ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಎಲ್ಲ ಗ್ರಂಥಗಳಿಗಿಂತ ದೊಡ್ಡಗ್ರಂಥವಾಗಿದೆ ಎಂದು ಜಿಪಂ.ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾ ಚಿತ್ರಕಲಾವಿದರ ಸಂಘ, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಹಾಗೂ ಪವನ್ ಸೇವಾ ಟ್ರಸ್ಟ್ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ೨ ದಿನಗಳ ನಡೆದ ರಾಷ್ಟ್ರಮಟ್ಟದ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬುದ್ದ, ಅಂಬೇಡ್ಕರ್‌ರರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಸಲ್ಲಸಿ ಮಾತನಾಡಿದರು. ಸಂವಿಧಾನ ಜಾಗೃತಿ ಜಾಥಾ ಕರ್ನಾಟಕದಲ್ಲಿ ಮಾತ್ರ ಮಾಡಿದರೆ ಸಾಲದು ಇಡೀ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಆಗಬೇಕು ಎಂದರು.ನಗರಪ್ರದೇಶ, ಗ್ರಾಪಂ ಕೇಂದ್ರ, ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ಕೆಲವೇ ಬಡಾವಣೆಗಲ್ಲಿ ಸಂವಿಧಾನ ಜಾಗೃತಿ ಜಾಥಾ ಮಾಡಿದರೆ ಸಂವಿಧಾನದ ಆಶಯಗಳು ಎಲ್ಲರಿಗೂ ತಲುಪಲ್ಲ. ಆಗಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಎಲ್ಲ ಗ್ರಾಮಗಳು, ಬಡಾವಣೆಗಳಿಗೂ ಜಾಗೃತಿ ಜಾಥಾ ಮಾಡುವ ಮೂಲಕ ಸರ್ವರಿಗೂ ಸಂವಿಧಾನದ ಜಾಗೃತಿ ಮೂಡಿಸುವಂತಾಗಬೇಕು ಎಂದರು. ರಾಷ್ಟ್ರ ಮಟ್ಟದ ಚಿತ್ರಕಲಾ ಶಿಬಿರದಲ್ಲಿ ಜಿಲ್ಲೆಯ ಕಲಾವಿದರ ಪರಿಶ್ರಮದಿಂದ ಸಂವಿಧಾನದ ಆಶಯಗಳು, ಅಂಬೇಡ್ಕರ್ ಜೀವನ ಚರಿತ್ರೆಗೆ ಸಂಬಂಧಿಸಿದ ಚಿತ್ರಗಳು ಚೆನ್ನಾಗಿ ಮೂಡಿಬಂದಿರುವುದು ತುಂಬಾ ಸಂತಸವಾಗಿದೆ. ಶಿಬಿರದಲ್ಲಿ ಭಾಗವಹಿಸಿರುವ ಕಲಾವಿದರು ಮುಂದಿನ ದಿನಗಳಲ್ಲಿ ನಡೆಯುವ ರಾಜ್ಯ, ರಾಷ್ಟಮಟ್ಟದ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಲಿ ಎಂದು ಆಶಿಸಿದರು. ಮೈಸೂರು ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ಪ್ರಾಂಶುಪಾಲ ಕೆ.ಸಿ.ಮಹದೇವಶೆಟ್ಟಿ ಮಾತನಾಡಿ, ಎಲ್ಲ ಸಾಹಿತ್ಯದ ತಾಯಿ ಚಿತ್ರಕಲೆ. ಚಿತ್ರಕಲೆ ಮೂಲಕ ಎಲ್ಲ ಭಾಷೆಗಳ ಉಗಮವಾದದ್ದು, ಧರ್ಮಗಳು ಬೆಳೆದದ್ದು. ಚಿತ್ರಕಲೆಗೆ ಅದರದೆಯಾದಂತಹ ವ್ಯಕ್ತಿತ್ವ, ದೊಡ್ಡಶಕ್ತಿ ಇದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎನ್ನುತ್ತಾರೆ. ಸಂವಿಧಾನದ ಆಶಯವನ್ನ ಚಿತ್ರಕಲಾವಿದರು ತಮ್ಮ ಕೈ ಚಳಕದ ಮೂಲಕ ವ್ಯಕ್ತಪಡಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಮಾತನಾಡಿ, ರಾಜ್ಯ, ದೇಶದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರಗಳು ಸಂವಿಧಾನ ಆಶಯಗಳ್ನು ಚಾಚು ತಪ್ಪದೆ ಜಾರಿಗೊಳಿಸಿದಾಗ ನಮ್ಮ ಭವಿಷ್ಯದ ಭವ್ಯಭಾರತ ಕಟ್ಟಲು ಸಾಧ್ಯವಾಗುತ್ತದೆ ಎಂದರು. ಸಂವಿಧಾನದ ಪೀಠಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಇಡೀ ಸಂವಿಧಾನ ಓದಿದಂತೆ. ಸಂವಿಧಾನವನ್ನು ಅರ್ಥಮಾಡಿಕೊಂಡಿದ್ದರೆ ನಮ್ಮಲ್ಲಿ ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆಯಾಗಲಿ, ಜಾತಿ, ಧರ್ಮ ಸಂಘರ್ಷ ಇರುತ್ತಿರಲಿಲ್ಲ. ಸಂವಿಧಾನವನ್ನ ಅರ್ಥಮಾಡಿಕೊಳ್ಳುವುದರಲ್ಲಿ ವಿಫಲವಾಗಿರುವ ಕಾರಣದಿಂದ ಜಾತಿ ಜಾತಿ ನಡುವೇ, ಧರ್ಮ ಧರ್ಮ ನಡುವೆ ಸಂಘರ್ಷ ಮನುಷ್ಯ ಮನುಷ್ಯರ ನಡುವೆ ಅಸಮಾನತೆ ಕಾಣುತ್ತೇವೆ. ಇದು ತೊಲಗಬೇಕಾದರೆ, ದೇಶ ಏಕತೆಯಲ್ಲಿ ಸಾಗಬೇಕಾದರೆ ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು. ಸಂವಿಧಾನ ಎಂಬುವುದು ಅವಿರತ ಶಕ್ತಿಯಾಗಿ ನಮ್ಮ ಹಿಂದೆ ಕೆಲಸ ಮಾಡುತ್ತದೆ. ಅದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಈಗಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದರು.
ಗಮನ ಸೆಳೆದ ಚಿತ್ರಕಲಾ ಶಿಬಿರ: ಚಿತ್ರಕಲಾ ಶಿಬಿರದಲ್ಲಿ ಕಲಾವಿದರ ಪರಿಶ್ರಮದಿಂದ ಕ್ಯಾನ್ವಾಸ್ ಮೇಲೆ ಸಂವಿಧಾನದ ಆಶಯಗಳು, ಡಾ.ಬಿ.ಆರ್.ಅಂಬೇಡ್ಕರ್‌ರವರ ಜೀವನ ಜೀವನ ಚರಿತ್ರೆಯ ಚಿತ್ರಗಳು ವೀಕ್ಷಕರ ಗಮನ ಸೆಳೆಯಿತು. ಅಂತಾರಾಷ್ಟ್ರೀಯ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮತ್ತು ತಂಡ ನಡೆಸಿಕೊಟ್ಟ ಅಂಬೇಡ್ಕರ್ ಜೀವನ ಚರಿತ್ರೆ, ಸಂವಿಧಾನದ ಆಶಯಗಳ ಗೀತಾಗಾಯನ ಕಾರ್ಯಕ್ರಮ ಮನಸೆಳೆಯಿತು. ಇದೇ ಸಂದರ್ಭದಲ್ಲಿ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಚಿತ್ರಕಲಾವಿದರಿಗೆ ಪ್ರಶಸ್ತಿಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಸದಸ್ಯ ಮಹಮ್ಮದ್ ಅಸ್ಗರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಶ್ರೀರಾಮಚಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ, ಜಿಲ್ಲಾ ಚಿತ್ರಕಲಾವಿದರ ಸಂಘ ಗೌರವಾಧ್ಯಕ್ಷ ಮಹದೇವ್, ಜಿಲ್ಲಾ ಚಿತ್ರಕಲಾವಿದರ ಸಂಘ ಅಧ್ಯಕ್ಷ ರವಿತೇಜ್ ಸ್ವಾಗತಿಸಿದರು. ಪವನ್ ಸೇವಾ ಟ್ರಸ್ಟ್ ಸಂಪತ್ ಕುಮಾರ್ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಅನಿಲ್ ಕುಮಾರ್ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.