ನಮ್ಮ ಸಂವಿಧಾನದಲ್ಲಿ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಹಾಗೂ ಆರ್ಥಿಕ, ಸಾಮಾಜಿಕ, ರಾಜಕೀಯವನ್ನು ಗೌರವಿಸುವ ಜತೆಗೆ ಅನ್ಯರಿಗೆ ನೋವಾಗದಂತೆ ಸರ್ವರಿಗೂ ಧರ್ಮ, ಜಾತಿ ಆಚಾರ ವಿಚಾರಗಳನ್ನು ಆಚರಿಸಲು ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ.
ಶಿರಹಟ್ಟಿ: ಭಾರತದ ಸಂವಿಧಾನ ಪ್ರಜಾಪ್ರಭುತ್ವದ ತಾಯಿಬೇರು ಮತ್ತು ವಿಶ್ವಕ್ಕೆ ಮಾದರಿಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಕೋಟ್ಯಂತರ ಭಾರತೀಯರನ್ನು ಒಂದು ವ್ಯವಸ್ಥೆಯಲ್ಲಿ ತರುವ ಮೂಲಕ ಅತ್ಯುತ್ತಮ ಪ್ರಜಾತಂತ್ರ ರೂಪಿಸಲು ಈ ಸಂವಿಧಾನ ಕಾಣಿಕೆಯಾಗಿ ನೀಡಿದ್ದಾರೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ಸಂವಿಧಾನದಲ್ಲಿ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಹಾಗೂ ಆರ್ಥಿಕ, ಸಾಮಾಜಿಕ, ರಾಜಕೀಯವನ್ನು ಗೌರವಿಸುವ ಜತೆಗೆ ಅನ್ಯರಿಗೆ ನೋವಾಗದಂತೆ ಸರ್ವರಿಗೂ ಧರ್ಮ, ಜಾತಿ ಆಚಾರ ವಿಚಾರಗಳನ್ನು ಆಚರಿಸಲು ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ ಎಂದರು.ಮುಖಂಡ ಡಿ.ಕೆ. ಹೊನ್ನಪ್ಪನವರ ಮಾತನಾಡಿ, ಸಂವಿಧಾನ ಎಂಬುದು ಜೀವ ಸಂಕುಲಗಳ ಬದುಕನ್ನು ರಕ್ಷಿಸುತ್ತಾ ಘನತೆಯ ಬದುಕನ್ನು ಕಟ್ಟಿಕೊಡುವ ಆಡಳಿತಾತ್ಮಕ ಕಾನೂನು. ಇಂತಹ ಮಾನವೀಯ ಸಂವಿಧಾನಕ್ಕಾಗಿ ಜಗತ್ತಿನಾದ್ಯಂತ ಹಲವಾರು ಕ್ರಾಂತಿಗಳು ಜರುಗಿವೆ. ಸಂವಿಧಾನ ಸಮಾನತೆ, ಭ್ರಾತೃತ್ವ, ರಾಷ್ಟ್ರೀಯ ಏಕತೆ ತರುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಇಒ ರಾಮಣ್ಣ ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ಲಮಾಣಿ, ಬಿಇಒ ಎಚ್.ಎನ್. ನಾಯಕ, ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ಡಾ. ಉಮೇಶ ಅರಹುಣಸಿ, ಸಂದೀಪ ಕಪ್ಪತ್ತನವರ, ಫಕ್ಕಿರೇಶ ರಟ್ಟಿಹಳ್ಳಿ, ರಾಮಣ್ಣ ಕಂಬಳಿ, ನಂದಾ ಪಲ್ಲೇದ, ಶಿರಸ್ತೇದಾರ ಗಿರಿಜಾ ಪೂಜಾರ, ಎಚ್.ಜೆ. ಭಾವಿಕಟ್ಟಿ, ಸಂತೋಷ ಅಸ್ಕಿ, ಎಸ್.ಬಿ. ಕಡಬಿನ, ರಾಜು ಶಿರಹಟ್ಟಿ, ಪ್ರಶಾಂತ ಕುಲಕರ್ಣಿ, ಪವನಕುಮಾರ ಈಳಗೇರ ಸೇರಿ ಅನೇಕರು ಇದ್ದರು.