ಭಾರತದ ಸಂವಿಧಾನ ಅಂಬೇಡ್ಕರ್ ದೂರದೃಷ್ಟಿಗೆ ಸಾಕ್ಷಿ

| Published : Apr 15 2025, 12:55 AM IST

ಭಾರತದ ಸಂವಿಧಾನ ಅಂಬೇಡ್ಕರ್ ದೂರದೃಷ್ಟಿಗೆ ಸಾಕ್ಷಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರ: ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಸಾಧ್ಯವಾಗಿರುವುದು ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನದಿಂದ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಸಾಗರ: ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಸಾಧ್ಯವಾಗಿರುವುದು ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನದಿಂದ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ತಾಲೂಕು ಆಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ, ಸಮಾನತೆಗೆ ಒತ್ತು ನೀಡಿರುವ ಸಂವಿಧಾನ ಡಾ.ಅಂಬೇಡ್ಕರ್ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದರು.

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ವರ್ಗಗಳ ಶ್ರೇಯೋಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಖ್ಯಮಂತ್ರಿಗಳು ಜಾಡಮಾಲಿ ಎಂಬ ಪದವನ್ನು ತೆಗೆದು ಹಾಕಿ, ಪೌರಕಾರ್ಮಿಕರು ಎಂದು ಸಂಬೋಧಿಸಲು ಸೂಚನೆ ನೀಡಿದ್ದಾರೆ. ಪೌರಕಾರ್ಮಿಕರನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ವರ್ಗದವರು ಸರ್ಕಾರಿ ಸೌಲಭ್ಯವನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ತತ್ವಾದರ್ಶ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.

ಡಾ.ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದ ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಅಣ್ಣಪ್ಪ ಎನ್.ಮಳೀಮಠ್, ಡಾ.ಅಂಬೇಡ್ಕರ್ ಭಾರತದ ಭಾಗ್ಯವಿಧಾತ. ನೆಲದ ದನಿಯಾಗಿ ಶೋಷಿತ ಸಮುದಾಯಕ್ಕೆ ಅನ್ನ ಮತ್ತು ಅಕ್ಷರ ನೀಡಿದವರು. ದಲಿತ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು. ಅಂಬೇಡ್ಕರ್ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಡಾ.ಬಾಬು ಜಗಜೀವನರಾಮ್ ಕುರಿತು ಉಪನ್ಯಾಸಕ ಸತೀಶ್ ಕೃಷ್ಣ ತೀರ್ಥಹಳ್ಳಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ತಹಸೀಲ್ದಾರ್ ಚಂದ್ರಶೇಖರ ನಾಯ್ಕ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ತಾಲೂಕು ಪಂಚಾಯ್ತಿ ಇಒ ಶಿವಪ್ರಕಾಶ್, ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ರೇವಪ್ಪ ಹೊಸಕೊಪ್ಪ, ನಾಗರಾಜ್, ಲಕ್ಷ್ಮಣ ಸಾಗರ್ ಇನ್ನಿತರರು ಇದ್ದರು. ಸುರೇಶ್ ಸಹನೆ ಸ್ವಾಗತಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.

ನಗರಸಭೆ ವಿರುದ್ಧ ಪ್ರತಿಭಟನೆ ತಾಲೂಕು ಆಡಳಿತದಿಂದ ನಡೆಸುವ ಅಂಬೇಡ್ಕರ್ ಜಯಂತಿ ಬಿಟ್ಟು ಖಾಸಗಿ ಸಂಘವೊಂದು ನಡೆಸುತ್ತಿರುವ ಅಂಬೇಡ್ಕರ್ ಜಯಂತಿಗೆ ಪೌರಾಯುಕ್ತ ನಾಗಪ್ಪ ಬೆಂಬಲ ಸೂಚಿಸಿ, ಮೊದಲು ಆ ಕಾರ್ಯಕ್ರಮಕ್ಕೆ ಶಾಸಕರಾದಿಯಾಗಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಿರುವುದಕ್ಕೆ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ದಿಢೀರನೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಇದಕ್ಕೆ ವಿರುದ್ಧವಾಗಿ ಪೌರಾಯುಕ್ತರ ಪರವಾಗಿ ಅಂಬೇಡ್ಕರ್ ಯುವಕ ಸಂಘದ ಕಾಯಕರ್ತರು ಘೋಷಣೆ ಕೂಗಿದರು. ಕ್ಷಣಕಾಲ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ನಾಗರಾಜ್, ರೇವಪ್ಪ, ಲಕ್ಷ್ಮಣ ಸಾಗರ್ ಇನ್ನಿತರರು ಪೌರಾಯುಕ್ತ ನಾಗಪ್ಪ ವಿರುದ್ಧ ಘೋಷಣೆ ಕೂಗಿದರು. ಬಳಿಕ ಶಾಸಕರು ಪರಿಸ್ಥಿತಿಯನ್ನು ನಿಭಾಯಿಸಿ, ದಲಿತ ಮುಖಂಡರನ್ನು ಸಮಾಧಾನಪಡಿಸಿದರು.