಿಸಿದರು.ಪಟ್ಟಣದ ಕಾಳಮ್ಮ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ76 ನೆ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜಗತ್ತಿನ ಹಲವು ದೇಶಗಳ ಸರ್ವಶ್ರೇಷ್ಠ ವಿಚಾರಧಾರೆಗಳನ್ನು ಅಳವಡಿಸಿಕೊಂಡ ಸಂವಿಧಾನ ನಮ್ಮ ದೇಶದ್ದಾಗಿದೆ. ಇಂತಹ ಶ್ರೇಷ್ಠ ಭಾರತದ ಹೆಮ್ಮೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಪಟ್ಟಣದ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡು ಗೌರವವಂದನೆ ಸಲ್ಲಿಸಿದರು. ನಂತರ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ್, ಉಪಾಧ್ಯಕ್ಷ ಅಮಿತ್ ಅಂಗಡಿ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂಜೀವ್ ಹೊಸ್ಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಪಿಎಸ್ಐ ಸಿದ್ದು ಗುಡಿ, ನಸ್ರಿನ್ ತಾಜ್, ಪಪಂ ಮುಖ್ಯಾಧಿಕಾರಿ ಸುನಿಲ್ ಗಾವಡೆ, ಪಪಂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಜವಾಬ್ದಾರಿ ಅರಿತರೆ ಪ್ರಜಾಪ್ರಭುತ್ವ ಯಶಸ್ವಿಕುಮಟಾ: ದೇಶ ಕಾಪಾಡುವುದು ಗಡಿಯಲ್ಲಿದ್ದ ಸೈನಿಕರ ಕೆಲಸ ಮಾತ್ರವಲ್ಲದೆ ಈ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರತಿಯೊಬ್ಬರೂ ಅವರವರ ಜವಾಬ್ದಾರಿ ಅರಿತು ನಡೆದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ರಮೇಶ ಪ್ರಭು ತಿಳಿಸಿದರು.ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ೭೬ನೇ ಗಣರಾಜ್ಯೋತ್ಸವ ಉದ್ದೇಶಿಸಿ ಮಾತನಾಡಿದರು.
ಧ್ವಜಾರೋಹಣ ನೆರವೇರಿಸಿದ ಸಂಸ್ಥೆಯ ಅಧ್ಯಕ್ಷ ವಿಠ್ಠಲ ಆರ್. ನಾಯಕ, ದೇಶದ ಪ್ರತಿ ಪ್ರಜೆಯೂ ಸಂವಿಧಾನವನ್ನು ಅರ್ಥೈಸಿಕೊಂಡು ಅದರ ಪರಿಧಿಯಲ್ಲಿ ತಮ್ಮ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಪ್ರಾಮಾಣಿಕವಾಗಿ ಉಪಯೋಗಿಸಿಕೊಂಡು ಕರ್ತವ್ಯ ಮಾಡಿದರೆ ಮಾತ್ರ ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ಸಾಧ್ಯ. ನಾವು ಪ್ರತಿಯೊಂದು ಸಂಗತಿಗಳನ್ನು, ವಸ್ತುಗಳನ್ನು ಪ್ರೀತಿಸಿ, ಕಾಳಜಿಯಿಂದ ಸಂರಕ್ಷಿಸಬೇಕು. ಎಲ್ಲರೂ ಶಿಸ್ತು, ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಹಕ್ಕುಗಳ ಚಿಂತನೆಗಿಂತ ಕರ್ತವ್ಯದ ಚಿಂತನೆಗಳನ್ನು ಮಾಡಬೇಕು ಎಂದರು.ಟ್ರಸ್ಟಿ ರಾಮಕೃಷ್ಣ ಗೋಳಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ವಿಧಾತ್ರಿಯ ಗುರುರಾಜ ಶೆಟ್ಟಿ, ಅಂಗ ಸಂಸ್ಥೆಯ ಮುಖ್ಯಸ್ಥರು ಇದ್ದರು.
ಗಣರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಿಂಚನಾ ಸಂಗಡಿಗರು ರಾಷ್ಟ್ರಗೀತೆ, ರೈತಗೀತೆ, ವಂದೇ ಮಾತರಂ ಗೀತೆ ಪ್ರಸ್ತುತಪಡಿಸಿದರು. ಶಿಕ್ಷಕ ಗೌರೀಶ ಭಂಡಾರಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಆದರ್ಶ ರೇವಣಕರ ನಿರ್ವಹಿಸಿದರು.