ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವತಂತ್ರವಾಗಿ ಬದುಕುವ ಹಕ್ಕು ಒದಗಿಸಿರುವ ಸಂವಿಧಾನವನ್ನು ನಾವು ಗೌರವಿಸಿದರೆ, ಸಂವಿಧಾನವು ನಮ್ಮನ್ನು ಗೌರವಿಸುತ್ತದೆ ಎಂದು ತಹಸೀಲ್ದಾರ್ ಸ್ಮಿತಾ ರಾಮು ತಿಳಿಸಿದರು.ತಾಲೂಕಿನ ಕಸಬಾ ಹೋಬಳಿಯ ಚಿಕ್ಕಮುದುವಾಡಿ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆಂದರೆ ಅದು ಅಂಬೇಡ್ಕರ್ ಸಂವಿಧಾನದಿಂದ ಸಾಧ್ಯವಾಗಿದೆ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ಸಂವಿಧಾನ ರಚಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ, ಭಾರತ ಪ್ರತಿಯೊಂದು ಧರ್ಮದ ಜನರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸುವ ಸಂವಿಧಾನವನ್ನು ರಚಿಸುವುದು ಅಂಬೇಡ್ಕರ್ ರಿಗೆ ಸವಾಲಾಗಿತ್ತು.ಅವರು ಸರ್ವಸ್ವವನ್ನೂ ತ್ಯಾಗ ಮಾಡಿ ಸಂವಿಧಾನ ರಚಿಸಿದ್ದಾರೆ ಎಂದರು.ಅಂಬೇಡ್ಕರ್ ಹೋರಾಟ, ಜೀವನ ಚರಿತ್ರೆ ಹಾಗೂ ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು. ಸಂವಿಧಾನ ಮೌಲ್ಯವನ್ನು ತಿಳಿದುಕೊಳ್ಳಬೇಕು. ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ನಿರ್ಮೂಲನೆಗೊಳಿಸಬೇಕು,ಸಂವಿಧಾನವನ್ನು ನಾವೆಲ್ಲರೂ ರಕ್ಷಿಸಬೇಕು ಎಂದು ಕರೆಕೊಟ್ಟರು.
ದಲಿತ ಮುಖಂಡ ಮಲ್ಲಿಕಾರ್ಜುನ್ ಮಾತನಾಡಿ, ಸಂವಿಧಾನದ ಉದ್ದೇಶಗಳನ್ನು ಸಾರ್ವಜನಿಕರಿಗೆ ಅರಿವು ಮೂಡಿಸಲು ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿದೆ. ಸಾವಿರಾರು ವರ್ಷಗಳ ಹಿಂದೆ ಈ ದೇಶದಲ್ಲಿ ಒಂದು ಅಲಿಖಿತ ಸಂವಿಧಾನ ಜಾರಿಗೊಳಿಸಿ ಮನುಷ್ಯರನ್ನು ನಾಲ್ಕು ವರ್ಣಗಳಾಗಿ ವಿಂಗಡಿಸಿ, ಅದರಲ್ಲಿ (6) ಸಾವಿರ ಜಾತಿ, ಒಂದು ಲಕ್ಷ ಉಪಜಾತಿಗಳನ್ನು ಮಾಡಿ ದೇಶದಲ್ಲಿ ಅಸ್ಪೃಶ್ಯತೆಯನ್ನು ಆಚರಣೆಗೆ ತಂದರು. ನಂತರ ದೇಶದಲ್ಲಿ ಸ್ವಾತಂತ್ರ ಚಳುವಳಿ ಹೋರಾಟ ಪ್ರಾರಂಭವಾದಾಗ ದೇಶದ ದಲಿತರು, ಅಸ್ಪೃಶ್ಯರು,ಹಿಂದುಳಿದ ಜಾತಿಗಳಿಗೆ ಮತದಾನದ ಹಕ್ಕನ್ನು ಕೊಡಬಾರದು ಎಂದು ಆಕ್ಷೇಪಣೆ ಮಾಡಿದರು. ಆಗ ಡಾ. ಅಂಬೇಡ್ಕರ್ ಹೋರಾಡಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ತಂದುಕೊಟ್ಟರು ಎಂದರು.ಭಾರತ ವಿಭಜನೆಯಾದಾಗ ವಿರೋದ ನಡುವೆಯೂ ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯನ್ನು ಸೇರಿ, ಅಂಬೇಡ್ಕರ್ ಒಬ್ಬರೇ ಬೇರೆ ಬೇರೆ ದೇಶದ ಸಂವಿಧಾನಗಳನ್ನು ಅಭ್ಯಸಿಸಿ ಈ ದೇಶಕ್ಕೆ ಸಂವಿಧಾನ ರಚಿಸಿ ಕೊಟ್ಟಿದ್ದಾರೆ ಎಂದರು.
ಚಿಕ್ಕಮುದವಾಡಿ ಗ್ರಾಪಂ ವ್ಯಾಪ್ತಿಯ ಚಿಕ್ಕೇನಹಳ್ಳಿ ಗ್ರಾಮಕ್ಕೆ ಆಗಮಿಸಿದ ಜಾಗೃತಿ ರಥಯಾತ್ರೆಯನ್ನು ತಹಸೀಲ್ದಾರ್ ಸ್ಮಿತಾರಾಮು ನೇತೃತ್ವದಲ್ಲಿ ಗ್ರಾಪಂ ಸದಸ್ಯರು, ಮಹಿಳೆಯರು ಪೂರ್ಣ ಕುಂಭ ಕಳಶದೊಂದಿಗೆ ಅದ್ಧೂರಿ ಸ್ವಾಗತ ಕೋರಿದರು.ಜಾನಪದ ಕಲಾತಂಡಗಳೊಂದಿಗೆ ಚಿಕ್ಕ ಮುದುವಾಡಿ ಸರ್ಕಾರಿ ಶಾಲೆ ಆವರಣದವರೆಗೂ ಜಾಥಾ ನಡೆಸಿ ವಾಸ್ತವ್ಯ ಹೂಡಿದ್ದರು. ಬುಧವಾರ ಬೆಳಗ್ಗೆ ಚಿಕ್ಕ ಮುದವಾಡಿ ಗ್ರಾಮಸ್ಥರು, ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಸಂವಿಧಾನ ಜಾಗೃತಿ ಜಾಥಾ ನಡೆಸಿದರು.
ಚಿಕ್ಕಮುದುವಾಡಿ ಗ್ರಾಪಂಅಧ್ಯಕ್ಷ ಲಿಂಗೇಗೌಡ, ಉಪಾಧ್ಯಕ್ಷೆ ಜಯಮ್ಮ, ಸಮಾಜ ಕಲ್ಯಾಣ ಇಲಾಖೆ ಜಯಪ್ರಕಾಶ್, ಇಒ ಭೈರಪ್ಪ, ತೋಟಗಾರಿಕೆ ಇಲಾಖೆಯ ಶ್ರೀನಿವಾಸ್, ಪಶುಸಂಗೋಪನೆ ಇಲಾಖೆಯ ಕುಮಾರ್, ರೇಷ್ಮೆ ಇಲಾಖೆಯ ಮುತ್ತುರಾಜು, ಎಡಿ ಎಲ್. ಆರ್. ನಂದೀಶ್, ಚಿಕ್ಕ ಮುದುವಾಡಿ ಪಿಡಿಒ ಭೈರಾಜು, ಗ್ರಾಪಂ ಸದಸ್ಯರು, ದಲಿತ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))