ಏಕತೆಯ ಭಾರತಕ್ಕೆ ಸಂವಿಧಾನವೇ ದಾರಿದೀಪ: ಸಚಿವ ಸಂತೋಷ ಲಾಡ್‌

| Published : Jan 27 2025, 12:48 AM IST

ಏಕತೆಯ ಭಾರತಕ್ಕೆ ಸಂವಿಧಾನವೇ ದಾರಿದೀಪ: ಸಚಿವ ಸಂತೋಷ ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಜಿಲ್ಲಾಡಳಿತ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲಾಯಿತು.

ಧಾರವಾಡ: ಏಕತೆಯ ಭಾರತಕ್ಕೆ ಭಾರತ ರತ್ನ ಡಾ. ಅಂಬೇಡ್ಕರ್ ಸಂವಿಧಾನವೇ ದಾರಿದೀಪ. ದೇಶದ ಪ್ರತಿಯೊಬ್ಬ ನಾಗರಿಕರು ಸಂವಿಧಾನ ಗೌರವಿಸುವ ಜೊತೆ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಜಿಲ್ಲಾಡಳಿತ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.

ದೇಶದ ಇತಿಹಾಸದಲ್ಲಿ ಆಗಸ್ಟ್‌ 15 ಹಾಗೂ ಜನವರಿ 26 ಅತ್ಯಂತ ಮಹತ್ವದ ದಿನಗಳು. ಈ ಎರಡು ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವುದು ದೇಶದ ಪ್ರತಿ ನಾಗರಿಕನ ಕರ್ತವ್ಯ. ದೇಶದ ನಾಗರಿಕರು ಸಂವಿಧಾನ ಪಾಲಿಸುವ ಮೂಲಕ ಸಾಮಾಜಿಕ ಸಾಮರಸ್ಯ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಬೆಳೆಯುತ್ತಿರುವ ಭಾತರವನ್ನು ಮತ್ತಷ್ಟು ಅಭಿವೃದ್ಧಿ ಕಡೆಗೆ ಸಾಗಿಸೋಣ ಎಂದರು.

ಭಾರತ ಸಾಕಷ್ಟು ಆರ್ಥಿಕ ಸುಧಾರಣೆ ಮತ್ತು ಯಶಸ್ಸು ಕಂಡರೂ, ಬಡತನ ಮತ್ತು ನಿರುದ್ಯೋಗದಂತಹ ಸವಾಲುಗಳು ನಮ್ಮನ್ನು ಇಂದಿಗೂ ಕಾಡುತ್ತಿವೆ. ಈ ಸವಾಲು ಎದುರಿಸಿ ಹೊರಬರುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಗ್ಯಾರಂಟಿ ಪ್ರಗತಿ

ರಾಜ್ಯ ಸರ್ಕಾರ ಬಡವರ ಏಳಿಗೆಗಾಗಿ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 3.22 ಲಕ್ಷ ಮಹಿಳೆಯರು ನಿತ್ಯ ಉಚಿತವಾಗಿ ಪ್ರಯಾಣ ಮಾಡಿದ್ದು, ₹67.33 ಲಕ್ಷ ಮೊತ್ತದ ಸೇವೆ ಪಡೆಯುತ್ತಿದ್ದಾರೆ. ಇಲ್ಲಿ ವರೆಗೆ ₹383.75 ಕೋಟಿ ಶಕ್ತಿ ಯೋಜನೆಗೆ ವೆಚ್ಚವಾಗಿದೆ. ಗೃಹಲಕ್ಷ್ಮೀಯಲ್ಲಿ 3,87,201 ಮಹಿಳೆಯರಿಗೆ ₹1,065 ಕೋಟಿ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ 3,50,324 ಕುಟುಂಬಗಳ ಪ್ರತಿ ಸದಸ್ಯರಿಗೆ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಹಾಗೂ ತಲಾ ₹170 ಕೋಟಿ ನೇರವಾಗಿ ಡಿ.ಬಿ.ಟಿ. ಮೂಲಕ ನೀಡಲಾಗಿದೆ. ಯುವ ನಿಧಿ ಯೋಜನೆಯಲ್ಲಿ 4,388 ಫಲಾನುಭವಿಗಳಿಗೆ ₹5.77 ಕೋಟಿ ನೆರವನ್ನು ನೀಡಲಾಗಿದೆ ಎಂದು ಸಚಿವ ಲಾಡ್‌ ವಿವಿರಿಸಿದರು.

ನಂತರ ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಜಿಲ್ಲಾಧಿಕಾರಿ ದಿವ್ಯ ಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಪಂ ನೂತನ ಸಿಇಒ ಭುವನೇಶ ಪಾಟೀಲ, ಎಸಿ ಶಾಲಂ ಹುಸೇನ್, ಡಾ. ಗೋಪಾಲ ಬ್ಯಾಕೋಡ, ಪೊಲೀಸ್ ಆಯುಕ್ತ ಶಶಿ ಕುಮಾರ ಇದ್ದರು.

ಪಥಸಂಚಲನ ವಿಜೇತರು

ಗಣರಾಜ್ಯೋತ್ಸವದಲ್ಲಿ ವಿವಿಧ ಇಲಾಖೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ, ಗಮನ ಸೆಳೆದರು. ಇದರಲ್ಲಿ ಎನ್.ಎ. ಮುತ್ತಣ್ಣ ಪೊಲೀಸ್ ಮಕ್ಕಳ ಶಾಲೆ ಪ್ರಥಮ, ಸೇಂಟ್ ಜೋಸೆಫ್‌ ಶಾಲೆಯು ದ್ವಿತೀಯ, ಕೆ.ಎನ್.ಕೆ. ಹೈಸ್ಕೂಲ್ ಶಾಲೆ ತೃತೀಯ ಸ್ಥಾನ ಗಳಿಸಿ, ಬಹುಮಾನ ಪಡೆದವು.

ಗಣ್ಯರಿಗೆ ಸನ್ಮಾನ

ಗಣರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ, ತಮ್ಮ ಅಂಗಾಂಗ ದಾನ ಮಾಡಿದ ದಿ. ರೋಹಿತ ಕುಂಬಾರ ಕುಟುಂಬಕ್ಕೆ, ಮಾನವ ಸರಪಳಿಯಲ್ಲಿ ವಿಶೇಷ ಸೇವೆಗೆ ಸಿದ್ಧಾರೋಢ ಟ್ರಸ್ಟ್‌ಗೆ ಮತ್ತು ಇಸ್ಕಾನ್‌ ಸಂಸ್ಥೆಗಳಿಗೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಸನ್ಮಾನಿಸಿ, ಪ್ರಮಾಣ ಪತ್ರದೊಂದಿಗೆ ಗೌರವಿಸಿದರು.

ಭಾಷಣ ಸ್ಪರ್ಧೆಯ ವಿಜೇತರು

ಗಣರಾಜ್ಯೋತ್ಸವದ ನಿಮಿತ್ತ ಜಿಲ್ಲಾಡಳಿತ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ಜಿಲ್ಲಾಮಟ್ಟದಲ್ಲಿ ವಿಜೇತರಾದ ಕೆ.ಜೆ.ಎಸ್. ಗರಗ ಶಾಲೆಯ ಸಂಜನಾ ಕರಲಿಂಗನವರ, ಬೆಂಗೇರಿ ಸೇಂಟ್ ಮೈಕಲ್ ಶಾಲೆಯ ಧ್ವನಿ ಪವಾರ, ಭಾರದ್ವಾಡದ ಸರ್ಕಾರಿ ಶಾಲೆಯ ತಹಶೀನ ಅತ್ತಾರ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿ.ಎಚ್.ಎಸ್. ಕುರವಿನಕೊಪ್ಪ ಶಾಲೆಯ ದೇವಕ್ಕ ರಾಮಜಿ, ದಾಸ್ತಿಕೊಪ್ಪದ ಆದರ್ಶ ವಿದ್ಯಾಲಯ ಶಾಲೆಯ ಸಂಜನಾ ಧನಿಗೊಂಡ, ಕಲಘಟಗಿಯ ಸ.ಉ.ಹಿ.ಪ್ರಾ. ಶಾಲೆಯ ಸೈನಾಜ ಗುರನಳ್ಳಿಗೆ ಪ್ರಶಸ್ತಿ ವಿತರಿಸಲಾಯಿತು.