ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಸಂವಿಧಾನ ನೀಡಿರುವ ಪ್ರತಿಯೊಂದು ಹಕ್ಕಿಗೂ ಕೆಲವು ನಿರ್ಬಂಧಗಳಿವೆ ಹಾಗೂ ಕೆಲವು ಷರತ್ತುಗಳಿಗೆ ಒಳಪಟ್ಟು ನಮ್ಮ ಹಕ್ಕುಗಳನ್ನು ಆನಂದಿಸಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಮಾಹಿತಿ ನೀಡಿದರು.ಪಟ್ಟಣದ ಸರ್ಕಾರಿ ಕಾನೂನು ಕಾಲೇಜಿನ ಸಭಾಂಗಣದಲ್ಲಿ ತಾ. ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದಲ್ಲಿ ಸಂವಿಧಾನ ದಿನ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಪೀಠಿಕೆಯನ್ನು ಅವಲೋಕಿಸಿದಾಗ ಮೂರು ಅಂಶಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವನ್ನು ಗಮನಿಸಬಹುದು. ಇವುಗಳು ನಮ್ಮ ಸಂವಿಧಾನದ ಆಧಾರ ಸ್ತಂಭಗಳು. ವಿವಿಧತೆಯಲ್ಲಿ ಏಕತೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸಂವಿಧಾನದ ಪ್ರಸ್ತಾವನೆಯ ಅಂಶಗಳನ್ನು ಅರ್ಥೈಸಿಕೊಂಡು ಪಾಲನೆ ಮಾಡುತ್ತಾ ಸಾಗಿದ್ದಲ್ಲಿ ನಮ್ಮ ವೈಯಕ್ತಿಕ ಅಭಿವೃದ್ಧಿಯ ಜತೆಗೆ ದೇಶವೂ ಅಭಿವೃದ್ಧಿಗೊಂಡು ಭವ್ಯ ರಾಷ್ಟ್ರವಾಗುತ್ತದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಹಲವಾರು ರಾಷ್ಟ್ರಗಳ ಸಂವಿಧಾನವನ್ನು ಅಭ್ಯಾಸ ಮಾಡಿ, ೨ ವರ್ಷ, ೧೧ ತಿಂಗಳು, ೧೭ ದಿನಗಳಲ್ಲಿ ಜಗತ್ತಿನಲ್ಲೇ ಅತ್ಯಂತ ಬೃಹತ್ ಗ್ರಂಥವಾದ ಸಂವಿಧಾನವನ್ನು ರಚಿಸಿ, ನಮಗೆ ನೀಡಿದ್ದಾರೆ ಎಂದು ಸಂವಿಧಾನ ಶಿಲ್ಪಿಯ ಜ್ಞಾನ, ಪಾಂಡಿತ್ಯ ಹಾಗೂ ಶ್ರಮವನ್ನು ಸ್ಮರಿಸಿ, ವಂದಿಸಿದರು.
ಸಿವಿಲ್ ನ್ಯಾಯಾಧೀಶರಾದ ಚೇತನಾ ಮಾತನಾಡಿ, ಯಾವುದೇ ಹಕ್ಕುಗಳು ಇಲ್ಲದೇ, ಜೀತಕ್ಕೆ ಒಳಗಾಗಿ, ಶೋಷಣೆಯನ್ನು ಅನುಭವಿಸುತ್ತಾ ಸಾಮಾನ್ಯರಂತೆ ಹಿಂದಿನ ಜನರು ಬದುಕು ಕಟ್ಟಿಕೊಂಡಿದ್ದರು, ಆದರೆ ಈಗ ಸುಖ, ಶಾಂತಿ, ನೆಮ್ಮದಿ ಹಾಗೂ ಭಯ, ಭೀತಿಯಿಲ್ಲದೇ ನಾವು ಸಂವಿಧಾನ ನೀಡಿದ ಸೌಲಭ್ಯಗಳಿಂದ ಬದುಕು ರೂಪಿಸಿಕೊಂಡಿದ್ದೇವೆ ಎಂಬುದನ್ನು ಅರಿತಾಗ ಸಂವಿಧಾನದ ಮಹತ್ವ ತಿಳಿಯಬಹುದಾಗಿದೆ. ಪ್ರತಿಯೊಬ್ಬ ಮಾನವನ ಬದುಕು ಕಟ್ಟುವ ಶ್ರೇಷ್ಠ ಗ್ರಂಥ ಸಂವಿಧಾನವಾಗಿದೆ. ನಮ್ಮ ಹಕ್ಕುಗಳಿಗೆ ಚ್ಯುತಿ ಉಂಟಾದಾಗ ಕಾನೂನಿನಡಿ ಹೋರಾಟ ಮಾಡುತ್ತೇವೆ, ಜತೆಗೆ ಮೂಲಭೂತ ಕರ್ತವ್ಯದ ಅಂಶಗಳ ಪಾಲನೆ ಮಾಡುವುದು ಅಗತ್ಯವಾಗಿದೆ. ಸಂವಿಧಾನದ ಗ್ರಂಥದಲ್ಲಿ ನಮ್ಮ ಕರ್ತವ್ಯಗಳ ಕುರಿತು ನೀಡಿರುವ ಅಂಶಗಳಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಂಸ್ಕೃತಿಯ ಪಾಲನೆ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಗೌರವ ಮತ್ತು ನಮ್ಮ ದೇಶದ ರಕ್ಷಣೆ ಹಾಗೂ ಇತರೆ ಅಂಶಗಳ ಕುರಿತು ತಿಳಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೋಜು- ಮಸ್ತಿಯಿಂದ ಯತ್ತೇಚ್ಛ ಪ್ಲಾಸ್ಟಿಕ್ ಬಳಕೆ, ನೀರನ್ನು ಕಲೂಷಿತಗೊಳಿಸುವುದು ಹೆಚ್ಚುತ್ತಿದೆ ಮತ್ತು ಪ್ರಾಣಿಗಳಿಗೆ ದಯೆ ತೋರಿಸಿ ಎಂದಿದೆ, ಆದರೆ ಯಾರೂ ಪಾಲನೆ ಮಾಡುತ್ತಿಲ್ಲ, ಶೇ.೧೦೦ರಷ್ಟು ಪಾಲನೆ ಮಾಡಲಾಗದಿದ್ದರೂ, ಶಿಸ್ತಿನಿಂದ ಬದುಕುವುದನ್ನು ರೂಢಿಸಿಕೊಂಡು ನಮ್ಮ ಕೈಲಾದ ಮಟ್ಟಿಗೆ ಪರಿಸರ ರಕ್ಷಣೆ, ನೀರಿನ ಮಿತ ಬಳಕೆ ಮಾಡುವ ಮೂಲಕ ನಮ್ಮ ಕರ್ತವ್ಯಗಳನ್ನು ಪಾಲಿಸುತ್ತಾ ಸಂವಿಧಾನದ ಆಶಯಗಳನ್ನು ಗೌರವಿಸೋಣವೆಂದು ಕರೆಕೊಟ್ಟರು.ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್.ಶ್ರೀನಿವಾಸ ಅವರು ಸಂವಿಧಾನದ ರಚನೆ ಹಾಗೂ ಅನುಚ್ಛೇದಗಳ ಕುರಿತು ಸುದೀರ್ಘವಾಗಿ ಮಾತನಾಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಹಾಗೂ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ಭಾಗ್ಯಲಕ್ಷ್ಮೀ ಎಚ್., ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿನಿ ಐಶ್ವರ್ಯ ಪ್ರಾರ್ಥಿಸಿದರು, ಉಪನ್ಯಾಸಕರಾದ ಮಹಾತೇಂಶ್ ಸ್ವಾಗತಿಸಿದರು, ಸೋಮಶೇಖರ್ ವಂದಿಸಿದರು ಹಾಗೂ ಹರೀಶ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಮಡಿವಾಳಪ್ಪ ಮಾಟೊಳ್ಳಿ ಹಾಗೂ ಗೀತಾ, ನ್ಯಾಯಾಲಯದ ನೌಕರ ಯಶವಂತ್ ಇತರರು ಇದ್ದರು.