ಹಾವೇರಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ನಡೆಯಿತು. ಹಾವೇರಿ ನಗರದಲ್ಲಿ ಜಾಥಾ ನಡೆಯಿತು.
ಹಾವೇರಿ: ಭಾರತ ಸಂವಿಧಾನ ಈ ದೇಶದ ಧರ್ಮಗ್ರಂಥ ಇದ್ದಂತೆ ಎಂದು ಬ್ಯಾಡಗಿ ಶಾಸಕ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಪರಿಶಿಷ್ಟ ಜಾತಿಗಳ ಒಕ್ಕೂಟಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಹಲವಾರು ಜಾತಿ, ಭಾಷೆ, ವೈವಿಧ್ಯಮಯವಾದ ಸಂಸ್ಕೃತಿ ಹಾಗೂ ಆಚರಣೆಗಳಿಂದ ಕೂಡಿದ ಈ ದೇಶದ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಸೇರಿದಂತೆ ಸಮಾನತೆ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ ಎಂದು ಹೇಳಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನ ಓದಬೇಕು ಹಾಗೂ ಸಂವಿಧಾನದಲ್ಲಿ ನೀಡಿದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಸಂವಿಧಾನ ಗೌರವಿಸಬೇಕು ಎಂದು ಕರೆ ನೀಡಿದರು.
ಉಪನ್ಯಾಸಕರಾಗಿ ಭಾಗವಹಿಸಿದ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಟಿ. ಬಾಗಲಕೋಟ ಮಾತನಾಡಿ, ಭಾರತ ಸಂವಿಧಾನ ವಿಶಿಷ್ಟವಾಗಿದೆ, ಸಂವಿಧಾನ ಪ್ರತಿಯೊಬ್ಬರಿಗೂ ಘನತೆಯ ಜೀವನ ಕಟ್ಟಿಕೊಟ್ಟಿದೆ. ನಮ್ಮ ಪರಂಪರೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದೆ. ಸಾರ್ವತ್ರಿಕ ಮತದಾನದ ಹಕ್ಕು ನೀಡಿದೆ. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಯಾವ ರೀತಿ ನಡೆಯಬೇಕು ಎಂದು ಉಲ್ಲೇಖಿಸಿದೆ. ಪ್ರತಿಯೊಬ್ಬರೂ ಸಂವಿಧಾನ ಓದಿ ತಿಳಿದುಕೊಳ್ಳಬೇಕು. ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು.
ಪೀಠಿಕೆ ವಾಚನ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ ಅವರು ಭಾರತದ ಸಂವಿಧಾನದ ಪೂರ್ವ ಪೀಠಿಕೆ ವಾಚಿಸಿದರು.ಬಹುಮಾನ ವಿತರಣೆ: ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಲಾದ ರಂಗೋಲಿ, ಚಿತ್ರಕಲಾ, ಛಾಯಾಚಿತ್ರ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಮೈದೂರ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್, ಉಪವಿಭಾಗಾಧಿಕಾರಿ ಕಲ್ಯಾಣ ಕಾಂಬ್ಳೆ, ತಹಸೀಲ್ದಾರ್ ಶರಣಮ್ಮ, ಮುಖಂಡರಾದ ಬಸವರಾಜ ಹೆಡಿಗ್ಗೊಂಡ, ಉಡಚಪ್ಪ ಮಾಳಗಿ, ಹೊನ್ನಪ್ಪ ತಗಡಿನಮನಿ, ಎನ್.ಬಿ. ಕಾಳೆ, ಮಾಲತೇಶ ಯಲ್ಲಾಪುರ, ಬಸವರಾಜ ಹಾದಿಮನಿ, ಭೀಮಪ್ಪ ಯಲ್ಲಾಪುರ, ಮಂಜುನಾಥ ಸಣ್ಣಿಂಗಣ್ಣನವರ, ಮಂಜುನಾಥ ಪಾಟೀಲ, ನವೀನ ಸಿದ್ದಣ್ಣನವರ, ಅಶೋಕ ಮರೆಯಣ್ಣನವರ, ವಿಭೂತಿಶೆಟ್ಟರ, ಮಂಜಪ್ಪ ಮರೋಳ, ಸುಭಾಸ ಚವ್ಹಾಣ, ಸುನೀಲ ಬೆಟಗೇರಿ, ದಯಾನಂದ ಸುತ್ತಕೋಟಿ, ಗುಡ್ಡಪ್ಪ ನೆಲೋಗಲ್, ರಮೇಶ ಆನವಟ್ಟಿ, ಸಂಜಯಗಾಂಧಿ ಇತರರು ಇದ್ದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ ಸ್ವಾಗತಿಸಿದರು. ಸಂವಿಧಾನ ಪುಸ್ತಕದೊಂದಿಗೆ ನಗರದಲ್ಲಿ ಜಾಥಾ: ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಾಥಾಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್. ಅವರು ಚಾಲನೆ ನೀಡಿದರು. ರಾಷ್ಟ್ರಧ್ವಜ ಪ್ರದರ್ಶನದೊಂದಿಗೆ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸುವ ಮೂಲಕ ಜಾಥಾ ನಗರದ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಿಂದ ಡಿಸಿ ಆಫೀಸ್ ರಸ್ತೆ ಮೂಲಕ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ, ಪಿ.ಬಿ. ರಸ್ತೆ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಭವನದ ವರೆಗೆ ಜರುಗಿತು.